ಮೈಸೂರು,ಜನವರಿ,04,2021(www.justkannada.in) : ಮೈಸೂರು ವಿವಿಯು ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಮೈಸೂರು,ಮಂಡ್ಯ,ಹಾಸನ,ಚಾಮರಾಜನಗರ ಜಿಲ್ಲೆಗಳಿಂದ 10 ಶಾಲೆಗಳನ್ನು ದತ್ತು ಪಡೆದುಕೊಂಡಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.ಸೋಮವಾರ ಕ್ರಾಫರ್ಡ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಲೆಗಳನ್ನು ಇನ್ನೂ ಬಲವರ್ಧನೆಗೊಳಿಸಿ, ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸುವ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ಧಿ ಕ್ರಿಯಾ ಯೋಜನೆಯಡಿ 10 ಶಾಲೆಗಳನ್ನು ದತ್ತು ಪಡೆದುಕೊಳ್ಳಲಾಗಿದೆ ಎಂದರು.
ದತ್ತು ಪಡೆದ ಶಾಲೆಗಳ ಮಾಹಿತಿ..!
ಚಾಮರಾಜನಗರ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಶತಮಾನ ಕಂಡ ಶಾಲೆ)’’, ಯಳಂದೂರು ತಾಲ್ಲೂಕಿನ ಕೊಮಾರನಪುರದ ‘’ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಶತಮಾನ ಕಂಡ ಶಾಲೆ)”, ಹನೂರು ತಾಲ್ಲೂಕಿನ “ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ” ಹಾಗೂ ಮಂಡ್ಯ ಜಿಲ್ಲೆಯ ತೂಬಿನ ಕೆರೆಯ ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ಪಾಂಡವಪುರ ತಾಲ್ಲೂಕಿನ “ಲಕ್ಷ್ಮೀಸಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ” ಮಂಡ್ಯ ತಾಲ್ಲೂಕಿನ “ಎಲೆಚಾಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ” ಮತ್ತು ಹಾಸನ ಜಿಲ್ಲೆಯ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಹೊಳೆನರಸೀಪುರ ತಾಲ್ಲೂಕಿನ “ಯಲ್ಲೇಶಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ”, ಮೈಸೂರು ವಿಶ್ವವಿದ್ಯಾನಿಲಯದ ಮೈಸೂರು ತಾಲ್ಲೂಕಿನ ಮಾರ್ಬಳ್ಳಿ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ”, “ಗುಂಗ್ರಾಲ್ ಛತ್ರದ ಸರ್ಕಾರಿ ಪ್ರೌಢಶಾಲೆ”, “ಕೆ.ಆರ್.ಮಿಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ”, “ಹೆಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ”ಯನ್ನು ದತ್ತು ಪಡೆದುಕೊಳ್ಳಲಾಗಿದೆ.
ವಿಶ್ವವಿದ್ಯಾನಿಲಯವು ದತ್ತು ಪಡೆದಿರುವ ಶಾಲೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ಅವುಗಳ ಜೀರ್ಣೋದ್ಧಾರಕ್ಕಾಗಿ ಒಂದು ಸಮಿತಿಯನ್ನು ರಚಿಸಿದ್ದು, ಅದರಂತೆ ಸಮಿತಿಯು ಅಧ್ಯಕ್ಷರನ್ನೊಳಗೊಂಡ ಎಲ್ಲಾ ಸದಸ್ಯರಗಳು ಶಾಲೆಗಳಿಗೆ ಖುದ್ದು ಭೇಟಿ ನೀಡಿ, ಶಾಲೆಗಳಲ್ಲಿರುವಂತಹ ನ್ಯೂನತೆಗಳನ್ನು ಗುರುತಿಸಿದ್ದಾರೆ ಎಂದರು.
ಈ ಸಂಬಂಧ ಮುಖ್ಯಮಂತ್ರಿಗಳ ಶಿಕ್ಷಣ ಸುಧಾರಣಾ ಸಲಹಗಾರರಾದ ಡಾ.ಎಂ.ಆರ್.ದೊರೆಸ್ವಾಮಿ ಇವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ದತ್ತು ಪಡೆದಿರುವ ಶಾಲೆಗಳ ಬಗ್ಗೆ ಚರ್ಚಿಸಲಾಯಿತು ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಶೌಚಾಲಯವನ್ನು ನಿರ್ಮಿಸಿ ಕೊಡುವುದು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದು, ಶಾಲೆಗಳ ಪುನರುಜ್ಜೀವನ ಮಾಡುವುದು, ಶತಮಾನ ಕಂಡ ಶಾಲೆಗಳನ್ನು ಗುರುತಿಸಿ ಗೌರವಿಸುವುದು, ಸಮಗ್ರ ಇತಿಹಾಸದ ದಾಖಲೀಕರಣ ಮಾಡುವುದು, ಮಾದರಿ ಶಾಲೆಯಾಗಿ ರೂಪಿಸುವ ಉದ್ದೇಶವಿದೆ. ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು, ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದು ವಿವಿಯ ಆಶಯವಾಗಿದೆ ಎಂದು ತಿಳಿಸಿದರು.
key words : Mysore VV-Range-four districts-Adoption-10 schools-Chancellor- Prof.G.Hemant Kumar