ನಾಗಮಂಗಲ,ಜನವರಿ,18,2021(www.justkannada.in) ನಾವು ಹಾಕಿಕೊಂಡಿರುವ ಗುರಿಯ ಪ್ರಕಾರ 24.50 ಲಕ್ಷ ರೈತರಿಗೆ ಜನವರಿ ಇಲ್ಲವೇ ಫೆಬ್ರವರಿಯೊಳಗೆ ಪೂರ್ಣ ಪ್ರಮಾಣದಲ್ಲಿ ಬೆಳೆ ಸಾಲ ನೀಡಲಾಗುವುದು. ನೂರಕ್ಕೆ ನೂರರಷ್ಟು ಗುರಿ ಮುಟ್ಟಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಸಾಲವನ್ನು ನೀಡಬೇಕೆಂಬುದು ಸಹಕಾರ ಇಲಾಖೆಯ ಗುರಿಯಾಗಿತ್ತು. ಈಗಾಗಲೇ 1917334 (19 ಲಕ್ಷದ 17 ಸಾವಿರದ 334) ರೈತರಿಗೆ 12420.10 (12 ಸಾವಿರದ 420.10) ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ. ಇನ್ನೊಂದೂವರೆ ತಿಂಗಳಿನಲ್ಲಿ 24.50 ಲಕ್ಷ ರೈತರಿಗೆ ಸಾಲ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ನಾನು ಪ್ರವಾಸ ವೇಳೆ ಎಲ್ಲ ಸಹಕಾರ ಬ್ಯಾಂಕ್ ಗಳಿಗೆ ಭೇಟಿ ನೀಡಿದ ವೇಳೆಯಲ್ಲಿ, ಅಲ್ಲಿನ ಪ್ರಗತಿ ಹಾಗೂ ಸಾಲ ನೀಡಿಕೆ ಬಗ್ಗೆ ಮಾಹಿತಿಯನ್ನು ಪಡೆಯುತ್ತಾ ಬಂದಿದ್ದೇನೆ. ಇಲ್ಲೂ ಸಹ ಸಣ್ಣ ಪುಟ್ಟ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಎಲ್ಲವನ್ನೂ ಬಗೆಹರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲದಲ್ಲಿ ಬಿಜೆಪಿ ಶಾಸಕರ ಆಯ್ಕೆ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಕಾರ್ಯಕರ್ತರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ಉಸ್ತುವಾರಿಗಳ ಬದಲಾವಣೆಗಳ ಊಹಾಪೋಹದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಎಲ್ಲ ನಿರ್ಧಾರಗಳು ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು, ಇದು ಅವರ ಪರಮಾಧಿಕಾರ ಎಂದು ಉತ್ತರಿಸಿದರು.
ಮಂಡ್ಯ ಡಿಸಿಸಿ ಬ್ಯಾಂಕ್ ಶಾಖೆಗೆ ಭೇಟಿ
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
ಯಾವ ಯಾವ ವಿಭಾಗದಡಿ ಸಾಲವನ್ನು ನೀಡಲಾಗಿದೆ, ನೀಡಲಾಗುತ್ತಿದೆ? ಹಸು ಸಾಲ, ಕುರಿ ಸಾಲ ಸೇರಿದಂತೆ ಯಾವ ಕೆಟಗರಿಯಡಿ ಸಾಲ ಸೌಲಭ್ಯವನ್ನು ಎಷ್ಟು ಪ್ರಮಾಣದಲ್ಲಿ ಕೊಡಲಾಗುತ್ತಿದೆ? ಬೆಳೆ ಸಾಲವನ್ನು ಎಷ್ಟು ಕೊಡಲಾಗಿದೆ? ಸಾಲ ಮರುಪಾವತಿ ಉತ್ತಮವಾಗಿ ಆಗುತ್ತಿದೆಯೇ? ಎಂಬಿತ್ಯಾದಿ ಮಾಹಿತಿಗಳನ್ನು ಅಧಿಕಾರಿಗಳಿಂದ ಸಚಿವರಾದ ಸೋಮಶೇಖರ್ ಅವರು ಪಡೆದುಕೊಂಡರು.
ಅಲ್ಲದೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಉಮೇಶ್ ಅವರ ಜೊತೆಯೂ ಚರ್ಚೆ ನಡೆಸಿ, ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ರೈತರಿಗೆ ಹಾಗೂ ಸಹಕಾರಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಹೆಚ್ಚೆಚ್ಚು ಹಾಗೂ ಸುಲಭವಾಗಿ ಸಾಲ ಸಿಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಈವರೆಗೆ ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಎಲ್ಲರಿಗೂ ಸಾಲ ಮನ್ನಾ ಮಾಡಲಾಗಿದೆ. ಸರ್ಕಾರದಿಂದ 32 ಕೋಟಿ ರೂಪಾಯಿ ಸಾಲಮನ್ನಾ ಬಾಕಿ ಬರಬೇಕಿದ್ದು, ಅದನ್ನು ಶೀಘ್ರದಲ್ಲಿ ಬಿಡುಗಡೆ ಮಾಡಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
Key words: Distribution – crop loans – all 24.50 lakh -farmers –Minister- ST Somashekhar