ಬೆಂಗಳೂರು,ಡಿಸೆಂಬರ್,29,2020(www.justkannada.in): ರಾಜ್ಯದ ಎಲ್ಲಾ ಬ್ಯಾಂಕುಗಳು ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸುವುದು ಈ ನೆಲದ ಹಕ್ಕೋತ್ತಾಯ ಹಾಗೂ ಕೇಂದ್ರ ಸರ್ಕಾರದ ಭಾಷಾನೀತಿಯಾಗಿದ್ದು, ಎಲ್ಲ ಬ್ಯಾಂಕುಗಳು ಸಂಪೂರ್ಣವಾಗಿ ಕನ್ನಡದಲ್ಲಿಯೇ ಗ್ರಾಹಕ ಸೇವೆಯನ್ನು ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಆಗ್ರಹಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಟೌನ್ ಹಾಲ್ ಬಳಿಯಿರುವ ರಾಜ್ಯಮಟ್ಟದ ಮಾರ್ಗದರ್ಶಿ ಬ್ಯಾಂಕ್ (ಎಸ್.ಎಲ್.ಬಿ.ಸಿ) ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಕುರಿತಾದ ವಿಶೇಷ ಅಭಿಯಾನವನ್ನು ರಾಜ್ಯ ಮಾರ್ಗದರ್ಶಿ ಬ್ಯಾಂಕಿನ ಮುಖ್ಯಸ್ಥರಿಗೆ ಹಕ್ಕೋತ್ತಾಯದ ಮನವಿಯನ್ನು ವಿತರಿಸುವ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಂತರ ಬ್ಯಾಂಕಿನ ಮುಂಭಾಗದಲ್ಲಿ ಘೋಷವಾಕ್ಯಗಳ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ, ಈ ನೆಲದ ನೀತಿಯನ್ನು ಪಾಲಿಸುವುದು ಎಲ್ಲಾ ಬ್ಯಾಂಕುಗಳ ಗುರುತರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಶ್ರಮದ ಹಣದಲ್ಲಿ ಬ್ಯಾಂಕುಗಳಲ್ಲಿ ವ್ಯವಹರಿಸುತ್ತಾರೆ. ಅಂತಹ ಗ್ರಾಹಕರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಸೇವೆ ನೀಡುವುದು ಮತ್ತು ಸರ್ಕಾರದ ನೀತಿ-ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದರೂ ಬಹುತೇಕ ಬ್ಯಾಂಕುಗಳು ನಿಯಮ ಉಲ್ಲಂಘಿಸುವುದು ಸರಿಯಾದ ಕ್ರಮವಲ್ಲ. ಅಲ್ಲದೆ ಕನ್ನಡದ ನೆಲದಲ್ಲಿ ಅನ್ಯಭಾಷೆಗಳನ್ನು ಒತ್ತಾಯಪೂರ್ವಕವಾಗಿ ಹೇರುವುದನ್ನು ಪ್ರಾಧಿಕಾರ ಖಂಡಿಸುತ್ತದೆ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ.ಅಬ್ದುಲ್ ರೆಹಮಾನ್ ಪಾಷಾ, ಕಾರ್ಯದರ್ಶಿ ಡಾ.ಕೆ.ಮುರಳಿಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಕನ್ನಡಪರ ಚಿಂತಕರು, ಕನ್ನಡ ಕಾಯಕ ಪಡೆಯ ಸದಸ್ಯರುಗಳು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರುಗಳು ಪಾಲ್ಗೊಂಡಿದ್ದರು.
ರಾಜ್ಯದೆಲ್ಲೆಡೆ ಏಕಕಾಲದಲ್ಲಿ ಅಭಿಯಾನ:
ರಾಜ್ಯದೆಲ್ಲೆಡೆ ಏಕಕಾಲದಲ್ಲಿ ಆಯಾ ಜಿಲ್ಲಾ ಮಾರ್ಗದರ್ಶಿ ಬ್ಯಾಂಕುಗಳ ಮುಂಭಾಗದಲ್ಲಿ ನಡೆದ ಈ ಅಭಿಯಾನದಲ್ಲಿ ಆಯಾ ಜಿಲ್ಲೆಯ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಪ್ರಾಧಿಕಾರದ ಸದಸ್ಯರು, ಕನ್ನಡ ಕಾಯಕ ಪಡೆಯ ಸ್ವಯಂಸೇವಕರುಗಳು, ಕನ್ನಡಪರ ಚಿಂತರಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಬೆಂಗಳೂರಿನ ನಾಲ್ಕು ಕಡೆಗಳಲ್ಲಿ “ಬ್ಯಾಂಕುಗಳಲ್ಲಿ ಕನ್ನಡ ಸೇವೆ ಕುರಿತಾದ ಅಭಿಯಾನವು ಯಶಸ್ವಿಯಾಗಿ ನಡೆಯಿತು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಇರುವ ಎಸ್.ಬಿ.ಐ. ಬ್ಯಾಂಕ್ ಮುಂಭಾಗ ನಡೆದ ಅಭಿಯಾನದ ನೇತೃತ್ವವನ್ನು ಪ್ರಾಧಿಕಾರದ ಸದಸ್ಯರಾದ ಡಾ.ಕಿಶೋರ್, ಮಹಾತ್ವ ಗಾಂಧಿ (ಎಂ.ಜಜಿ.ರಸ್ತೆ) ರಸ್ತೆಯಲ್ಲಿರುವ ಎಕ್ಸಿಸ್ ಬ್ಯಾಂಕು ಮತ್ತು ಇತರೆ ಬ್ಯಾಂಕುಗಳ ಮುಂಭಾಗದಲ್ಲಿ ನಡೆದ ಅಭಿಯಾನದ ನೇತೃತ್ವವನ್ನು ಕನ್ನಡಪರ ಚಿಂತಕರಾದ ಕನ್ನಡ ಮಂಜು ಅವರುಗಳು ವಹಿಸಿದ್ದರು.
ಕನ್ನಡ ಕಾಯಕ ವರ್ಷಾಚರಣೆಯ ಹಿನ್ನೆಲೆಯಲ್ಲಿ ವಿಶ್ವಮಾನದ ಕುವೆಂಪು ಅವರ ಜನ್ಮದಿನಾಚರಣೆ ಪ್ರಯುಕ್ತ ಇಂದು ನಡೆದ ಅಭಿಯಾನದಲ್ಲಿ ಕನ್ನದಲ್ಲಿಯೇ ನಡೆದರೆ ಬ್ಯಾಂಕಿನ ವ್ಯವಹಾರ; ಶೀಘ್ರವೇ ದೊರಕುವುದು ಸಮಸ್ಯೆಗೆ ಪರಿಹಾರ, ಕನ್ನಡ ಬ್ಯಾಂಕ್ ಕಾಯಕದ ಕೊರಳಲ್ಲಿರಲಿ, ಬೆರಳಲ್ಲಿರಲಿ, ಕರುಳಲ್ಲಿರಲಿ ಎಂಬ ಘೋಷವಾಕ್ಯದ ಭಿತ್ತಿಪತ್ರಗಳು ಗಮನ ಸೆಳೆದವು.
Key words: Customer -service – Kannada-bank- TS nagabarana