ಬೆಂಗಳೂರು:ಜೂ-27:(www.justkannada.in) ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಕುಡಿಯುವ ನೀರಿಗೂ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂದಿನ 5 ವರ್ಷಗಳ ಕಾಲ ಅಪಾರ್ಟ್ ಮೆಂಟ್ ನಿರ್ಮಾಣಕ್ಕೆ ಅವಕಾಶ ನೀಡದೇ ಇರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಸಾಕಷ್ಟು ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗುತ್ತಿದೆ. ಅಪಾರ್ಟ್‌ಮೆಂಟ್ ಗಳಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಕೊರತೆಯಾಗುತ್ತಿದ್ದು, ಅಪಾರ್ಟ್‍ಮೆಂಟ್ ಗಳಿಗೆ ಕುಡಿಯುವ ನೀರು ಪೂರೈಸಲು ಕಷ್ಟವಾಗುತ್ತಿದೆ. ನಗರದಲ್ಲಿ ಇರುವ ನೀರಿನ ಕೊರತೆಯಿಂದ ಅಪಾರ್ಟ್‌ಮೆಂಟ್ ಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಹಲವು ಅಪಾರ್ಟ್ ಮೆಂಟ್ ಮಾರಾಟ ಮಾಡುವ ವೇಳೆ ಕುಡಿಯುವ ನೀರಿನಂತಹ ಮೂಲಸೌಕರ್ಯ ಒದಗಿಸಿಕೊಡುವ ಭರವಸೆ ನೀಡುವುದಿಲ್ಲ. ನೀರಿನ ಅಭಾವದಿಂದ ಅಪಾರ್ಟ್‌ಮೆಂಟ್‌ನಲ್ಲಿರುವ ಬಹುತೇಕರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಎಲ್ಲಾ ಡೆವಲಪರ್ಸ್‌ರ ಸಭೆ ನಡೆಸಿ, ಅವರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗುವುದು. ಬಳಿಕ ತೀರ್ಮಾನ ಮಾಡಲಾಗುವುದು. ಐದು ವರ್ಷದ ಬಳಿಕ ನಗರಕ್ಕೆ ವಿವಿಧ ಮೂಲಗಳಿಂದ ನೀರು ಸರಬರಾಜು ಆಗಲಿದ್ದು, ಈ ಸಮಸ್ಯೆ ನೀಗಲಿದೆ ಎಂದರು.
ನೀರಿನ ಸಮಸ್ಯೆ ನೀಗಿಸಲು ಕಾವೇರಿ ಐದನೇ ಹಂತದ ಯೋಜನೆ ಪ್ರಗತಿಯಲ್ಲಿದೆ. ಆದರೆ ಇದು ಸಾಲದು. ಹೀಗಾಗಿ ಲಿಂಗನಮಕ್ಕಿಯಿಂದ ನೀರು ತರಲು ಡಿಪಿಆರ್ ಮಾಡಲು ಸೂಚಿಸಿದ್ದೇನೆ. ಇದಕ್ಕೂ ವಿರೋಧ ಕೇಳಿ ಬಂದಿದೆ. ಡಿಪಿಆರ್ ಬಳಿಕ ಸಾಧಕ ಬಾಧಕವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.