ರಂಜ ಸುರಗಿ-2 : ನೆನಪಿನ ಅಲೆಗಳು

ಮೈಸೂರು,ಜನವರಿ,7,2021(www.justkannada.in):

ನಾನು ಇತ್ತೀಚೆಗೆ ಗೋವಾದ  ಕ್ಯಾಂಡೋಲಿಮ್ ಬೀಚ್, ಕಲಂಗೂಟ್ ಬೀಚ್, ಬಾಗಾ ಬೀಚ್, ಅಂಜುನಾ ಬೀಚ್, ಗೋಕರ್ಣದ ಓಂ ಬೀಚ್, ಕುಡ್ಲೆ ಬೀಚ್ ಹೀಗೆ ಎಲ್ಲಾ ಕಡಲತೀರಗಳಲ್ಲಿ ಗೆಳತಿಯೊಂದಿಗೆ ಸುತ್ತಾಡಿದ್ದೆ. ಆದರೆ ನನ್ನ ಭಾವಕೋಶದಲ್ಲಿ ಭದ್ರವಾಗಿ ಅಡಗಿ ಕುಳಿತಿದ್ದ ಕಣ್ವತೀರ್ಥದ ಕಡಲತೀರವೇ ಕಣ್ಣಮುಂದೆ ಬರುತ್ತಿತ್ತು. ಕರ್ನಾಟಕದ ಗಡಿಯಲ್ಲಿಯೇ ಇರುವ ಕಣ್ವತೀರ್ಥ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿದೆ. ಕಣ್ಚತೀರ್ಥವು ಮಂಗಳೂರಿನಿಂದ ಸುಮಾರು 16 ಕಿ.ಮೀ ದೂರದಲ್ಲಿದೆ. ಈ ಕಡಲತೀರಗಳಲ್ಲಿ ವಿಹರಿಸುತ್ತಾ ನಾನು ಬಾಲ್ಯದಲ್ಲಿ ಆಟವಾಡಿದ ಕಣ್ವತೀರ್ಥದ ಸ್ವಚ್ಛ, ಆಧುನಿಕತೆಯಿಂದ ಕಲುಷಿತಗೊಳ್ಳದ, ಕಡಲತೀರದ ನೆನಪುಗಳನ್ನು ಮೆಲುಕುಹಾಕಿದ್ದೆ. ಕೇರಳ ಪ್ರವಾಸೋದ್ಯಮ ಇಲಾಖೆಯ ಬೀಚುಗಳ ಪಟ್ಟಿಯಲ್ಲಿ ಕಣ್ವತೀರ್ಥದ ಕಡಲತೀರವೂ ಸೇರಿದೆ.

ಉಡುಪಿಯ ಪೇಜಾವರ ಮಠಕ್ಕೆ ಸೇರಿದ ಕಣ್ವತೀರ್ಥ ಮಠದಲ್ಲಿ ನನ್ನ ತಂದೆ ಪಾರುಪತ್ಯಗಾರರಾಗಿದ್ದ (ತುಳು ಭಾಷೆಯಲ್ಲಿ ಶೇನೆರ್ ಎನ್ನುತ್ತಿದ್ದರು) ಕಾರಣ ಅಲ್ಲಿಯ ವಸತಿಗೃಹದಲ್ಲಿ ವಾಸವಾಗಿದ್ದೆವು. ಮಠದ ಹಿಂಭಾಗದಲ್ಲಿಯೇ ಕಡಲತೀರ. ಮಠದ ಮುಂಭಾಗದ ರೈಲ್ವೇ ಹಳಿಯ ಎದುರಿಗಿನ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ಎಡಕ್ಕೆ ತಿರುಗಿ ಕಡಲತೀರ ತಲುಪಬೇಕಿತ್ತು. ಸಂಜೆಹೊತ್ತು ಯಾವಾಗಲೂ ಕಡಲತೀರಕ್ಕೆ ಹೋಗಿ ಕ್ಷಿತಿಜದಲ್ಲಿ ಸೂರ್ಯ ಕೆಂಪು, ಹಳದಿ, ಕಿತ್ತಳೆ ಮಿಶ್ರಿತ ಬಣ್ಣಗಳೊಂದಿಗೆ ಕಣ್ಣುಮುಚ್ಚಾಲೆಯಾಡಿ ಕಂತುವ ಅವರ್ಣನೀಯ ದೃಶ್ಯಗಳನ್ನು ಸವಿಯುತ್ತಿದ್ದೆವು.  