ಮಂಡ್ಯ,ಜನವರಿ,26,2021(www.justkannada.in): ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಹಾಗೂ ಸಹಕಾರ ಬಹಳ ಮುಖ್ಯವಾಗುತ್ತದೆ. ಇಂದು ಸಹಕಾರ ಇಲಾಖೆ ಮುಖಾಂತರ ರಾಜ್ಯದ ಮನೆ ಮನೆಗೆ ಮುಟ್ಟುತ್ತಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್ ಡಿ) ನೂತನ ಕಟ್ಟಡದ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಾಲ ಸಮರ್ಪಕವಾಗಿ ತಲುಪಿದೆಯೇ ಎಂಬ ಬಗ್ಗೆ ನಾನು ಈಗ ಹಲವಾರು ದಿನಗಳಿಂದ ಜಿಲ್ಲೆಗಳಿಗೆ ಪ್ರವಾಸ ಮಾಡಿ ಡಿಸಿಸಿ ಬ್ಯಾಂಕ್ ಗಳ ಪ್ರಗತಿ ಪರಿಶೀಲನೆ ಮಾಡುತ್ತಿದ್ದೇನೆ. ಮಂಡ್ಯದ ನಾಗಮಂಗಲ, ಪಾಂಡವಪುರ ಶಾಖೆಗಳಿಗೂ ನಾನು ಭೇಟಿ ಕೊಟ್ಟಿದ್ದು, ಅಲ್ಲಿನ ಕಾರ್ಯವೈಖರಿ ತೃಪ್ತಿ ತಂದಿದೆ ಎಂದು ಹೇಳಿದರು.
ಬಡವರ ಬಂಧು, ಸ್ತ್ರೀ ಶಕ್ತಿ ಕಾಯಕ, ಎಸ್ಸಿ ಎಸ್ಟಿ ಹಾಗೂ ಅಲ್ಪಾವಧಿ, ಮಧ್ಯಮಾವಧಿ ಸಾಲಗಳ ಅಡಿಯಲ್ಲಿ 15300 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಶೇಕಡಾ 82ರಷ್ಟು ಗುರಿ ಸಾಧಿಸಲಾಗಿದೆ. ಇದೇ ಫೆಬ್ರವರಿ ಮಾಸಾಂತ್ಯದೊಳಗೆ ನೂರಕ್ಕೆ ನೂರು ಗುರಿ ಸಾಧಿಸಲು ನಾನು ಪ್ರತಿ ಡಿಸಿಸಿ ಬ್ಯಾಂಕ್ ಗಳಿಗೆ ಖುದ್ದು ಭೇಟಿ ನೀಡಿದಂತಹ ಸಂದರ್ಭದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸೂಚನೆ ನೀಡುತ್ತಿದ್ದೇನೆ. ಮಾರ್ಚ್ ಒಳಗೆ ಸಾಲ ನೀಡಿಕೆ ಗುರಿ ತಲುಪುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸಾಲ ಹೆಚ್ಚು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದ್ದರೂ ಶೇ.98ರಷ್ಟು ಸಾಲ ವಸೂಲಾತಿಯಾಗಿದೆ. ನಬಾರ್ಡ್ ನಿಂದ ಬಂದ 1785 ಕೋಟಿ ಅನುದಾನದಲ್ಲಿ ಮಂಡ್ಯ ಡಿಸಿಸಿ ಬ್ಯಾಂಕ್ ಗೆ 200 ಕೋಟಿ ರೂಪಾಯಿ ಹಂಚಿಕೆಯಾಗಿದ್ದು, ಅದರ ಸಮರ್ಪಕ ವಿತರಣೆ ಸಹ ಆಗಿರುವುದು ಕಂಡುಬಂದಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಸಚಿವರಾದ ನಾರಾಯಣ ಗೌಡ ಅವರು ಮಂಡ್ಯ ಜಿಲ್ಲೆಗೆ ವಿಶೇಷ ಅನುದಾನ ಕೊಟ್ಟು ಅಭಿವೃದ್ಧಿ ಮಾಡುವಂತೆ ಪ್ರತಿ ಬಾರಿಯ ಸಂಪುಟ ಸಭೆ ವೇಳೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತಲೇ ಇರುತ್ತಾರೆ. ಅವರು ಯಾವ ಖಾತೆಯನ್ನು ಕೊಟ್ಟರೂ ಸಮರ್ಥವಾಗಿ ನಿಭಾಯಿಸುವ ಶಕ್ತಿಯನ್ನು ಹೊಂದಿದ್ದಾರೆ. ತೋಟಗಾರಿಕೆ ಅಭಿವೃದ್ಧಿ ಸಂಬಂಧ ಕೇಂದ್ರ ಸರ್ಕಾರದಿಂದ 500 ಕೋಟಿ ರೂಪಾಯಿ ಅನುದಾನ ತಂದು ಕೊಟ್ಟು ದಾಖಲೆ ಬರೆದಿದ್ದಾರೆ. ಕೆಲಸ ಮಾಡಲು ಖಾತೆ ಮುಖ್ಯವಲ್ಲ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಅಂಬರೀಷ್ ಚಿಂತನೆ ಎಲ್ಲರಿಗೂ ಮಾದರಿ..
