ಬೀದರ್ ಜನವರಿ,6,2021(www.justkannada.in): ನೂತನ ಅನುಭವ ಮಂಟಪ ನಿರ್ಮಾಣ ಐತಿಹಾಸಿಕ ಪವಿತ್ರ ಕಾರ್ಯ. ಇದು ಕಟ್ಟಡ ನಿರ್ಮಾಣವಲ್ಲ, ಇದು ಮಾನವ ನಿರ್ಮಾಣ ಕಾರ್ಯ ಎಂದು ಸಾಹಿತಿ ಗೋ.ರು.ಚನ್ನಬಸಪ್ಪ ಅವರು ಬಣ್ಣಿಸಿದರು.
ಜನವರಿ 6ರಂದು ಬಸವಕಲ್ಯಾಣದಲ್ಲಿ ನಡೆದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾಡಿನ ಲಕ್ಷ ಲಕ್ಷ ಜನರು ಬಹುದಿನಗಳಿಂದ ನಿರೀಕ್ಷೆ ಇಟ್ಟುಕೊಂಡ ಕಾರ್ಯವು ಇಂದು ನಡೆದಿದೆ. ಕೆಲವು ವರ್ಷಗಳಿಂದ ವಿಳಂಬವಾಗಿದ್ದ ಈ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಮೊದಲ ತಿಂಗಳಲ್ಲೇ ಘೋಷಣೆ ಮಾಡಿದ್ದಕ್ಕೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಅನುಭವ ಮಂಟಪ ನಿರ್ಮಾಣ ಸಮಿತಿಯ ವರದಿ ಮಾಡುವಾಗ ನಾಡಿನ ಅನೇಕ ಸಾಹಿತಿಗಳು, ಚಿಂತಕರು, ಎಲ್ಲ ಭಾಷಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ನೀಡಿದ ಸಹಕಾರವನ್ನು ನಾವು ಸ್ಮರಿಸಲೇಬೇಕು ಎಂದು ತಿಳಿಸಿದರು.
ಬಸವಣ್ಣನವರ ಕಾಲದಲ್ಲಿ ಇದ್ದ ಸಾಮಾಜಿಕ ಮತ್ತು ಧಾರ್ಮಿಕ ಅಸಮಾನತೆಯ ವಿರುದ್ಧದ ಹೊರಾಟಕ್ಕೆ ಈ ಅನುಭವ ಮಂಟಪವು ತಳಹದಿಯಾಗಿತ್ತು. ರಾಜಕೀಯ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆ ಮಾಡಿದ, ಪ್ರಜೆಗಳನ್ನು ಒಳ್ಳೆಯವರನ್ನಾಗಿ ಮಾಡುವ ಕಾರ್ಯವನ್ನು ಅಂದು ಈ ಅನುಭವ ಮಂಟಪ ಮಾಡಿದೆ. ಯಾವುದೇ ಕ್ಷೇತ್ರದಲ್ಲಿನ ಆದೇಶ ನಿರೂಪಕರಿಗೆ, ಕಾರ್ಯ ನಿರ್ವಾಹಕರಿಗೆ ಸೂಕ್ತವಾದಂತಹ ಮಾರ್ಗದರ್ಶನ ನೀಡುವ ಕೇಂದ್ರ ಇದಾಗಬೇಕಿದೆ ಎಂದು ತಿಳಿಸಿದರು. ಜಗತ್ತಿನ ಎಲ್ಲ ಚಿಂತಕರು ಇಲ್ಲಿ ಬರಬೇಕು. ಬೃಹತ್ ಶೈಕ್ಷಣಿಕ ಪ್ರವಾಸಿ ಕೇಂದ್ರ ಇದಾಗಬೇಕು ಎಂದು ತಿಳಿಸಿದರು.
ನುಡಿದಂತೆ ನಡೆದಿರುವುದು ಶರಣ ಸಂಸ್ಕೃತಿಯಾಗಿದೆ. ಈ ತತ್ವವನ್ನು ನಾವು ಅರ್ಥ ಮಾಡಿಕೊಂಡರೆ ಇಡೀ ಜಗತ್ತೆ ಸರಿ ಇರುತ್ತದೆ.
