ಮೈಸೂರು,ಜನವರಿ,13,2021(www.justkannada.in) : ರಂಗಾಯಣವು ೧೯೮೯ ಜನವರಿ ೧೪ ರಂದು ಸ್ಥಾಪನೆಯಾಗಿದ್ದು, ಈ ದಿನ ರಂಗಾಯಣಕ್ಕೆ ಮಹತ್ವದ ದಿನವಾಗಿದೆ. ರಂಗಾಯಣ ೩೨ ವಸಂತಗಳ ಸಂಭ್ರಮದಲ್ಲಿದೆ. ಬಿ.ವಿ ಕಾರಂತರು ಕಟ್ಟಿ ಬೆಳೆಸಿದ ರಂಗಾಯಣಕ್ಕೆ ಮೈಸೂರಿನ ಹವ್ಯಾಸಿ ಕಲಾವಿದರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.
ರಂಗಾಯಣದ ಶ್ರೀರಂಗದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ರಂಗಾಯಣದ ಪೂರ್ವಭಾವಿ ಸಿದ್ಧತೆ ಹಾಗೂ ಯೋಜನೆಗಳ ಮಾಹಿತಿ ಕುರಿತು ಮಾತನಾಡಿದರು.
ಬಿ.ವಿ.ಕಾರಂತರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ರಂಗಾಯಣ ಸಾಗುತ್ತಿದೆ. ಕೋವಿಡ್ ನಂತಹ ಬಿಕ್ಕಟ್ಟಿನ ಸಮಯದಲ್ಲೂ ರಂಗಾಯಣ ಕ್ರಿಯಾಶೀಲವಾಗಿ ಕಲಾವಿದರಿಗೆ ಉದ್ಯೋಗ ಸೃಷ್ಟಿಸಿ ಮಾನವೀಯತೆ ತೋರಿದೆ. ಅದಲ್ಲದೇ, ಹವ್ಯಾಸಿ ರಂಗಾಸಕ್ತರಿಗೆ ಸುಬ್ಬಯ್ಯನಾಯ್ಡು ಹವ್ಯಾಸಿ ರಂಗ ತರಬೇತಿ ಶಿಬಿರ ಹಾಗೂ ಮಹಿಳೆಯರಿಗೆ ಡಾ.ನಾಗರತ್ನಮ್ಮ ಅಭಿನಯ ರಂಗ ತರಬೇತಿ ಶಿಬಿರ ನಡೆಸಲಾಗುತ್ತಿದೆ ಎಂದು ಹೇಳಿದರು.
“ನಾಳೆ ಸೀತಾ ಸ್ವಯಂವರ ನಾಟಕ ಪ್ರದರ್ಶನ”ನಾಳೆ ಸುಬ್ಬಯ್ಯನಾಯ್ಡು ರಂಗ ತರಬೇತಿ ಶಿಬಿರದ ವಿದ್ಯಾರ್ಥಿಗಳೇ ಅಭಿನಯಿಸಿರುವ ಸೀತಾ ಸ್ವಯಂವರವೆಂಬ ನಾಟಕ ಪ್ರದರ್ಶನಗೊಳ್ಳಲಿದೆ. ಇನ್ನು ಈ ಶಿಬಿರದಲ್ಲಿ ೨೬ ವಿದ್ಯಾರ್ಥಿಗಳಿದ್ದು ಬಹುತೇಕ ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಆಗಿರುವುದು ವಿಶೇಷ ಎಂದು ಮಾಹಿತಿ ನೀಡಿದರು.
ರಂಗಾಯಣದ ಮಹತ್ವಾಕಾಂಕ್ಷಿ ಯೋಜನೆಯಾದ ಪರ್ವ ನಾಟಕದ ಕುರಿತಾಗಿ ಮಾಹಿತಿ ಹಂಚಿಕೊಂಡರು.
key words : January ೧೪-theater-Significant-Day-Rangayana-Director-addanda C.Karyappa