ಬೆಂಗಳೂರು:ಮೇ-5: ರಾಜ್ಯ ಸರಕಾರದ ಸಾಲಮನ್ನಾ ಯೋಜನೆ ರೈತರ ಪಾಲಿಗೆ ಕೇವಲ ‘ಸಾಂತ್ವನ’ ಯೋಜನೆಯಾಗಿ ಪರಿಣಮಿಸಿದೆ.
ಫಲಾನುಭವಿಗಳ ಮನೆಗೆ ‘ಋುಣಮುಕ್ತಿ’ ಪತ್ರ ಕಳುಹಿಸುವುದಾಗಿ ಹೇಳಿದ್ದ ಸಿಎಂ ಕುಮಾರಸ್ವಾಮಿ ಅವರು ಇದೀಗ ಸಾಂತ್ವನ ಪತ್ರ ಕಳುಹಿಸುತ್ತಿದ್ದು, ಅದರಲ್ಲಿ ಮನ್ನಾ ಆಗಲಿರುವ ಮೊತ್ತದ ಬಗ್ಗೆ ಉಲ್ಲೇಖವಿಲ್ಲ!
ಮೇ 23ಕ್ಕೆ ಮೈತ್ರಿ ಸರಕಾರದ ರೈತರ ಸಾಲ ಮನ್ನಾದ ಕನಸಿಗೂ ವರ್ಷ ಭರ್ತಿಯಾಗುತ್ತದೆ. ಆದರೆ ದಿನಗಳು ಉರುಳಿ ಹೋಗುತ್ತಿದ್ದರೂ ಸಾಲ ಮನ್ನಾದ ಜಟಿಲತೆ-ಗೊಂದಲಗಳು ಹಾಗೇ ಉಳಿದುಕೊಂಡಿದೆ. ರೈತರಿಗೆ ಖುದ್ದು ಸಿಎಂ ಕುಮಾರಸ್ವಾಮಿ ಹೆಸರಿನಲ್ಲಿ ಕಳುಹಿಸುತ್ತಿರುವ ಭರವಸೆ ಪತ್ರದಲ್ಲೇ ವೈಯಕ್ತಿವಾಗಿ ಮನ್ನಾವಾಗಲಿರುವ ಮೊತ್ತದ ಬಗ್ಗೆ ಉಲ್ಲೇಖಿಸದೇ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಜಾಣತನವನ್ನು ಸರಕಾರ ಪ್ರದರ್ಶನ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸರಕಾರ ಕಳುಹಿಸಿದ ಪತ್ರದಲ್ಲಿ ಕೇವಲ ಆಶಯ, ಇಸ್ರೇಲ್ ಕೃಷಿ ಹಾಗೂ ಕವಿವಾಣಿಗಳೇ ವ್ಯಾಪಿಸಿಕೊಂಡಿದೆ.
ಆದರೆ ಯೋಜನೆಗೆ ಆಯ್ಕೆಯಾದ ಫಲಾನುಭವಿಯ ಸಾಲ ಎಷ್ಟು, ಮನ್ನಾ ಆಗುವ ಮೊತ್ತ ಎಷ್ಟು, ಹೊಸ ಸಾಲದ ಪ್ರಕ್ರಿಯೆ ಏನು ? ಎಂಬಿತ್ಯಾದಿ ವಿವರಗಳೇ ಇಲ್ಲ.
ವಾಸ್ತವ ಸ್ಥಿತಿ ಏನು ?
ಸಹಕಾರ ಇಲಾಖೆ ಈಗಾಗಲೇ ಘೋಷಿಸಿಕೊಂಡಿರುವ ಮಾಹಿತಿ ಪ್ರಕಾರ ಈ ಯೋಜನೆಯಿಂದ 20.38 ಲಕ್ಷ ರೈತರಿಗೆ 9448.61 ಕೋಟಿ ರೂ. ಸೌಲಭ್ಯ ದೊರೆಯಲಿದೆ. ಜೂನ್ ಅಂತ್ಯದ ವೇಳೆಗೆ ಸಾಲ ಮನ್ನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಲಾಗುತ್ತದೆ ಎಂಬ ಭರವಸೆಯನ್ನು ಸರಕಾರ ನೀಡುತ್ತಲೇ ಇದೆ. ಆದರೆ ಆಯ್ಕೆಗೊಂಡ ಫಲಾನುಭವಿಗಳಿಗೆ ಇದುವರೆಗೆ ಕೇವಲ 2630 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಫಲಾನುಭವಿಗಳ ಸಂಖ್ಯೆ ಇಷ್ಟೇ ಪ್ರಮಾಣದಲ್ಲಿದ್ದು, ಇದುವರೆಗೆ 2800 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟಾರೆಯಾಗಿ ರಾಜ್ಯ ಸರಕಾರ ಇದುವರೆಗೆ ಸಾಲ ಮನ್ನಾಕ್ಕೆ ವಿನಿಯೋಗಿಸಿರುವುದು 5430 ಕೋಟಿ ರೂ. ಮಾತ್ರ.
