ಬೆಂಗಳೂರು,ಜನವರಿ,15,2021(www.justkannada.in): ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಸಿಡಿದೆದ್ದಿರುವ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ವಾಗ್ದಾಳಿ ಮುಂದುವರೆಸಿದ್ದಾರೆ.
78 ವರ್ಷದ ಯಡಿಯೂರಪ್ಪನವರಿಗೆ ಅಧಿಕಾರದ ವ್ಯಾಮೋಹವಿರುವಾಗ 77 ವರ್ಷದ ನನಗೆ ಇರುವುದಲ್ಲಿ ತಪ್ಪೇನು? ಎಂದು ಬಿಜೆಪಿ ಎಂ ಎಲ್ ಸಿ ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಹೆಚ್.ವಿಶ್ವನಾಥ್, ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬ ರಾಜಕಾರಣ ಅತಿಯಾಗಿದೆ. ಪ್ರಧಾನಿ ಮೋದಿ ಕುಟುಂಬ ರಾಜಕಾರಣ ಟೀಕಿಸುತ್ತಾರೆ. ಕುಟುಂಬ ರಾಜಕಾರಣವೇ ಭ್ರಷ್ಟಾಚಾರವನ್ನು ಪೋಷಿಸುತ್ತದೆ. ಬಿ.ಎಸ್.ವೈ. ಪುತ್ರ ವಿಜಯೇಂದ್ರ ರಾಜಕಾರಣದಲ್ಲಿಲ್ವಾ? ಈಶ್ವರಪ್ಪನವರ ಕುಟುಂಬವೂ ರಾಜಕಾರಣದಿಂದ ಹೊರತಾಗಿಲ್ಲ. ಅಮಿತ್ ಶಾ ಮಗನ ವಿಚಾರದಲ್ಲೂ ಪ್ರಧಾನಿ ಮೋದಿ ಬೇಸರಗೊಂಡಿದ್ದಾರೆ ಎಂದು ಹೇಳಿದರು.
ಸಿಎಂ ಬಿಎಸ್ ಯಡಿಯೂರಪ್ಪ ಅವರ ಬದುಕು ವಿಜಯೇಂದ್ರ ಕೈಲಿದೆ. ಯಡಿಯೂರಪ್ಪನವರ ಬದುಕು ಬಾಲನಾಗಮ್ಮನ ಕಥೆಯಂತಾಗಿದೆ. ಸಿಎಂ ಬಿಎಸ್ ಯಡಿಯೂರಪ್ಪ ಕಾಮಧೇನು. ಇಂದಿಗೂ ನನಗೆ ಯಡಿಯೂರಪ್ಪ ಬಗ್ಗೆ ಕಳಕಳಿಯಿದೆ. ಯಡಿಯೂರಪ್ಪ ನಾಲಿಗೆ ಕಳೆದುಕೊಂಡ ನಾಯಕನಾಗಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳದೇ ಭ್ರಷ್ಟರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ ಎಂದು ಹರಿಹಾಯ್ದರು.
ನಾನು ನಾಯಕತ್ವದ ವಿರುದ್ಧ ಧ್ವನಿ ಎತ್ತಿ ಪಕ್ಷ ಬದಲಿಸಿದ್ದೇನೆ ಹೊರತು ನಾನು ಪಕ್ಷಾಂತರಿಯಲ್ಲ. ಬಾಂಬೆ ಡೇಸ್ ಪುಸ್ತಕದಲ್ಲಿ ಎಲ್ಲಾ ವಿಚಾರಗಳನ್ನು, ಸರ್ಕಾರ ರಚನೆಯ ಪ್ರಹಸನವನ್ನೂ ಬರೆಯುತ್ತೇನೆ ಎಂದರು.
Key words: MLC- h.vishwanath-outrage-cm bs yeddyurappa-hubli