ಬೆಂಗಳೂರು: ಕೋವಿಡ್ -19 ಹಿನ್ನೆಲೆ ಹಾಗೂ ಬ್ರಿಟನ್ ನಲ್ಲಿ ರೂಪಾಂತರಗೊಂಡ ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿರುವ ಕಾರಣ, ಡಿಸೆಂಬರ್ 31ರ ಸಂಜೆಯಿಂದ ಮಾರನೆಯ ದಿನ ಬೆಳಗ್ಗೆವರೆಗೆ ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ.
ಈ ಮೂಲಕ ಕೊರೊನಾ ಆತಂಕದ ನಡುವೆಯೇ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಭರ್ಜರಿ ಸಿದ್ದತೆ ಮಾಡಿಕೊಂಡಿದ್ದ ಸಾರ್ವಜನಿಕರ ಆಸೆಗೆ ಸರಕಾರ ತಣ್ಣೀರು ಎರೆಚಿದೆ. ಇದೇ ರೀತ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ನಾನಾ ನಿರ್ಬಂಧಗಳನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ.ಹೊಸ ವರ್ಷಾಚರಣೆ ವೇಳೆ ಡಿಜೆ ವ್ಯವಸ್ಥೆಗೆ ಅವಕಶ ಇರುವುದಿಲ್ಲ.
ಜನ ಹೆಚ್ಚಾಗಿ ಗುಂಪುಗೂಡಬಹುದಾದ ಸ್ಥಳಗಳನ್ನು ಗುರುತಿಸಿ ಅಲ್ಲಿ ನಿರ್ಬಂಧ ಹೇರುವ ಅಧಿಖಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಅದರಂತೆಯೇ ನಾನಾ ಪ್ರವಾಸಿ ತಾಣಗಳು ಪ್ರವಾಸಿಗರ ಪಾಲಿಗೆ ಬಾಗಿಲು ಬಂದ್ ಮಾಡಲಿವೆ. ಇದಕ್ಕೆ ಪ್ರಸಿದ್ಧ ದೇವಾಲಯಗಳು ಸಹ ಹೊರತಾಗಿಲ್ಲ. ಡಿಸೆಂಬರ್ 31ರ ರಾತ್ರಿ ಬೆಂಗಳೂರಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಅಂದರೆ, ಯಾರೊಬ್ಬರೂ ಸಾರ್ವಜನಿಕ ಪ್ರದೇಶದಲ್ಲಿ ಗುಂಪು ಸೇರುವಂತಿಲ್ಲ.
ಸಾರ್ವಜನಿಕವಾಗಿ ವರ್ಷಾಚರಣೆ ನಡೆಸುವಂತಿಲ್ಲ. ಬೆಂಗಳೂರಿನ ಹೊರ ಭಾಗದಲ್ಲಿಯೂ ಹೊಸವರ್ಷಕ್ಕೆ ನಿರ್ಬಂಧವಿದೆ. ಮನೆಗಳಲ್ಲಿ ಆಚರಿಸಿಕೊಳ್ಳಬಹುದು. ಬಾರ್, ಪಬ್, ಕ್ಲಬ್ ಗಳ ಬಂದ್ ಮಾಡಬೇಕಿದೆ. ಡ್ಯಾನ್ಸ್, ಮ್ಯೂಸಿಕ್ ಗೆ ಅವಕಾಶ ಇರುವುದಿಲ್ಲ.
ಖಾಸಗಿ ಕ್ಲಬ್ಗಳು, ಅಪಾರ್ಟ್ಮೆಂಟ್ಗಳಲ್ಲಿ ನಿವಾಸಿಗಳು ಹೊಸ ವರ್ಷ ಆಚರಣೆ ಮಾಡಬಹುದು. ಬ್ಯಾಂಡ್, ಮ್ಯೂಸಿಕ್ ಕಾರ್ಯಕ್ರಮಗಳನ್ನ ಆಯೋಜಿಸುವಂತಿಲ್ಲ.
ಬೆಂಗಳೂರಿನಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಹಾಗಾಗಿ ಜನ ಎಚ್ಚರಿಕೆಯಿಂದ ಇರಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಹೊಸ ವರ್ಷದ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನಲೆ ಜನರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ರಾಜಧಾನಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ. ಇಡೀ ಬೆಂಗಳೂರಲ್ಲಿ ನಾಕಾಬಂದಿ ಇರಲಿದ್ದು, 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆ ನಿಷೇಧ ಇರಲಿದ್ದು, ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಆದರೆ, ಖಾಸಗಿ ಸ್ಥಳಗಳಲ್ಲಿ ಆಚರಣೆಗೆ ಅವಕಾಶ ನೀಡಲಾಗಿದೆ. ಪಬ್ಗಳಲ್ಲಿ ಈವೆಂಟ್, ಶೋ ನಡೆಸುವಂತಿಲ್ಲ ಹಾಗೂ ವಿಶೇಷ ಡಿಜೆ ವ್ಯವಸ್ಥೆ ಮಾಡುವಂತಿಲ್ಲ. ಹೊಟೇಲ್ಗಳಲ್ಲಿ ಮಾರ್ಗಸೂಚಿ ಪಾಲಿಸಬೇಕು ಎಂದು ತಿಳಿಸಿದರು.
