ನವದೆಹಲಿ,ಜೂ,25,2019(www.justkannada.in): ಉತ್ತಮ ಮಳೆಯಾದರೇ ಮಾತ್ರ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಿ ಆದೇಶ ಹೊರಡಿಸಿದ್ದು, ಈ ಮೂಲಕ ರಾಜ್ಯಕ್ಕೆ ನಿರಾಳ ಸಿಕ್ಕಂತಾಗಿದೆ.
ಇಂದು ನವದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ಅವರ ನೇತೃತ್ವದಲ್ಲಿ ನಡೆಯಿತು. ರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯಲ್ಲಿ ಜುಲೈ ತಿಂಗಳ 31.24 ಟಿಎಂಸಿ ನೀರಿಗಾಗಿ ತಮಿಳುನಾಡು ಬೇಡಿಕೆ ಇಟ್ಟಿತ್ತು. ತಮಿಳುನಾಡಿಗೆ ಕಳೆದ ಸಭೆಯಲ್ಲಿ 9.19 ಟಿಎಂಸಿ ನೀರು ಹರಿಸಲು ಸೂಚನೆ ನೀಡಲಾಗಿತ್ತು. ಆದರೆ ಕರ್ನಾಟಕ ಪ್ರಾಧಿಕಾರದ ಸೂಚನೆಯನ್ನು ಪಾಲಿಸಿಲ್ಲ. ಜೂನ್ 30 ರೊಳಗೆ ಬಾಕಿ ನೀರನ್ನ ಬಿಡಬೇಕು ಎಂದು ತಮಿಳುನಾಡು ಆಗ್ರಹಿಸಿತು.
ಅಲ್ಲದೆ ಮೆಟ್ಟೂರು ಅಣೆಕಟ್ಟೆಯಿಂದ ಈವರೆಗೆ ರೈತರಿಗೆ ನೀರು ಬಿಟ್ಟಿಲ್ಲ. ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ ಎಂದು ತಮಿಳುನಾಡು ವಾದ ಮಂಡಿಸಿತು.
ತಮಿಳುನಾಡು ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯದ ಪ್ರತಿನಿಧಿಗಳು ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಕೆಆರ್‍ಎಸ್ ಸೇರಿದಂತೆ ರಾಜ್ಯದ ಬಹುತೇಕ ಡ್ಯಾಂಗಳು ಬರಿದಾಗಿವೆ. ಕುಡಿಯುವ ನೀರಿಗೆ ತತ್ವಾರ ಉಂಟಾಗಿರುವ ಈ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ, ಉತ್ತಮ ಮಳೆಯಾದರೆ ಮಾತ್ರ ತಮಿಳುನಾಡಿಗೆ ನೀರು ಬಿಡಲು ಸಾಧ್ಯ ಎಂದು ಮನವರಿಕೆ ಮಾಡಿಕೊಟ್ಟರು.
ವಾದ ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯದಲ್ಲಿ ಉತ್ತಮ ಮಳೆಯಾದರೇ ಮಾತ್ರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿ. ಜಲಾಶಯಕ್ಕೆ ಒಳಹರಿವು ಹೆಚ್ಚಾದರೇ ಮಾತ್ರ ತಮಿಳುನಾಡಿಗೆ ನೀರು ಹರಿಸುವಂತೆ ಪ್ರಾಧಿಕಾರ ಆದೇಶ ಹೊರಡಿಸಿದ್ದು, ರಾಜ್ಯದ ಕಾವೇರಿಕೊಳ್ಳದ ಜನರು ನಿಟ್ಟುಸಿರುವ ಬಿಟ್ಟಂತಾಗಿದೆ.
Key words: only- rain- water – Tamil Nadu-Order – Cauvery Management Authority.