ಅಂಬರೀಷ್ ಅವರು ನನಗೆ ಆತ್ಮೀಯರಾಗಿದ್ದರು. ಅವರು ನಮ್ಮ ವಿಧಾನಸಭಾ ಕ್ಷೇತ್ರವಾದ ಯಶವಂತಪುರದಲ್ಲಿ 1700 ಮನೆಗಳನ್ನು ಮಂಜೂರು ಮಾಡಿದ್ದರು. ಇನ್ನು ಕೆಲವೇ ದಿನಗಳಲ್ಲಿ ಈ ಮನೆಗಳಲ್ಲಿ ಫಲಾನುಭವಿಗಳು ವಾಸ ಮಾಡಲಿದ್ದಾರೆ ಎಂದು ತಿಳಿಸಿದ ಸಚಿವರಾದ ಸೋಮಶೇಖರ್ ಅವರು, ಅಂಬರೀಷ್ ಅವರು ವಸತಿ ಸಚಿವರಾಗಿದ್ದಾಗ 30 ಜಿಲ್ಲೆಯಲ್ಲಿ ವಸತಿರಹಿತರ ಪಟ್ಟಿ ಮಾಡಿಸಿದ್ದರು. ಇದರಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ಹಾಗೂ ಮನೆ ಇಲ್ಲದವರಿಗೆ ಮನೆ ಎಂಬ ಚಿಂತನೆಯನ್ನು ಅವರು ಮಾಡಿದ್ದರು. ಈಗ ಅದೇ ಅಡಿಪಾಯದಡಿ ರಾಜ್ಯ ಸರ್ಕಾರಗಳು ಮನೆ ಕಟ್ಟಿಕೊಡಲು ಅನುಕೂಲವಾದಂತಾಗಿದೆ. ಈಗ ಈ ಮಾದರಿಯಲ್ಲಿ 1 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಯೋಜನೆ ನಮ್ಮ ಸರ್ಕಾರದಿಂದ ಪ್ರಾರಂಭವಾಗಿದ್ದು, ನನ್ನ ಕ್ಷೇತ್ರದಲ್ಲಿ ಇದೇ ಯೋಜನೆಯಡಿ 14 ಸಾವಿರ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಂಸದರಾದ ಸುಮಲತಾ ಅಂಬರೀಷ್ ಮಾತನಾಡಿ, ಕೆಲವು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಎಲ್ಲಿ ಹೋದರೂ ಕನ್ನಡವನ್ನು ಮಾತನಾಡುವವರು ಸಿಗುತ್ತಿಲ್ಲ. ಈ ಬಗ್ಗೆ ನಾನು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಮನ್ ಅವರ ಗಮನಕ್ಕೂ ತಂದಿದ್ದೆ. ಆಗ ಅವರು ಬ್ಯಾಂಕ್ ನಲ್ಲಿ ಆಯಾ ಪ್ರಾದೇಶಿಕ ಭಾಷೆ ಬರುವವರು ಇರಲೇಬೇಕು. ಇಲ್ಲದಿದ್ದರೆ ಇದ್ದವರೇ ಕಲಿತು ಮಾತಮಾಡಬೇಕು ಎಂದು ಆದೇಶ ಹೊರಡಿಸಿದ್ದರು. ಇಷ್ಟಾದರೂ ಅದರ ಸಮರ್ಪಕ ಜಾರಿಗೆ ಬ್ಯಾಂಕ್ ಗಳು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವರಾದ ನಾರಾಯಣ ಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಉಮೇಶ್, ಪಿಎಲ್ ಡಿಬಿ ಬ್ಯಾಂಕ್ ಅಧ್ಯಕ್ಷರಾದ ಬೇಲೂರು ಸೋಮಶೇಖರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Key words: touching – house -through – Cooperative Department-Minister- ST Somashekhar