ಬೆಂಗಳೂರು ಫೆಬ್ರವರಿ 5,2021(www.justkannada.in): ಫೆಬ್ರವರಿ ಅಂತ್ಯದಲ್ಲಿ ಹಾವೇರಿಯಲ್ಲಿ ನಡೆಯಬೇಕಿದ್ದ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಇಂದು ಈ ಕುರಿತು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯ ನಂತರ ಸಚಿವ ಅರವಿಂದ ಲಿಂಬಾವಳಿ ಈ ವಿಚಾರ ಪ್ರಕಟಿಸಿದ್ದಾರೆ. ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ನಡೆದ ಸಿದ್ಧತೆಗಳು ಇನ್ನು ಅಪೂರ್ಣವಾಗಿದೆ. ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದರಿಂದ ಕೋವಿಡ್ ನಿಯಮಗಳ ಪಾಲನೆಯು ಕಷ್ಟಕರವಾಗುತ್ತದೆ. ಫೆಬ್ರವರಿ ಅಂತ್ಯಕ್ಕೆ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆ ಇರುವುದರಿಂದ ಅನಂತರ ಮಾರ್ಚ್ 9ಕ್ಕೆ ಮತ್ತೊಂದು ಸಭೆ ನಡೆಸಿ ಸಮ್ಮೇಳನ ನಡೆಸುವ ದಿನಾಂಕ ನಿರ್ಧರಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಗೃಹ ಹಾಗೂ ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ತೋಟಗಾರಿಕಾ ಸಚಿವ ಆರ್. ಶಂಕರ್, ಶಾಸಕ ನೆಹರು ಓಲೇಕಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ: ಮನು ಬಳಿಗಾರ್ ಹಾಗೂ ಹಾವೇರಿ ಜಿಲ್ಲಾಡಳಿತದ ಅಧಿಕಾರಿಗಳು ಭಾಗವಹಿಸಿದ್ದರು.
Key words: Decision -postpone -86th Kannada sahitya-sammelana-Minister- Arvind Limbavali.