* ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಉಸ್ತುವಾರಿ ಸಚಿವರ ಭೇಟಿ
* ಎಲ್ಲೆಂದರಲ್ಲಿ ಕಸ ಎಸೆದರೆ ಜೈಲಗಟ್ಟಿ; ಸಚಿವರಾದ ಸೋಮಶೇಖರ್
* ಸಚಿವರಾದ ಸೋಮಶೇಖರ್ ನೇತೃತ್ವದಲ್ಲಿ ಮೈಸೂರು ಸ್ವಚ್ಛತೆಯಲ್ಲಿ ನಂಬರ್ 1 ಆಗಲಿದೆ; ಜಿ.ಟಿ.ದೇವೇಗೌಡ
ಮೈಸೂರು: ಸಚಿವರಾದವರು ದೇವಸ್ಥಾನಗಳಿಗೆ ಹೋಗುತ್ತಾರೆ. ಗುದ್ದಲಿಪೂಜೆಗಳಿಗೆ ಹೋಗುತ್ತಾರೆ. ಆದರೆ, ಕಸ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ್ದಾರೆಂದರೆ ಅವರ ಬದ್ಧತೆ ಹಾಗೂ ಇಚ್ಛಾಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಇದು ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಕಾರ್ಯವೈಖರಿಯನ್ನು ಸೂಚಿಸುತ್ತದೆ ಎಂದು ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕ ಒಕ್ಕೂಟದ ಅಧ್ಯಕ್ಷರಾದ ಡಿ. ಮಾದೇಗೌಡ ಹೇಳಿದರು.
ಕುಂಬಾರಕೊಪ್ಪಲಿನಲ್ಲಿರುವ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಭೇಟಿ ನೀಡಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾದೇಗೌಡ ಅವರು, ಇಂತಹ ಕ್ರಿಯಾಶೀಲ ಉಸ್ತುವಾರಿ ಸಚಿವರು ಮೈಸೂರು ಜಿಲ್ಲೆಗೆ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಹೇಳಿದರು.
ಮೊದಲು ಸ್ವಚ್ಛತೆ ವಿಷಯದಲ್ಲಿ ಮೈಸೂರು ನಂಬರ್ ಒನ್ ಸ್ಥಾನದಲ್ಲಿ ಬರುತ್ತಿತ್ತು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಎರಡು, ಮೂರನೇ ಸಹಿತ ವಿವಿಧ ಸ್ಥಾನಗಳು ಲಭಿಸುತ್ತಾ ಬಂದಿದೆ. ಆದರೆ, 2021ರ ಈ ವರ್ಷ ಕೇಂದ್ರದಿಂದ ಕೊಡಮಾಡುವ ಸ್ವಚ್ಛತಾ ನಗರಿಯ ನಂಬರ್ 1 ಗರಿ ಖಂಡಿತವಾಗಿಯೂ ಮೈಸೂರಿಗೆ ಲಭಿಸಲಿದೆ. ಕಾರಣ ನಮಗೆ ಕ್ರಿಯಾಶೀಲ ನಾಯಕತ್ವ ಹಾಗೂ ಕಾಳಜಿಯುಳ್ಳ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಲಭಿಸಿದ್ದಾರೆ ಎಂದು ತಿಳಿಸಿದರು.
ಮೈಸೂರು ನಗರ ವ್ಯಾಪ್ತಿಯಲ್ಲಿ 4 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕರು ಹಾಗೂ ಪೊಲೀಸ್ ಅಧಿಕಾರಿಗಳ ಸಹಭಾಗಿತ್ವದಲ್ಲಿ ಸರ್ವೇಕ್ಷಣವಾಗಬೇಕು. ಆ ಮೂಲಕ ಮೈಸೂರಿನ
65 ವಾರ್ಡ್ ಗಳಲ್ಲಿಯೂ ಸ್ವಚ್ಛತೆ ಬರುತ್ತದೆ ಎಂದು ಮಾದೇಗೌಡ ಅವರು ಸಲಹೆ ನೀಡಿದರು.
