ಬೆಂಗಳೂರು,ಫೆಬ್ರವರಿ,10,2021(www.justkannada.in) : ತೋಟಗಾರಿಕೆ ಉತ್ಪಾದನೆಯಲ್ಲಿ ಕನಾರ್ಟಕ 8 ನೇ ಸ್ಥಾನದಲ್ಲಿದ್ದು, ವಿಸ್ತರಣೆಯಲ್ಲಿ ಒಂದನೇ ಸ್ಥಾನದಲ್ಲಿದೆ. ಉತ್ಪಾದನೆಯಲ್ಲಿ ಎರಡನೇ ಅಥವ ಮೂರನೇ ಸ್ಥಾನಕ್ಕೆ ಬರಲು ಎಲ್ಲ ರೀತಿಯ ಒತ್ತು ನೀಡಲಾಗುವುದು ಎಂದು ತೋಟಗಾರಿಕೆ ಸಚಿವ ಆರ್.ಶಂಕರ್ ಹೇಳಿದರು.ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ (ಐಐಎಚ್ ಆರ್ )ಅಭಿವೃದ್ದಿ ಪಡಿಸಿರುವ ತೋಟಗಾರಿಕೆ ತಂತ್ರಜ್ಞಾನಗಳ ವಾಣಿಜ್ಯೀಕರಣ ಮಾಡಲು ಪರವಾನಗಿ ಪಡೆದ ನಾಲ್ಕು ಸಂಸ್ಥೆಗಳ ಜತೆ ಐಐಎಚ್ ಆರ್ ಬುಧವಾರ ಒಡಂಬಡಿಕೆಗೆ ಸಹಿ ಮಾಡಿತು. ಈ ಸಂದರ್ಭ ಸಚಿವ ಆರ್. ಶಂಕರ್ ಒಡಂಬಡಿಕೆ ಪತ್ರವನ್ನು ಕಂಪನಿಯ ಮುಖ್ಯಸ್ಥರಿಗೆ ಇಂದು ಹಸ್ತಾಂತರ ಮಾಡಿದರು.
ಬಳಿಕ ಐಐಎಚ್ ಆರ್ ಎರ್ಪಡಿಸಿದ್ದ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ತೋಟಗಾರಿಕೆ ಸಂಶೋಧನ ಸಂಸ್ಥೆಗಳು ಅಭಿವೃದ್ದಿ ಪಡಿಸಿರುವ ತಂತ್ರಜ್ಞಾನಗಳು ಸಿಮೀತವಾಗಿದ್ದು, ಅದನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಆಗಬೇಕಾಗಿದೆ ಎಂದರು.
ಐಐಎಚ್ ಆರ್ ಅಭಿವೃದ್ದಿ ಪಡಿಸಿರುವ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆದು ಅದನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಪ್ರಸಕ್ತ ಬಜೆಟ್ ನಲ್ಲಿ ಅನುದಾನ ಮೀಸಲಿಡುವ ಕುರಿತು ಯೋಜನೆ ರೂಪಿಲಾಗುವುದು ಎಂದು ಹೇಳಿದರು.
ರೈತರನ್ನು ಸಮಗ್ರ ಕೃಷಿ ಪದ್ಧತಿಗೆ ಪ್ರೇರಿಪಿಸಲಾಗುವುದು
ರೈತರು ಒಂದೇ ಬೆಳೆಯನ್ನು ಹೆಚ್ಚಿಗೆ ಬೆಳೆದು ಅದರ ಬೆಲೆ ಕಳೆದು ಕೊಳ್ಳುವ ಸಂದರ್ಭ ಜಾಸ್ತಿಯಾಗುತ್ತಿದೆ. ಅವರನ್ನು ಸಮಗ್ರ ಕೃಷಿ ಪದ್ಧತಿಗೆ ಪ್ರೇರಿಪಿಸುವುದು ಮತ್ತು ವಿಜ್ಞಾನಿಗಳು ಅಭಿವೃದ್ದಿ ಪಡಿಸಿರುವ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಒಡಂಬಡಿಕೆಗೆ ಸಹಿ
ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ ಅಭಿವೃದ್ದಿ ಪಡಿಸಿರುವ ತಂತ್ರಜ್ಞಾನಗಳನ್ನು ಮತ್ತು ತಳಿಗಳನ್ನು ಕಳೆದ ಹತ್ತು ವರ್ಷಗಳಿಂದ ವಾಣಿಜ್ಯೀಕರಣಗೊಳಿಸಲಾಗುತ್ತಿದೆ. ತಂತ್ರಜ್ಞಾನ ನಿರ್ವಾಹಕ ಘಟಕದಲ್ಲಿ ನೂರಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು ವಾಣಿಜ್ಯೀಕರಣಗೊಳಿಸಲಾಗಿದೆ.