ಪ್ರೋತ್ಸಾಹ ಧನದ ಸೊಲ್ಲಿಲ್ಲ
ಸಾಲ ಮನ್ನಾ ಯೋಜನೆ ಜಾರಿಗೆ ತರುವ ವೇಳೆ ಸರಕಾರ ನೀಡಿದ್ದ 25 ಸಾವಿರ ರೂ. ಪ್ರೋತ್ಸಾಹ ಧನದ ಬಗ್ಗೆ ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳು ಈಗ ಸೊಲ್ಲೆತ್ತುತ್ತಿಲ್ಲ. ಸಾಲವನ್ನು ವ್ಯವಸ್ಥಿತವಾಗಿ ಮರು ಪಾವತಿಸುತ್ತಿದ್ದ ಲಕ್ಷಾಂತರ ರೈತರು ಈ ಯೋಜನೆಯಿಂದ ಹೊರಗೆ ಉಳಿಯುತ್ತಿದ್ದಾರೆ. ಹೀಗಾಗಿ ಈಗಾಗಲೇ ಸಾಲ ಮರು ಪಾವತಿಸಿದ ರೈತರಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಸರಕಾರ ಘೋಷಿಸಿತ್ತು. ಆದರೆ ಇದುವರೆಗೆ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
1000 ಕೋಟಿ ಉಳಿತಾಯ
ಸಾಲ ಮನ್ನಾ ಯೋಜನೆ ಜಟಿಲವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೆಲ ನಿರ್ಬಂಧವನ್ನು ಜಾರಿಗೆ ತಂದಿದೆ. ಫಾರ್ಮ್ ನಂಬರ್ 52ರಲ್ಲಿ ಕೆಲ ಮಾಹಿತಿಗಳನ್ನು ಕೇಳಲಾಗಿದೆ. ಸರಕಾರಿ ನೌಕರರು, ಸಹಕಾರ ಇಲಾಖೆ ನೌಕರರು, ಮೂರು ವರ್ಷದ ಅವಧಿಯಲ್ಲಿ ಆದಾಯ ತೆರಿಗೆ ಕಟ್ಟಿದ ರೈತರು, ಒಂದಕ್ಕಿಂತ ಹೆಚ್ಚು ಕಡೆ ಸಾಲ ಮಾಡಿದ್ದರೆ ಒಂದಕ್ಕೆ ಮಾತ್ರ ಯೋಜನೆ ಅನ್ವಯಗೊಳಿಸುವುದು ಈ ಪಟ್ಟಿಯಲ್ಲಿ ಸೇರಿದೆ. ಇದರಿಂದಾಗಿ ಸುಮಾರು 1000 ಕೋಟಿ ರೂಪಾಯಿಯನ್ನು ಸರಕಾರ ಉಳಿತಾಯ ಮಾಡಿದೆ.
8 ಲಕ್ಷ ರೈತರ ಪಟ್ಟಿ
ರಾಜ್ಯ ಸರಕಾರ ಈಗಾಗಲೇ 6 ಲಕ್ಷ ಜನರನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಿದ್ದು, ಸದ್ಯದಲ್ಲೇ ಇನ್ನೂ 8 ಲಕ್ಷ ಜನರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಸಹಕಾರ ಇಲಾಖೆ ಮೂಲಗಳಿಂದ ಈ ಮಾಹಿತಿ ಲಭ್ಯವಾಗಿದ್ದು, ಫಾರ್ಮ್ ನಂಬರ್ 52ನ್ನು ಸಲ್ಲಿಕೆಯಾದ ಬಳಿಕ ನಡೆದ ಪರಿಶೀಲನೆ ಸಂದರ್ಭದಲ್ಲಿ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಪತ್ರದಲ್ಲಿ ಏನಿದೆ?
* ಆತ್ಮೀಯ ರೈತ ಬಂಧುಗಳೇ ಎಂಬ ಒಕ್ಕಣೆಯೊಂದಿಗೆ ಸಾಲ ಮನ್ನಾ ಫಲಾನುಭವಿಗಳಿಗೆ ಬರೆದ ಪತ್ರ ಇದು.
* ಅನ್ನದಾತನ ಮೊಗದಲ್ಲಿ ತೃಪ್ತಿಯ ನಗೆ, ನಡೆಯಲ್ಲಿ ಆತ್ಮವಿಶ್ವಾಸ ಉಕ್ಕಿಸುವ ಸಂಕಲ್ಪವನ್ನು ಸಾಕಾರಕ್ಕೆ ಸರಕಾರ ಮುನ್ನಡೆದಿದೆ.
* ಸಾಲದಲ್ಲಿ ನಲುಗುತ್ತಿರುವ ಸುಮಾರು 40 ಲಕ್ಷ ರೈತರಲ್ಲಿ ನಿರಾಳ ಭಾವ ಮೂಡಿಸುವ ಆಶಯ ನಮ್ಮದು.
* ಈಗಾಗಲೇ 6 ಲಕ್ಷ ರೈತರು ಸಾಲದಿಂದ ಮುಕ್ತರಾಗಿದ್ದಾರೆ. ಸದ್ಯದಲ್ಲೇ ಎಲ್ಲ ಅರ್ಹ ರೈತರ ಸಾಲ ಮನ್ನಾವಾಗುತ್ತದೆ. ನೀವೂ ಸಹ ಈ ಸೌಲಭ್ಯದ ಫಲಾನುಭವಿ.
ಈಗಿನ ಸ್ಥಿತಿ ಏನು?
ಸಹಕಾರಿ ಸಂಘಗಳ ಸಾಲ ಮನ್ನಾಕ್ಕೆ ಬೇಕಾದ ಮೊತ್ತ
9448.61 ಕೋಟಿ
ಇದುವರೆಗಿನ ವಿನಿಯೋಗ
2630 ಕೋಟಿ ರೂ.
ಕೃಪೆ:ವಿಜಯಕರ್ನಾಟಕ