ಕಡಲಿಗಿಳಿದು ಮೊಣಕಾಲುಗುಂಟ ನೀರು ಬಂದಾಗ ಪುಳಕಿತಗೊಂಡು ಹಿಂದೆ ಸರಿದು ಪುನಃ ಕಡಳಿಲಿಗಿಳಿಯುವುದು ನಮ್ಮ ಆಟವಾಗಿತ್ತು. ಜಲಚರಗಳು ಮರಳಿನಲ್ಲಿ ಚಿತ್ರವತ್ತಾಗಿ ರಂಗೋಲಿ ಬಿಡಿಸಿರುತ್ತಿದ್ದವು, ಆ ರಂಗೋಲಿಗಳ ಚೆಲುವಿಗೆ ಮನಸೋತು ಅಚ್ಚರಿಗೊಳ್ಳುವುದು. ಆದರೆ ಮರುಕ್ಷಣವೇ ಆ ರಂಗೋಲಿಗಳನ್ನು ಕಡಲತೆರೆ ಅಳಿಸಿಹಾಕುತ್ತಿತ್ತು.  ಕಡಲತೀರದಲ್ಲಿ ಸಿಗುತ್ತಿದ್ದ ವಿವಿಧ ಆಕಾರಗಳ ಕಪ್ಪೆಚಿಪ್ಪುಗಳು, ಸಮುದ್ರನಾಲಗೆಗಳನ್ನೆಲ್ಲಾ ಆರಿಸಿಕೊಂಡು ಬರುತ್ತಿದ್ದೆವು. ಆ ಕಡಲತೀರದಲ್ಲಿ ಹೆಚ್ಚು ಜನ ಇರುತ್ತಿರಲಿಲ್ಲ, ಮೀನುಗಾರರು ಮಾತ್ರ ಇರುತ್ತಿದ್ದರು. ಸಮುದ್ರತೀರವೆಲ್ಲಾ ನಮ್ಮದೇ ಆಗಿತ್ತು. ಅಲ್ಲಿ ನಾವೇ ನಾವಾಗಿ ಬಾನಾಡಿಗಳು ಗೂಡಿಗೆ ತೆರಳುವ ಸುಂದರ ದೃಶ್ಯಕ್ಕೆ ಸಾಕ್ಷಿಯಾಗುತ್ತಿದ್ದೆವು.  ಮರಳಿನಲ್ಲಿ ಚಿತ್ರ ಬರೆಯುತ್ತಿದ್ದೆವು, ಅಕ್ಷರ ಬರೆಯುತ್ತಿದ್ದೆವು,  ಕನಸಿನ ಗೂಡು ಕಟ್ಟುತ್ತಿದ್ದೆವು.

ಈಗಂತೂ ಗೋವಾ ಮತ್ತು ಗೋಕರ್ಣದ ಕಡಲತೀರಗಳಿಗೆ ದೇಶವಿದೇಶಗಳಿಂದ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಅವರಿಗೋಸ್ಕರ ಹಲವು ಬಗೆಯ ಜಲ ಕ್ರೀಡೆಗಳು, ಪ್ಯಾರಾಸೈಲಿಂಗ್ ಎಲ್ಲಾ ಲಭ್ಯವಿವೆ. ಪ್ರವಾಸಿಗರು ಮಸಾಜ್ ಮಾಡಿಸಿಕೊಳ್ಳುತ್ತಾರೆ, ಸೂರ್ಯಸ್ನಾನ ಮಾಡುತ್ತಾರೆ ಎಲ್ಲವನ್ನೂ ಮರೆತು!. ನಾವೂ ಕಾಲುಗಳಿಗೆ ಮಸಾಜ್ ಮಾಡಿಸಿಕೊಂಡೆವು. ಮಸಾಜ್ ಮಾಡುವವರಲ್ಲಿ ಉತ್ತರ ಕರ್ನಾಟಕದವರು ಬಹಳ ಮಂದಿ ಇದ್ದರು. ಅವರೆಲ್ಲಾ ಉದ್ಯೋಗಕ್ಕಾಗಿ ವಲಸೆ ಬಂದವರು. ಪ್ರವಾಸಿಗರು ಹೆಚ್ಚಾಗಿ ಭೇಟಿಕೊಡುವ ಸೂಕ್ತಕಾಲದಲ್ಲಿ ಅಲ್ಲಿಗೆ ಬಂದು ಬೀಡು ಬಿಟ್ಟು ಸಾಕಷ್ಟು ಹಣಗಳಿಸಿ ಊರಿಗೆ ಹಿಂದಿರುಗುವವರು. ಅವರೊಂದಿಗಿನ ನಮ್ಮ ಮಾತುಕತೆ ಸಹ ಪ್ರವಾಸದ ಒಂದು ಮುಖ್ಯ ಭಾಗವೇ. ಊರಿನಲ್ಲಿ ಅವರ ಬದುಕು, ಅವರು ಇಲ್ಲಿಗೆ ಬಂದ ಕಥೆ, ಎಲ್ಲವನ್ನೂ ನಮ್ಮೊಂದಿಗೆ ಹಂಚಿಕೊಂಡರು. ಒಬ್ಬೊಬ್ಬರದೂ ಒಂದೊಂದು ಕಥೆ, ಊರಿನಲ್ಲಿ ಇವರಿಗಾಗಿ ಕಾಯುವ ಮಕ್ಕಳು, ಹೆಂಡತಿ, ತಾಯಿ, ಅಣ್ಣತಮ್ಮಂದಿರು,ಅಕ್ಕತಂಗಿಯರು, ಹೀಗೆ ಸ್ವಲ್ಪ ಹೊತ್ತು ಅವರ ಬದುಕಿನ ಕಥೆಗೆ ನಾವು ಕಿವಿಯಾದೆವು. ಪ್ರವಾಸ ಮಾಡಿದಾಗ ಅಲ್ಲಿಯ ಜನಜೀವನ, ವಲಸಿಗರ ಜೀವನ ಎಲ್ಲದರ ಅನುಭವವಾಗುತ್ತದೆ. ನಾಣ್ಣುಡಿಯೇ ಇದೆಯಲ್ಲಾ, ‘ದೇಶ ಸುತ್ತು, ಕೋಶ ಓದು’ ಎಂದು. ಕೋಶದಲ್ಲಿ ಓದಿದ್ದನ್ನು ದೇಶದಲ್ಲಿ ನೋಡುವುದು, ಮತ್ತೆ ದೇಶ ಸುತ್ತಿದ್ದನ್ನು ಕೋಶದಲ್ಲಿ  ಹುಡುಕಿ ಮೆಲುಕು ಹಾಕುವುದು.

ಈಗ ಹತ್ತು ವರ್ಷಗಳ ಹಿಂದೆ ಕಾಸರಗೋಡಿನ ಬೇಕಲ್ ಕೋಟೆಗೆ ಹೋಗಿದ್ದಾಗ ದಾರಿಯಲ್ಲಿ ಕಣ್ವತೀರ್ಥಕ್ಕೆ ಭೇಟಿಕೊಟ್ಟಿದ್ದೆ. ಚಿಕ್ಕಂದಿನಲ್ಲಿಯೇ ತಂದೆಯ ಉದ್ಯೋಗದ ಸಲುವಾಗಿ ಮಲೆನಾಡಿಗೆ ವಲಸೆ ಬಂದೆವು. ಸಮುದ್ರವನ್ನಾಗಲೀ, ರೈಲನ್ನಾಗಲೀ ನಾನು  ಬಹಳ ವರ್ಷ ನೋಡಿರಲೇ ಇಲ್ಲ. ಮನಸ್ಸು ಯಾವಾಗಲೂ ಅದಕ್ಕಾಗಿ ತುಡಿಯುತ್ತಿತ್ತು. ಆಮೇಲೆ ಸಮುದ್ರ ನೋಡಿದ್ದೇ ಉದ್ಯೋಗ ದೊರೆತ ಮೇಲೆ ಉಡುಪಿ, ಮಂಗಳೂರಿನಲ್ಲಿ. ranja-suragi-2-waves-of-memory