ಐಐಎಚ್ ಆರ್ ಜತೆ ಇಂದು ಒಡಂಬಡಿಕೆ ಮಾಡಿಕೊಂಡ ಕಂಪನಿಗಳ ವಿವರ
ರೈನ್ ಬೋ ಆಗ್ರಿ ವೆಟ್ ಸಿರಿ ಟೆಕ್ನಾಲಾಜಿಸ್ ಪ್ರೈವಿಟ್ ಲಿಮಿಟೆಡ್, ಆಂದ್ರಪ್ರದೇಶ, ಪಿ.ಜೆ. ಮಾರ್ಗೋ ಪ್ರೈವಿಟ್ ಲಿಮಿಟೆಡ್, ಬೆಂಗಳೂರು, ಗ್ರೀನ್ ಟೆಕ್ ಫರ್ಟಿಲೈಸರ್ ಕಾರ್ಪೋರೇಷನ್, ತಿರುವನಂತಪುರ ಮತ್ತು ಲಾ ಪರ್ಮ್ ಡಿ ಪೀಟರ್ ಎಲ್ ಎಲ್ ಪಿ, ಚೆನ್ನೈ ಸಂಸ್ಥೆಗಳ ಜತೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ.
ಅಪ್ಪಿ ಮಿಡಿ ಹೆಗ್ಡೆಯವರಿಗೆ ಸನ್ಮಾನ
ಮಲೆನಾಡಿನ ಅಪ್ಪಿ ಮಿಡಿ ಮಾವಿನಕಾಯಿಯನ್ನು ಸಂರಕ್ಷಿಸಿ ಕಾಪಾಡುತ್ತಿರುವ ಸಾಗರದ ಬೇಳೂರಿನ ಬಿ.ಬಿ.ಸುಬ್ಬರಾವ್ ಹೆಗ್ಡೆ ಅವರಿಗೆ ಸಚಿವರು ಐಐಎಚ್ ಆರ್ ವತಿಯಿಂದ ಸನ್ಮಾನಿಸಿದರು.
ಅಪ್ಪಿ ಮಿಡಿಯನ್ನು ಹಲವು ವರ್ಷಗಳಿಂದ ಸಂರಕ್ಷಿಸಲಾಗುತ್ತಿದ್ದು, ಇದನ್ನು ಕಾಪಾಡಲು ಒಂದು ಸಣ್ಣ ಕಾಡನ್ನು ತಮ್ಮ ಮನೆಯ ಸಮೀಪ ನಿರ್ಮಿಸಲಾಗಿದೆ ಎಂದು ಹೆಗ್ಡೆ ಈ ಸಂದರ್ಭದಲ್ಲಿ ತಿಳಿಸಿದರು.ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಖಠಾರಿಯ, ತೋಟಗಾರಿಕೆ ಇಲಾಖೆ ನಿರ್ದೇಶಕಿ ಫೌಸಿಯಾ ತರ್ನಮ್ ,ಬಾಗಲಕೋಟ ತೋಟಗಾರಿಕೆ ವಿ.ವಿ. ಉಪಕಲಪತಿ ಡಾ. ಇಂದ್ರೇಶ್, ಐಐಎಚ್ ಆರ್ ನಿರ್ದೇಶಕ ಡಾ.ಎಂ.ಆರ್. ದಿನೇಶ್, ರಾಷ್ಟ್ರೀಯ ತೋಟಗಾರಿಕೆ ಮೇಳದ ಕಾರ್ಯದರ್ಶಿ ಮತ್ತು ಪ್ರಧಾನ ವಿಜ್ಞಾನಿ ಎಂ.ವಿ. ಧನಂಜಯ್ ಹಾಜರಿದ್ದರು.
key words : Gardening-production-Second-into position-Action-Minister-R.Shankar