ಮೈಸೂರು,ಫೆಬ್ರವರಿ,11,2021(www.justkannada.in) : ದೇಶ್ ಬಚಾವೋ ಸಚಿವೆ ನಿರ್ಮಲಾ ಸೀತಾರಾಮನ್ ಹಠಾವೋ ಎಂಬ ಘೋಷಣೆಯೊಂದಿಗೆ ಕೇಂದ್ರ ಸರ್ಕಾರದ ಬಜೆಟ್ ಹಾಗೂ ತೈಲ ಬೆಲೆ ಏರಿಕೆ ವಿರೋಧಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ತಳ್ಳುವ ಗಾಡಿಯ ಮೇಲೆ ದ್ವಿಚಕ್ರವಾಹವಿರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾವಣೆಗೊಂಡ ವೇದಿಕೆಯ ಸದಸ್ಯರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಖಾತೆಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ ಮಾತನಾಡಿ, ನಿರ್ಮಲಾ ಸೀತಾರಾಮನ್ ಕೊರೋನಾ ರೋಗದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಿಕ್ಕ, ಸಿಕ್ಕ ಪ್ರಾಧಿಕಾರ ರಚನೆ ಮಾಡಿ ಅದಕ್ಕೆ ಅನಾವಶ್ಯಕವಾದ ಹಣ ಬಿಡುಗಡೆ ಮಾಡಿ ನಾಗರೀಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ ಎಂದು ಕಿಡಿಕಾರಿದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ
ಕೇಂದ್ರದ ಬಿಜೆಪಿ ಸರ್ಕಾರ ದಿನನಿತ್ಯದ ಪದಾರ್ಥಗಳ ಬೆಲೆ ಏರಿಕೆ ಮಾಡಿ ತೈಲ ಬೆಲೆಯನ್ನು ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಶ್ಚಿಮಬಂಗಾಳ, ತಮಿಳುನಾಡು, ಕೇರಳ ರಾಜ್ಯಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿ ರಾಜ್ಯ, ರಾಜ್ಯಗಳ ಮಧ್ಯೆ ತಾರತಮ್ಯ ಮಾಡುತ್ತಿರುವುದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಕೇಂದ್ರ ಸರ್ಕಾರದ ಘೋಷಣೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ನೀತಿಯಂತಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರದ ಬಜೆಟ್ ಜನಸಾಮಾನ್ಯರ ಬಜೆಟ್ ಅಲ್ಲ, ಚುನಾವಣಾ ಬಜೆಟ್
ಇದು ಜನಸಾಮಾನ್ಯರ ಬಜೆಟ್ ಅಲ್ಲ. ಚುನಾವಣಾ ಬಜೆಟ್ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ದಿನನಿತ್ಯ ಜನಸಾಮಾನ್ಯರು ಬಳಕೆ ಮಾಡುವ ಪದಾರ್ಥಗಳು ಏರಿಕೆ ಆಗುತ್ತಿರುವುದನ್ನು ನೋಡಿದರೆ ಪ್ರಧಾನಮಂತ್ರಿಗಳು ಪ್ರತಿಭಾಷಣದಲ್ಲೂ ಅಚ್ಛೆ ದಿನ್ ಆಯೇಗಾ ಎಂಬ ಪದವನ್ನು ಬಳಸುತ್ತಿದ್ದರು. ಆದರೆ, ಅಚ್ಛೆ ದಿನ್ ಯಾರಿಗೆ? ಎಲ್ಲಿಗೆ? ಯಾವಾಗ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತು ವಿತ್ತ ಖಾತೆಯನ್ನು ನಿಭಾಯಿಸಲು ನಿರ್ಮಲಾ ಸೀತಾರಾಮನ್ ವಿಫಲವಾಗಿರುವ ಕಾರಣ ವಿತ್ತ ಸಚಿವಾಲಯದಿಂದ ಬಿಡುಗಡೆ ಮಾಡಿ ಜನಪರ ಕಾಳಜಿಯುಳ್ಳ ವ್ಯಕ್ತಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮುಖಂಡರುಗಳಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಗೋಪಿ, ಪರಿಸರ ಚಂದ್ರ, ಬೀಡಾಬಾಬು, ಮಹದೇವಸ್ವಾಮಿ, ಸುನೀಲ್, ಕಾವೇರಿಯಮ್ಮ, ಸಿದ್ದಪ್ಪ ಎಲ್ ಐ ಸಿ, ಸ್ವಾಮಿಗೈಡ್, ಅರವಿಂದ್, ಶ್ರೀನಿವಾಸ್, ಪುಷ್ಪಲತಾ, ಮಾದಪ್ಪ, ಸೋಮಶೇಖರ್, ರವಿ, ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.
key words : Desh Bachao-Minister-Nirmala Sitaraman-Hathao-Mysore-Kannada-platform-Exciting-protest