ಎಲ್ಲೆಂದರಲ್ಲಿ ಕಸ ಎಸೆದರೆ ಜೈಲಗಟ್ಟಿ; ಸಚಿವರಾದ ಸೋಮಶೇಖರ್
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಮಾತನಾಡಿ, ಮಾದೇಗೌಡ ಅವರು ಘನತ್ಯಾಜ್ಯ ನಿರ್ವಹಣೆಯನ್ನು ಅತ್ಯುತ್ತಮ ಮಟ್ಟದಲ್ಲಿ ಕೊಂಡೊಯ್ಯುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಕಳೆದ ವಾರ ಮುಡಾದಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಸಭೆ ನಡೆಸಿ ಸ್ವಚ್ಛತೆ ಬಗ್ಗೆ ಚರ್ಚೆ ನಡೆಸಿ ಪರಿಶೀಲನೆಯನ್ನೂ ನಡೆಸಲು ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೂ ಸಹ ಕೆಲವರು ಎಲ್ಲೆಂದರಲ್ಲಿ ಕಸ, ತ್ಯಾಜ್ಯ, ಡಬ್ರೀಸ್ ಗಳನ್ನು ಎಸೆಯುತ್ತಿದ್ದಾರೆ. ಇಂತಹ ಕೆಲಸ ಮಾಡುವವರನ್ನು ಹಿಡಿದು ಜೈಲು ಶಿಕ್ಷೆ ನೀಡಿ, ದಂಡ ಕಟ್ಟಿಸಿಕೊಂಡರೆ ಅದಾಗಿಯೇ ಕಡೆಮೆಯಾಗುತ್ತದೆ. ಇದಕ್ಕೋಸ್ಕರ ಪೊಲೀಸ್ ಆಯುಕ್ತರಿಗೆ ಹಾಗೂ ಕಾರ್ಪೋರೇಶನ್ ಆಯುಕ್ತರಿಗೆ ಸೂಚನೆ ಕೊಡಲಾಗಿದ್ದು, ಸಾರ್ವಜನಿಕರೂ ಸಹಕಾರ ಕೊಡಬೇಕಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಬೆಂಗಳೂರಿನಲ್ಲೂ ಇದೇ ಮಾದರಿ; ಸಚಿವರ ಇಂಗಿತ
ಬೆಂಗಳೂರಿನಲ್ಲಿಯೂ ಸಹ ಇದೇ ಮಾದರಿಯ ಘನತ್ಯಾಜ್ಯ ನಿರ್ವಹಣೆ ಮಾಡುವ ಕೆಲಸವನ್ನು ಮಾಡುತ್ತೇವೆ. ಇದಕ್ಕಾಗಿ ಬೆಂಗಳೂರಿಗೆ ಮಾದೇಗೌಡ ಅವರನ್ನೂ ಸಹ ಕರೆಸಿ ಚರ್ಚೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಕಾರ್ಪೋರೆಟರ್ ಆದವರು ಜಾಗವನ್ನು ಗುರುತಿಸಿ ಕಸ ವಿಲೇವಾರಿ ಬಗ್ಗೆ ನೋಡಿಕೊಂಡು ಸ್ವಚ್ಛತೆಗೆ ಆದ್ಯತೆ ಕೊಡುವ ಕೆಲಸವನ್ನು ಮಾಡಬೇಕು. ಆ ಮೂಲಕ ಬದ್ಧತೆಯನ್ನು ತೋರಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಚಿವರಾದ ಸೋಮಶೇಖರ್ ನೇತೃತ್ವದಲ್ಲಿ ಮೈಸೂರು ಸ್ವಚ್ಛತೆಯಲ್ಲಿ ನಂಬರ್ 1 ಆಗಲಿದೆ; ಜಿ.ಟಿ.ದೇವೇಗೌಡ
