ಶಿವಮೊಗ್ಗ,ಡಿಸೆಂಬರ್,30,2020(www.justkannada.in) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರೂರಿಗೂ ಬ್ರಿಟನ್ ರೂಪಾಂತರ ವೈರಸ್ ಕಾಲಿಟ್ಟಿದ್ದು, ಒಂದೇ ಕುಟುಂಬದ ನಾಲ್ವರಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ 21ರಂದು ಶಿವಮೊಗ್ಗಕ್ಕೆ ಬಂದಿದ್ದ ಒಂದೇ ಕುಟುಂಬದ ಗಂಡ-ಹೆಂಡತಿ ಮತ್ತು ಅವರ ಇಬ್ಬರು ಮಕ್ಕಳಲ್ಲಿ ಬ್ರಿಟನ್ ವೈರಸ್ ಇರುವುದು ಖಚಿತಪಟ್ಟಿದೆ.
ಸಾವರ್ಕರ್ ನಗರ ನಿವಾಸಿಗಳಾದ ಇವರನ್ನು ಇಲ್ಲಿಗೆ ಬಂದಾಗಲೇ ತಪಾಸಣೆಗೆ ಒಳಪಡಿಸಲಾಗಿತ್ತು. ಈ ಸಂದರ್ಭ ಅವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಇವರ ಜತೆಗೆ ಭದ್ರಾವತಿ ಮೂಲದ ಮತ್ತೊಬ್ಬ ಮಹಿಳೆಗೂ ಕೊರೊನಾ ದೃಢಪಟ್ಟು ಎಲ್ಲರನ್ನೂ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಸೋಂಕಿತರ ಸ್ವಾಬ್ ಮಾದರಿಯನ್ನು ಪುಣೆ ವೈರಾಣು ಲ್ಯಾಬ್‍ಗೆ ಕಳುಹಿಸಲಾಗಿತ್ತು. ಇದೀಗ ವರದಿ ಕೈ ಸೇರಿದ್ದು, ಭದ್ರಾವತಿ ಮಹಿಳೆ ಹೊರತುಪಡಿಸಿ ಉಳಿದ ಒಂದೇ ಕುಟುಂಬದ ನಾಲ್ವರಲ್ಲಿ ಬ್ರಿಟನ್ ವೈರಸ್ ಇರುವುದಾಗಿ ವರದಿ ಬಂದಿದೆ ಎನ್ನಲಾಗಿದೆ.
ಈ ಕುಟುಂಬದೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರನ್ನು ಪತ್ತೆಹಚ್ಚಿ ಅವರನ್ನು ತಪಾಸಣೆಗೊಳಪಡಿಸಲಾಗುತ್ತಿದ್ದು, ಕೆಲವರನ್ನು ಪ್ರತ್ಯೇಕವಾಗಿರಿಸಲಾಗಿದೆ.
ಬ್ರಿಟನ್ ವೈರಸ್ ಕಾಣಿಸಿಕೊಂಡ ಕುಟುಂಬಕ್ಕೆ ಸೇರಿದ ಮನೆಯನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಿ ಇಂದು ಸೀಲ್‍ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗಕ್ಕೆ ಬ್ರಿಟನ್‍ನಿಂದ ಒಟ್ಟು 23 ಮಂದಿ ಬಂದಿದ್ದು, ಇವರನ್ನೆಲ್ಲ ಕೊರೊನಾ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟವರನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.
ನಿನ್ನೆ ರಾಜಧಾನಿ ಬೆಂಗಳೂರಿನಲ್ಲಿ ತಾಯಿ-ಮಗಳು ಸೇರಿದಂತೆ ಮೂವರಿಗೆ ಬ್ರಿಟನ್ ಕೊರೊನಾ ಕಾಣಿಸಿಕೊಂಡಿರುವುದು ದೃಢಪಟ್ಟಿದ್ದು, ಇಂದು ಮತ್ತೆ ಶಿವಮೊಗ್ಗದ ನಾಲ್ಕು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ರಾಜ್ಯದೆಲ್ಲೆಡೆ ಬ್ರಿಟನ್ ಕೊರೊನಾ ಭೂತ ಕಾಡತೊಡಗಿದೆ.
key words : four-same-family-mutation-corona-virus-Sure…!