ನಗರದ ಕೆಲವೆಡೆ ವಿಶೇಷ ನಿಗಾ ಇಡಲಾಗಿದ್ದು, ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಚರ್ಚ್ಸ್ಟ್ರೀಟ್, ಕೋರಮಂಗಲ, ಇಂದಿರಾನಗರಗಳಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗುವುದು. ಈ ಏರಿಯಾಗಳಲ್ಲಿ ಕೂಪನ್ ಬುಕ್ಕಿಂಗ್ ಕಡ್ಡಾಯವಾಗಿದೆ. ಸಂಭ್ರಮಾಚರಣೆ ವೇಳೆ ವಿಶೇಷ ಡಿಜೆಗೆ ನಿರ್ಬಂಧ ಹಾಕಲಾಗಿದ್ದು, ನಿಯಮ ಮೀರಿದರೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೆಸ್ಟೋರೆಂಟ್, ಪಬ್, ಕ್ಲಬ್ಗಳಲ್ಲಿ ಕಡ್ಡಾಯವಾಗಿ ಕೊವಿಡ್-19 ನಿಯಮಗಳನ್ನ ಪಾಲಿಸಬೇಕು. ಗ್ರಾಹಕರಿಗೆ ಅಡ್ವಾನ್ಸ್ ಬುಕಿಂಗ್ಗೆ ಅವಕಾಶ ನೀಡಬೇಕು. ಪಬ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಶೇ.50ರಷ್ಟು ಗ್ರಾಹಕರು ಬರಲು ಮಾತ್ರ ಅವಕಾಶ ನೀಡಬೇಕು.
ಕೂಪನ್ ಪಡೆದ ಗ್ರಾಹಕರು ಮಾತ್ರ ಹೋಟೆಲ್ ಒಳಗೆ ಇರಬೇಕು. ಅವರು ರಸ್ತೆಗೆ ಬಂದು ಸೆಲಬ್ರೇಷನ್ ಮಾಡಬಾರದು ಎಂದು ಕಮಲ್ ಪಂತ್ ಮಾಹಿತಿ ನೀಡಿದರು. ರಾತ್ರಿ ಕಚೇರಿಯಿಂದ ಮನೆಗೆ ತೆರಳುವವರಿದ್ದರೆ, ಆಸ್ಪತ್ರೆಗೆ ಹೋಗುವವರಿದ್ದರೆ ಇಲ್ಲವೆ ಇತರೆ ಯಾವುದೇ ಅಗತ್ಯ ಸೇವೆಗಾಗಿ ಸಂಚಾರ ನಡೆಸಬಹುದು. ಅವರಿಗೆ ನಮ್ಮ ಕಡೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ರಾತ್ರಿ ಜಾಲಿ ರೈಡ್ ಉದ್ದೇಶ ಇಟ್ಟುಕೊಂಡು ಸಂಚಾರ ನಡೆಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಎಚ್ಚರಿಕೆ ನೀಡಿದರು.
ಬೆಂಗಳೂರು ನಗರಾದ್ಯಂತ ಮದ್ಯಪಾನ ಮಾಡಿ ಚಾಲನೆ ಮಾಡುವವರ ಬಗ್ಗೆ ವಿಶೇಷ ನಿಗಾವಹಿಸಲಾಗುವುದು. ಡಿ.31ರಂದು ಎಂದಿಗಿಂತ ಹೆಚ್ಚಿನ ಕಡೆ ತಪಾಸಣೆ ಮಾಡುತ್ತೇವೆ ಎಂದರು.
ಮಾಲ್ಗಳು, ಹೊಟೇಲ್, ಕ್ಲಬ್, ಪಬ್ಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ. ಜ.31ರ ರಾತ್ರಿ ಅನವಶ್ಯಕ ಸಂಚಾರಕ್ಕೆ ಯಾವುದೇ ಅವಕಾಶವಿಲ್ಲ. ವೀಲಿಂಗ್, ಡ್ರ್ಯಾಗ್ ರೇಸ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಮೀರಿ ಸಂಚಾರ ಮಾಡಿದರೆ, ವಾಹನ ಜಪ್ತಿ ಮಾಡಲಾಗುವುದು. ಯಾವುದೇ ಸಾರ್ವಜನಿಕ ಸ್ಥಳ ರಸ್ತೆ, ಪಾರ್ಕ್ ಬಳಿ ಯಾವುದೇ ಸಂಭ್ರಮಾಚರಣೆ ನಡೆಸಲು ಅವಕಾಶ ನೀಡಲಾಗಿಲ್ಲ. ಡಿಜೆ ಹಾಗೂ ಯಾವುದೇ ಸಂಗೀತ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ. ಆದರೆ, ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್, ಖಾಸಗಿ ಕ್ಲಬ್ ಗಳಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.
ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಕೆಲವರು ಫ್ಲೈಓವರ್ಗಳ ಮೇಲೆ ವಾಹನ ನಿಲ್ಲಿಸಿ ಗಲಾಟೆ ಮಾಡುತ್ತಾರೆ. ಇದಕ್ಕೆ ಕಡಿವಾಣ
ಹಾಕುವ ಉದ್ದೇಶದಿಂದ ಡಿ.31ರಂದು ರಾತ್ರಿ 8 ಗಂಟೆಯಿಂದ ಫ್ಲೈಓವರ್ಗಳು ಬಂದ್ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಇರಲಿದೆ.
ಹೊಸ ವರ್ಷಾಚರಣೆಗೆ ಬ್ರೇಕ್ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೆ ಮುಂದಾಗಿತ್ತು. ಆದರೆ, ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಅದನ್ನು ಹಿಂಪಡೆದಿತ್ತು. ಹೀಗಾಗಿ, ಹೊಸ ವರ್ಷಾಚರಣೆ
ಮಾರ್ಗಸೂಚಿ ಮೂಲಕ ನಿರ್ಬಂಧ ಹಾಕಿದೆ.