ಶಾಸಕರಾದ ಜಿ.ಟಿ.ದೇವೇಗೌಡ ಮಾತನಾಡಿ, ಯಾವುದೇ ಪಕ್ಷದವರಿರಲಿ, ಯಾವುದೇ ಶಾಸಕರ ವಿಧಾನಸಭಾ ಕ್ಷೇತ್ರಗಳಿರಲಿ ಪಕ್ಷಭೇದ ತೋರದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾರೆ ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಕೆಲಸ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಮೈಸೂರು ನಗರವನ್ನು ವರ್ಷವಿಡೀ ಸ್ವಚ್ಛತಾ ನಗರಿಯಾಗಿ ರೂಪಿಸುವಲ್ಲಿ ಯಾವುದೇ ಸಂಶಯವಿಲ್ಲ. ಸ್ವಚ್ಛತೆಗೆ ಮೈಸೂರು ಮತ್ತೊಮ್ಮೆ ನಂಬರ್ 1 ಆಗಲಿದೆ. ಅವರು ಘನತ್ಯಾಜ್ಯ ನಿರ್ವಹಣೆ ಪದ್ಧತಿಯನ್ನು ಅವರ ಕ್ಷೇತ್ರದಲ್ಲಿಯೂ ಮಾಡುತ್ತಾರೆ ಎಂದು ತಿಳಿಸಿದರು.
2 ಬಾರಿ ರಾಜ್ಯ ಸುತ್ತಿದ ಸಚಿವರಾದ ಎಸ್ ಟಿ ಎಸ್; ಜಿಟಿಡಿ
ಯಾವ ಸಚಿವರೂ ಸಹ ರಾಜ್ಯವನ್ನು ಎರಡು ಬಾರಿ ಸುತ್ತಿಲ್ಲ. ಆದರೆ, ಸಚಿವರಾದ ಸೋಮಶೇಖರ್ ಅವರು ಈಗಾಗಲೇ ಎರಡು ಬಾರಿ ರಾಜ್ಯವನ್ನು ಸುತ್ತಿ ಬಂದಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ನೀಡಲು ಒಂದು ಬಾರಿ ಹಾಗೂ ಆರ್ಥಿಕ ಸ್ಪಂದನ ಕಾರ್ಯಕ್ರಮಗಳ ಮೂಲಕ ಮತ್ತೊಂದು ಬಾರಿ ರಾಜ್ಯದ ವಿವಿಧೆಡೆ ಖುದ್ದು ಭೇಟಿ ನೀಡಿದ್ದಾರೆ. ಅವರು ಸಕ್ರಿಯರಾಗಿ ಎಲ್ಲೆಡೆ ಸಂಚರಿಸುವುದಲ್ಲದೆ, ಮೈಸೂರು ಜಿಲ್ಲೆಗೆ ಸಹ ವಾರದಲ್ಲಿ ಎರಡು ಬಾರಿ ಭೇಟಿ ನೀಡುತ್ತಿದ್ದಾರೆ ಎಂದು ಶಾಸಕರಾದ ಜಿ.ಟಿ.ದೇವೇಗೌಡ ಶ್ಲಾಘಿಸಿದರು.
ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕ ಪರಿಶೀಲಿಸಿದ ಸಚಿವ ಸೋಮಶೇಖರ್
ಮೈಸೂರಿನ ಕುಂಬಾರಕೊಪ್ಪಲಿನ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಕಸ ವಿಂಗಡಣೆ ಹಾಗೂ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.
