ಬೆಂಗಳೂರು,ಜನವರಿ,13,2021(www.justkannada.in): ಕಲಾವಿದನಿಗೆ ಸಾಮಾಜಿಕ ಜವಾಬ್ದಾರಿ ಮುಖ್ಯ. ಸಮಾಜದ ಮೇಲೆ ದುಷ್ಪರಿಣಾಮವಾಗಬಾರದು ಎನ್ನುವ ಎಚ್ಚರಿಕೆಯನ್ನು ಇಟ್ಟುಕೊಂಡೇ ನಾನು ಸಂಗೀತ ಸಂಯೋಜನೆ ಮಾಡಿದ್ದೇನೆ ಎಂದು ಗಾಯಕ ಹಾಗೂ ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ತಿಳಿಸಿದರು.
‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ವಿಶೇಷ ಸಂಗೀತ ಆಧಾರಿತ ‘ಗಾನ ವಿಮಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಂಗೀತ ಸಂಯೋಜಿಸಿದ 500ಕ್ಕೂ ಹೆಚ್ಚು ಭಾವಗೀತೆಗಳು ಇಂತಹ ಜವಾಬ್ದಾರಿಯನ್ನು ಹೊಂದಿವೆ ಎಂದರು.
ಕೊರೊನಾ ಸಂದರ್ಭದಲ್ಲಿ ಕಲಾವಿದರು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು ಎಂದು ನೊಂದು ನುಡಿದ ಅವರು ಕಲೆಯನ್ನೇ ಆಧರಿಸಿ ಬದುಕುತ್ತಿದ್ದ ಕಲಾವಿದ ಕುಟುಂಬಗಳು ತೊಂದರೆಯನ್ನು ಅನುಭವಿಸುವಂತಾಯಿತು. ಇಂತಹ ಪರಿಸ್ಥಿಯನ್ನು ಯಾರೂ ಊಹಿಸಿರಲಿಲ್ಲ ಎಂದರು.
ತಮ್ಮ ‘ಮನೆಯಂಗಳದಲ್ಲಿ ಕವಿತಾ ಗಾಯನ’ದ ವಿಶಿಷ್ಟತೆಯ ಬಗ್ಗೆ ಮಾತನಾಡಿದ ಅವರು ಮನೆಯಂಗಳದಲ್ಲಿ ಕಲಾವಿದ ಕಾಣಿಸಿಕೊಂಡಾಗ ಇನ್ನಷ್ಟು ಆಪ್ತನಾಗಲು ಸಾಧ್ಯ. ಶಿವಮೊಗ್ಗ ಸುಬ್ಬಣ್ಣ ಅವರ ಮನೆಯಿಂದ ಆರಂಭವಾದ ಈ ಕಾರ್ಯಕ್ರಮ 150 ಮನೆಗಳನ್ನು ತುಂಬಿತು ಎಂದು ಸಂತಸ ವ್ಯಕ್ತಪಡಿಸಿದರು.
ಹಾಡುಗಾರರ ರೇಂಜ್ ಏನು ಎನ್ನುವುದು ಸಂಯೋಜಕನಿಗೆ ಗೊತ್ತಿದ್ದರೆ ಮಾತ್ರ ಒಂದು ಅದ್ಭುತ ಹಾಡು ಸೃಷ್ಟಿಯಾಗುವುದು. ಸಂಗೀತ ಸಂಯೋಜಕನಿಗೆ ಅನುಭವದಿಂದ ಇದು ಗೊತ್ತಾಗುತ್ತದೆ. ಪ್ರತಿ ಗಾಯಕರಿಗೂ ಅವರದ್ದೇ ಆದ ಮಿತಿಗಳಿರುತ್ತವೆ. ಅದನ್ನು ಸಂಯೋಜಕ ತಿಳಿದುಕೊಂಡಾಗಲೇ ಹಾಡು ಅದ್ಭುತವಾಗಿ ಮೂಡಿ ಬರುತ್ತದೆ ಎಂದರು. ಗಾಯಕಿ ಚಿನ್ಮಯಿ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು.
Key words: Social responsibility -important – artists- Upasana Mohan– Music Director