ಮೈಸೂರ,ಜನವರಿ,06,2021(www.justkannada.in) : ಸಮುದಾಯದ ಸರ್ವಾಂಗೀಣ ಏಳಿಗೆಗೆ ನಾನು ಬದ್ಧ. ಜನಾಂಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನೇಕ ಸೌಲಭ್ಯಗಳನ್ನು ಒದಗಿಸಲು ಶಕ್ತಿಮೀರಿ ಶ್ರಮಿಸುತ್ತೇನೆ. ಸಮುದಾಯದಲ್ಲಿ ಅನೇಕ ಯುವಕರು ಉನ್ನತ ಅಧಿಕಾರಿಗಳ ಸ್ಥಾನಕ್ಕೇರಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದುಡಿಯುತ್ತೇನೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಭಾರ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ನೂತನ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಸುಬ್ರಹ್ಮಣ್ಯ ಅವರು, ಮೈಸೂರಿಗೆ ಮೊದಲ ಬಾರಿಗೆ ಆಗಮಿಸಿದ ಹಿನ್ನೆಲೆ ಸಂಘದ ವತಿಯಿಂದ ಸಾಂಸ್ಕೃತಿಕ ಕಲಾ ತಂಡದಿಂದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿ, ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಬುಧವಾರ ನಗರದ ಡಿ.ದೇವರಾಜು ಅರಸು ರಸ್ತೆಯ ಶ್ರೀ ಶಿವಾಯ ಮಠದ ಹತ್ತಿರ ಮೆರವಣಿಗೆ ಮೂಲಕ ಸ್ವಾಗತಿಸಿದ ಕುರುಬ ಸಮಾಜದ ಮುಖಂಡರು ಹಾಗೂ ಜಿಲ್ಲಾ ಪದಾಧಿಕಾರಿಗಳು, ಪುಷ್ಪಮಾಲೆಗಳನ್ನು ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕುರುಬ ಸಮುದಾಯ ಎಸ್‌ಟಿಗೆ ಸೇರ್ಪಡೆಯಾಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಶಿಫಾರಸು ಮಾಡಿದ್ದಾರೆ. ಈ ಹೋರಾಟದಲ್ಲಿ ನಮ್ಮ ಬೆನ್ನಿಗೆ ಅವರು ನಿಲ್ಲಲು ಭರವಸೆ ನೀಡಿದ್ದಾರೆ ಎಂದರು.
ಕಾಗಿನೆಲೆ ಕನಕ ಗುರುಪೀಠದ ಸ್ವಾಮೀಜಿಗಳು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್.ವಿಶ್ವನಾಥ್ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಒಗ್ಗೂಡಿಸಿ ಈ ಹೋರಾಟವನ್ನು ಮುಂದುವರುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ರಂಗರಾಜು ಮಾತನಾಡಿ, ಹಿಂದುಳಿದ ಜನಾಂಗದ ವ್ಯಕ್ತಿ ಯುವಕರಿಂದಲೂ ನಾಯಕತ್ವ ಗುಣ ಮೈಗೂಡಿಸಿಕೊಂಡು ಬಂದವರು. ಮಿತಭಾಷಿ, ನಿಷ್ಠೂರವಾದಿ, ಸದಾ ಕ್ರಿಯಾಶೀಲರು ಎಂದು ಪ್ರಶಂಸಿದರು.
ರಾಜ್ಯದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಸಮುದಾಯದ ಜನರು ಜೀವನ ನಡೆಸುತ್ತಿದ್ದಾರೆ. ಅವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತಬೇಕು. ಜನಾಂಗದ ವಿದ್ಯಾರ್ಥಿ ಸಂಘಗಳು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ತುರ್ತಾಗಿ ನೆರವೇರಿಸಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಬೀರಿಹುಂಡಿ ಬಸವಣ್ಣ ಮಾತನಾಡಿ, ಕುರುಬ ಸಮುದಾಯ ತನ್ನದೇ ಆದ ಇತಿಹಾಸ ಹೊಂದಿದೆ. ಅಂತಹ ಸಮುದಾಯಕ್ಕೆ ಅಧ್ಯಕ್ಷರಾಗಿರುವ ಸುಬ್ರಹ್ಮಣ್ಯ ಅವರು ಸಂಘಟನೆ ಚತುರರಾಗಿದ್ದು, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುಬ್ರಹ್ಮಣ್ಯ ಅವರು ವಿದ್ಯಾರ್ಥಿ ದೆಸೆಯಿಂದಲೂ ಸಂಘಟನೆಯಲ್ಲಿ ಬಹಳ ಮುಂಚೂಣಿಯಲ್ಲಿದ್ದಾರೆ. ನನ್ನ ರಾಜಕೀಯ ಬೆಳಣಿಗೆಯಲ್ಲಿ ಅವರ ಪಾತ್ರ ಪ್ರಧಾನವಾಗಿದ್ದು, ಎಲ್ಲಾ ಚುನಾವಣೆಯಲ್ಲಿ ನೇತೃತ್ವ ವಹಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರುಗಳಾದ ಜೆ.ಗೋಪಿ, ನಾಗರಾಜು, ಅಭಿಲಾಷ್, ಮಾದೇಗೌಡ, ಮಹದೇವು, ಕನಕ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ, ಬ್ಯಾಂಕ್ ಪುಟ್ಟಸ್ವಾಮಿ, ರಾಜಣ್ಣ, ವಿ.ಸಿ.ಬಸವಣ್ಣ, ರೇವಣ್ಣ, ಆಲಹಳ್ಳಿ ಬಸವಣ್ಣ, ಆಲಹಳ್ಳಿ ನಂಜೇಗೌಡ, ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಶಿವಪ್ಪ ಕೋಟೆ, ಉದ್ಯಮಿ ಬಸವೇಗೌಡ, ಶ್ರೀನಿವಾಸ ಹಾಗೂ ವಿವಿಧ ತಾಲ್ಲೂಕಿನ ಕುರುಬ ಸಂಘದ ಅಧ್ಯಕ್ಷರು, ಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
key words : community-prosper-committed-President-Shepherd-Association-B. Subramanian …!