ಬೆಂಗಳೂರು,ಡಿಸೆಂಬರ್, 24,2020(www.justkannada.in): ಮಾಸ್ಕ್ ಧರಿಸದ ಹಿನ್ನೆಲೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಬಾಡಿಗೆ ಕಾರಿನಲ್ಲಿ ಶಾಸಕ ಭವನಕ್ಕೆ ತೆರಳುತ್ತಿದ್ದ ಶಾಸಕ ಎಂ.ಪಿ ಕುಮಾರಸ್ವಾಮಿ ಅವರಿಗೆ ಮಾಸ್ಕ್ ಧರಿಸಿಲ್ಲ ಎಂಬ ಆರೋಪದ ಮೇಲೆ ಶೇಷಾದ್ರಿಪುರಂ ಬಳಿ ಪೊಲೀಸರು 250 ರೂ. ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಶಾಸಕ ಎಂ.ಪಿ ಕುಮಾರಸ್ವಾಮಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.
ಈ ಕುರಿತು ದೂರು ನೀಡಿರುವ ಶಾಸಕ ಎಂ.ಪಿ ಕುಮಾರಸ್ವಾಮಿ, ‘ಇಂದು(ಡಿ.24) ನಾನು ಬಾಡಿಗೆ ಕಾರಿನಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಡೆಯಿಂದ ಶಾಸಕ ಭವನಕ್ಕೆ ತೆರಳುತ್ತಿದ್ದೆ. ಆಗ ಶೇಷಾದ್ರಿಪುರಂ ಪೊಲೀಸ್ ಠಾಣೆ ಮುಂಭಾಗ ಸಂಚಾರಿ ವ್ಯತ್ಯಯದಿಂದ ಕಾರು ನಿಲುಗಡೆಯಾಗಿತ್ತು. ಆ ವೇಳೆ ಕಾರಿನ ಟಿಂಟ್ ಗ್ಲಾಸ್ ಇಳಿಸುವಂತೆ ಬಲವಂತವಾಗಿ ಒತ್ತಡ ಹೇರಿ ಕಾರಿನೊಳಗೆ ಇದ್ದ ನನಗೆ ಮಾಸ್ಕ್ ಹಾಕಿದ್ದರೂ 250 ರೂಪಾಯಿ ದಂಡ ವಿಧಿಸಿದ್ದಾರೆ. ಪೊಲೀಸರ ಈ ವರ್ತನೆಯಿಂದ ಮುಜುಗರಕ್ಕೊಳಗಾದ ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಅವರಿಗೆ ಮರು ಮಾತನಾಡದೆ ದಂಡ ಕಟ್ಟಿದೆ. ವಿನಾ ಕಾರಣ ನನ್ನ ಮೇಲೆ ದಂಡ ವಿಧಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಶಾಸಕರು ವಿವರಿಸಿದ್ದಾರೆ.
ಈ ವಿವರವುಳ್ಳ ದೂರಿನ ಪತ್ರವನ್ನು ಗೃಹ ಸಚಿವರಿಗೆ ಕಳಿಸಿರುವ ಶಾಸಕರು, ಮಾಸ್ಕ್ ಧರಿಸದ್ದರೂ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Key words: police –fine-MLA-MP kumaraswamy- not-mask,