ಬೆಂಗಳೂರು,ಡಿಸೆಂಬರ್,10,2020(www.justkannada.in) : ಕ್ರಿಕೆಟ್ ಆಡುವ ವಿಚಾರಕ್ಕೆ ಯುವಕರ ಎರಡು ಗುಂಪುಗಳ ನಡುವೆ ಉಂಟಾದ ಗಲಾಟೆಯಲ್ಲಿ ಒಬ್ಬಾತನಿಗೆ ಚೂರಿ ಇರಿತವಾಗಿದೆ.
ಈ ಘಟನೆಯು ಬನಶಂಕರಿ ಸಮೀಪದ ಇಟ್ಟುಮಡು ಎಂಬಲ್ಲಿ ನಡೆದಿದ್ದು, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಾಗಿದೆ.
ಇಟ್ಟುಮಡು ನಿವಾಸಿ ಪ್ರೇಮ್ ಕುಮಾರ್ ಎಂಬಾತ ಹಲ್ಲೆಗೊಳಗಾಗಿದ್ದು, ಗಾಯಾಳು ನೀಡಿದ ದೂರಿನನ್ವಯ ಮಹೇಂದ್ರ, ವೇಲು, ನವೀನ್ ಸೇರಿದಂತೆ ಇತರರ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಕತ್ರಿಗುಪ್ಪೆಯ ರಾಮರಾವ್ ಮೈದಾನದಲ್ಲಿ ತನ್ನ ಸ್ನೇಹಿತರಾದ ಆಶಿಕ್, ಮಣಿ, ಗಿರೀಶ್, ನಾಗೇಶ್, ಮನೀಶ್ ಜೊತೆ ಪ್ರೇಮ್ ಕುಮಾರ್ ಕ್ರಿಕೆಟ್ ಆಡುತ್ತಿದ್ದ. ಅದೇ ಮೈದಾನಕ್ಕೆ ಮಧ್ಯಾಹ್ನ 3ಕ್ಕೆ ಮಹೇಂದ್ರ, ವೇಲು, ನವೀನ್ ಮತ್ತು ಆತನ ಗೆಳೆಯರು ಬಂದಿದ್ದರು. ಈ ವೇಳೆ ಎರಡು ತಂಡಗಳನ್ನು ರಚಿಸಿ ಕ್ರಿಕೆಟ್ ಆಡುತ್ತಿದ್ದರು.
ಕ್ಷುಲ್ಲಕ್ಕ ವಿಚಾರಕ್ಕೆ ಆಶಿಕ್ ಮತ್ತು ಮಹೇಂದ್ರ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಎರಡು ತಂಡಗಳ ಮಧ್ಯೆ ಬಿರುಸಿನ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಇದರಿಂದ ಕೆರಳಿದ ಆಶಿಕ್ ಬ್ಯಾಟ್ ನಿಂದ ಮಹೇಂದ್ರಗೆ ಹೊಡೆಯಲು ಯತ್ನಿಸಿದ್ದ. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಪ್ರೇಮ್ ಕುಮಾರ್ ಪರಿಸ್ಥಿತಿ ತಿಳಿಗೊಳಿಸಿದ್ದ ಎನ್ನಲಾಗಿದೆ.
ಅದೇ ರಾತ್ರಿ 8 ಕ್ಕೆ ಪ್ರೇಮ್ ಕುಮಾರ್ ನ ಮನೆಗೆ ತೆರಳಿದ್ದ ಮಹೇಂದ್ರ ಮತ್ತು ಆತನ ಗೆಳೆಯರು, ಆಶಿಕ್ ಬಗ್ಗೆ ವಿಚಾರಿಸಿದ್ದರು. ಪ್ರೇಮ್ ಕುಮಾರ್ ತನಗೆ ಗೊತ್ತಿಲ್ಲ ಎಂದಿದ್ದ. ಇಷ್ಟಕ್ಕೆ ಕೋಪಗೊಂಡ ಆರೋಪಿಗಳು, ಪ್ರೇಮ್ ಕುಮಾರ್ ಗೆ ಚಾಕುವಿನಿಂದ ಇರಿದಿದ್ದಾರೆ. ಬಳಿಕ ಮದ್ಯದ ಬಾಟಲ್ ನಿಂದ ಹೊಡೆದಿದ್ದರು. ಪ್ರೇಮ್ ಕುಮಾರ್ ಚೀರಾಡುತ್ತಿದ್ದ ಶಬ್ದ ಕೇಳಿ ಆತನ ಪೋಷಕರು ಮನೆಯಿಂದ ಹೊರಬರುತ್ತಿದ್ದಂತೆ, ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
key words : Cricket-riots-among-youth-Knife-stabbing