ತಮಗೆ ಮೋಜಿಗೆ ಬೇಕಾದಷ್ಟು ಹಣ ಕೊಡಲಿಲ್ಲ ಎಂದು ಒಬ್ಬ ಯುವಕ ತಂದೆತಾಯಿಯನ್ನು ಕೊಲ್ಲುವ ಕಾಲದಲ್ಲಿ ನಾವಿದ್ದೇವೆ. ಇಂತಹ ಮನೋಭಾವವು ನಮ್ಮ ಇಡೀ ವ್ಯವಸ್ಥೆಯಲ್ಲಿ ಉಳಿದಿದೆ. ಈ ವ್ಯವಸ್ಥೆ ಬದಲಾಗಬೇಕಿದೆ.
ನನಗೂ ವಯಸ್ಸಾಗಿದೆ. ನಾನು ನೋಡಬಹುದೇ ಅನುಭವ ಮಂಟಪವನ್ನು ಎಂದು ಹೇಳಿದ ಗೋರೂಚ ಅವರು, ತಾವು ಸಲಹೆ ನೀಡಿದಂತೆ ನಾಡಿನಲ್ಲಿ ಈಗಾಗಲೇ ಜಾನಪದ ವಿಶ್ವ ವಿದ್ಯಾಲಯ ಕಾರ್ಯಾರಂಭಗೊಂಡಂತೆ ಅನುಭವ ಮಂಟಪ ನಿರ್ಮಾಣ ಕಾರ್ಯ ಕೂಡ ಬೇಗನೆ ಆಗಬೇಕು. ಇದನ್ನು ಸವಾಲಿನಂತೆ ಸ್ಚೀಕರಿಸಿ ಕಟ್ಟಡ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಬೇಕು ಎಂದರು.
ಚಿಂತಕರಾದ ಬಸವರಾಜ ಪಾಟೀಲ ಸೆಡಂ ಅವರು ಮಾತನಾಡಿ, ಎಲ್ಲರ ಸಹಕಾರ ಪಡೆದು ಅನುಭವ ಮಂಟಪ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೂ ಶ್ರಮಿಸುವುದಾಗಿ ತಿಳಿಸಿದರು.
ಅನುಭವ ಮಂಟಪದ ಅಧ್ಯಕ್ಷರಾದ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ದೆಹಲಿಯಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಸಂಸತ್ತು ಭವನ ಉದ್ಘಾಟನೆ ವೇಳೆಯಲ್ಲಿ ಇಡೀ ಜಗತ್ತಿಗೆ ಸಂಸತ್ತು ನಿರ್ಮಾಣದ ಸಂದೇಶ ನೀಡಿದ ನೆಲ ಬಸವಕಲ್ಯಾಣ ಎಂದು ಹೇಳಿರುವುದು ಕಲ್ಯಾಣ ನಾಡಿನ ಮಹತ್ವವನ್ನು ತಿಳಿಸುತ್ತದೆ ಎಂದರು. ಬಸವ ಉತ್ಸವವನ್ನು ಆರಂಭಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದರು.
ಸಮಾರಂಭದಲ್ಲಿ ಹಾರಕೂಡ ಡಾ.ಚನ್ನವೀರ ಶಿವಾಚಾರ್ಯರು, ಶಿವಾನಂದ ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯರು, ಅಕ್ಕ ಅನ್ನ ಪೂರ್ಣತಾಯಿ, ಅಕ್ಕ ಗಂಗಂಬಿಕಾ ತಾಯಿ, ಸಿದ್ದರಾಮ ಶರಣರು, ಸಿದ್ದರಾಮೇಶ್ವರ ಸ್ವಾಮೀಜಿ, ಗುರುಬಸವಲಿಂಗ ಪಟ್ಟದ್ದೇವರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.
Key words: bidar-basava kalyana- anubava mantapa-writer-Go.RU. Channabasappa