ಮಠದ ಆವರಣ ಬಹಳ ವಿಶಾಲವಾಗಿತ್ತೆಂದು ನನ್ನ ಕಲ್ಪನೆ. ಅಂಗಳದಲ್ಲಿ ಅಂಗಾತ ಮಲಗಿ ಭೂಮಿ-ಆಕಾಶ ಎಲ್ಲಾ ಒಂದೇ ಎಂಬಂತೆ ಅತೀತ ಭಾವದಲ್ಲಿ ಕಳೆದ ದಿನಗಳೆಲ್ಲಾ ನನ್ನ ಮನೋಲಹರಿಯಲ್ಲಿ ಸುಳಿದು ಹೋಯಿತು. ಕಣ್ವ ಮುನಿಗಳು ಇಲ್ಲಿ ತಪಸ್ಸು ಮಾಡಿದರೆಂದೂ ರಾಮ ಅವರ ಮುಂದೆ ಪ್ರತ್ಯಕ್ಷನಾದನೆಂದೂ, ಅದಕ್ಕಾಗಿಯೇ ಕಣ್ವತೀರ್ಥವೆಂಬ ಹೆಸರು ಬಂದಿತೆಂಬ ಪುರಾಣಕಥೆ ಪ್ರಚಲಿತದಲ್ಲಿದೆ.  ಮಠದ ಮುಂಭಾಗ ಸ್ವಲ್ಪ ದೂರ ಬಂದರೆ ಅರಳಿಕಟ್ಟೆ ಇದೆ. ಅರಳೀಕಟ್ಟೆಯ ಮುಂದೆ ರೈಲ್ವೇ ಹಳಿ, ಮಠದ ಹಿಂಭಾಗದಲ್ಲಿ ಒಂದು ಕೊಳವಿತ್ತು. ಆ ಕೊಳದಲ್ಲಿ ತಾವರೆ ಹೂಗಳು, ತಾವರೆ ಎಲೆಯನ್ನು ಅಲ್ಲಿ ಊಟ ಮಾಡಲು ಉಪಯೋಗಿಸುತ್ತಿದ್ದೆವು. ಬೇಸಿಗೆಯ ದಿನಗಳಲ್ಲಿ ಸೆಕೆಯ ನೆವ ಹೇಳಿ-ದೊಡ್ಡವರು ಕೊಳದಲ್ಲಿ ಇಳಿಯಲು ಬಿಡುತ್ತಿರಲಿಲ್ಲವಾದ್ದರಿಂದ- ನೀರಲ್ಲಾಡುವ  ಖುಷಿಗಾಗಿ ಕೊಳಕ್ಕೆ ಇಳಿಯುತ್ತಿದ್ದೆವು. ಈ ಸಿಹಿ ನೆನಪುಗಳ ಜೊತೆಯೇ ಕಹಿ ನೆನಪುಗಳು ಮನಸ್ಸಿನಲ್ಲಿ ಸುಳಿಯುತ್ತವೆ. ಇಲ್ಲಿ ನನ್ನ 4 ವರ್ಷದ ತಂಗಿಯನ್ನು ಕಳೆದುಕೊಂಡಿದ್ದು, ಅಮ್ಮನ ದುಃಖತುಂಬಿದ ಮುಖ, ಅಮ್ಮನಿಗೇ ಟೈಫಾಯ್ಡ್ ಜ್ವರ ಬಂದು ಸಾವು ಬದುಕಿನ ನಡುವೆ ಒದ್ದಾಡಿದ್ದು ಮತ್ತು  ಅಪ್ಪ ಅರಳಿಕಟ್ಟೆಯ ಬಳಿ ಬಿದ್ದು ಕೈ ಮುರಿದುಕೊಂಡು ಸುಮಾರು ದಿನ ಬ್ಯಾಂಡೇಜು ಹಾಕಿಕೊಂಡು ಇದ್ದುದ್ದು. ಯಾವ ಕಡಲತೀರಕ್ಕೆ ಹೋದರೂ ನನಗೆ ನೆನಪಾಗುವುದು, ಕಣ್ವತೀರ್ಥದ ಕಡಲತೀರ, ಇಲ್ಲಿ ಕಳೆದ ದಿನಗಳು. ಇದು ಏಕೆ ಹೀಗೆ ಎಂದು ಮತ್ತೆ ಮತ್ತೆ  ಪ್ರಶ್ನೆ ಏಳುತ್ತಲೇ ಇರುತ್ತದೆ.