ಕಸದಿಂದಲೂ ಹಣ ಗಳಿಕೆ; ಸಚಿವರಿಗೆ ಮಾಹಿತಿ
ಮೈಸೂರು ನಾಗರಿಕರಿಂದ ಒಣ ಕಸ ಹಾಗೂ ಹಸಿ ಕಸಗಳ ಸಂಗ್ರಹಣೆ ಬಳಿಕವೂ ಸರಿಯಾಗಿ ಅವುಗಳ ಬಿಭಜನೆಯಾಗಿರುವುದಿಲ್ಲ. ಈ ಕಾರಣದಿಂದ ಇಲ್ಲಿ ಪುನಃ ಸಿಬ್ಬಂದಿಯಿಂದ ಕಸವನ್ನು ವಿಂಗಡಿಸಲಾಗುವುದು. ಬಳಿಕ ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ನೇರವಾಗಿ ರೈತರಿಗೆ ಮಾರಾಟ ಮಾಡಿದರೆ, ಒಣ ಕಸವನ್ನು ಸುಮಾರು 30ರಿಂದ 35 ವಿಭಾಗಗಳಾಗಿ (ಬಾಟಲಿ, ಪ್ಲಾಸ್ಟಿಕ್, ಇಲೆಕ್ಟ್ರಾನಿಕ್ ಸಾಮಗ್ರಿಗಳು ಸೇರಿ ಹಲವು ವಸ್ತುಗಳು) ವಿಂಗಡಿಸಿ ಗುಜರಿಗಳಿಗೆ ಉತ್ತಮ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಒಟ್ಟಿನಲ್ಲಿ ಕಸವನ್ನು ಸಹ ಕಾಸಿನಂತೆ ನೋಡಬಹುದಾಗಿದ್ದು, ಹಣ ಗಳಿಸಬಹುದು ಎಂಬ ಮಾಹಿತಿಯನ್ನು ಒಕ್ಕೂಟದ ಅಧ್ಯಕ್ಷರಾದ ಡಿ. ಮಾದೇಗೌಡ ಅವರು ಸಚಿವರಿಗೆ ನೀಡಿದರು.
ಸ್ವಚ್ಛತೆಗೆ ಆದ್ಯತೆ
1200 ಮನೆಗಳಲ್ಲಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಪಾಲಿಕೆಯ 60 ನೌಕರರಿಗೆ ನಗರ ಪಾಲಿಕೆ ವೇತನ ನೀಡಿದರೆ, ಕಸ ಸಂಗ್ರಹಣೆ ವಾಹನಗಳ ನಿರ್ವಹಣೆಯನ್ನು ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕ ನೋಡಿಕೊಳ್ಳುತ್ತಿದೆ. ಈ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಫೆಡರೇಶನ್ ಆಫ್ ಮೈಸೂರು ಸಿಟಿ ಕಾರ್ಪೋರೇಶನ್ ವಾರ್ಡ್ ಪಾರ್ಲಿಮೆಂಟ್ ನ ನಾಗಪತಿ ಅವರು ಮಾಹಿತಿ ನೀಡಿದರು.
ಘನತ್ಯಾಜ್ಯ ನಿರ್ವಹಣ ಕೈಪಿಡಿ ಬಿಡುಗಡೆ
ಇಡೀ ಮೈಸೂರು ನಗರದ ಕಸ ವಿಂಗಡಣೆ, ನಿರ್ವಹಣೆ ಹಾಗೂ ಜನರ ಜವಾಬ್ದಾರಿಗಳ ಬಗೆಗಿನ ಸಂಪೂರ್ಣ ಮಾಹಿತಿಯುಳ್ಳ “ಸಮುದಾಯದ ಸಹಭಾಗಿತ್ವದಲ್ಲಿ ಘನತ್ಯಾಜ್ಯ ನಿರ್ವಹಣೆ” ಕೈಪಿಡಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಪೊಲೀಸ್ ಆಯುಕ್ತರಾದ ಚಂದ್ರಗುಪ್ತ, ಕಾರ್ಪೋರೇಶನ್ ಆಯುಕ್ತರಾದ ಗುರುದತ್ತ ಹೆಗಡೆ, ಮುಡಾ ಆಯುಕ್ತರಾದ ನಟೇಶ್ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.