ಮೈಸೂರು,ಫೆಬ್ರವರಿ,11,2021(www.justkannada.in) : ಎನ್.ಆರ್.ಮೊಹಲ್ಲಾದ ಮುಡಾ ಸ್ಥಳವಾದ ಬಡೇಮಖಾನ್ ನಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ, ಗೋವುಗಳ ಸಾಕಾಣೆ ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಗೋವುಗಳ ಸಾಗಾಟ ಮಾಡಲಾಗುತ್ತಿದೆ ಎಂದು ಕರ್ನಾಟಕ ಗೌಶಾಲಾ ಮಹಾಸಂಘದ ಸಂಸ್ಥಾಪಕ ಅಧ್ಯಕ್ಷ ಶ್ರೀಕೃಷ್ಣಮಿತ್ತಲ್ ಆರೋಪಿಸಿದರು.ಪತ್ರಕರ್ತರ ಭವನದಲ್ಲಿ ಗುರುವಾರ ಕರ್ನಾಟಕ ಗೌಶಾಲಾ ಮಹಾಸಂಘ ಹಾಗೂ ಎನ್.ಆರ್.ಮೊಹಲ್ಲಾದ ನಿವಾಸಿಗಳು ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ರಾತ್ರೋರಾತ್ರಿ ಟ್ರಕ್ ಮೂಲಕ ಬೆಂಗಳೂರು ಸೇರಿದಂತೆ ವಿವಿಧ ಕಡೆಗೆ ಸಾಗಾಟ
ಎನ್.ಆರ್.ಮೊಹಲ್ಲಾದ ಬಡೇಮಖಾನ್ ನಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿರುವುದನ್ನು ಸುಮಾರು ಒಂದೂವರೆ ವರ್ಷದಿಂದ ಗಮನಿಸುತ್ತಿದ್ದೇವೆ. ಈ ಜಾಗದಲ್ಲಿ ವಯಸ್ಸಾದ ಹಸುಗಳು, ಗಂಡು ಕರುಗಳನ್ನು ತಂದು ತುಂಬಲಾಗುತ್ತಿದೆ. ಬಳಿಕ ಲೋನ್ ಪಡೆದ ಹಸು ಎಂದು ಟ್ಯಾಗ್ ಹಾಕಿ. ರಾತ್ರೋರಾತ್ರಿ ಟ್ರಕ್ ಮೂಲಕ ಬೆಂಗಳೂರು ಸೇರಿದಂತೆ ವಿವಿಧ ಕಡೆಗೆ ಸಾಗಾಟ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಪೊಲೀಸರು ಇದರಲ್ಲಿ ಕೈ ಜೋಡಿಸಿದ್ದಾರೆ ಎಂದು ಅನುಮಾನ
ಗೋವುಗಳ ಅಕ್ರಮ ಸಾಗಾಟ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಪಶುಸಂಗೋಪನೆ ಕಚೇರಿ ಹಾಗೂ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಯಾರೂ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ. ಪೊಲೀಸರು ಇದರಲ್ಲಿ ಕೈ ಜೋಡಿಸಿದ್ದಾರೆ ಎಂದು ಅನುಮಾನವ್ಯಕ್ತಪಡಿಸಿದರು.
ಈ ಅಕ್ರಮಕ್ಕೆ ಕೂಡಲೇ ತಡೆ ಹಾಕಬೇಕು. ಮುಡಾದವರು ಅಕ್ರಮ ಶೆಡ್ ನಿರ್ಮಿಸಿರುವುದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಎನ್.ಆರ್.ಮೊಹಲ್ಲಾದ ನಿವಾಸಿ ಜ್ಯೋತಿರಾವ್ ಮಾತನಾಡಿ, ಜಾನವಾರು ಪಶುಸಂಗೋಪನೆ ಇಲಾಖೆಗೆ ದೂರು ನೀಡಿದರೆ ಅವರು ಪಶುಸಗೋಪನೆ ಮಾಡುತ್ತಾರೆ ಎನ್ನುತ್ತಾರೆ. ಆದರೆ, ನಿತ್ಯ ಇಲ್ಲಿ ಹಸು,ಕರುಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದೆ. ಸಾಕುವುದಾಗಿ ತಂದ ಹಸುಗಳನ್ನು ಬೀದಿ, ಬೀದಿಗಳಲ್ಲಿ ಬಿಡಲಾಗುತ್ತಿದೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ನಿವಾಸಿಗಳಾದ ಪ್ರಹ್ಲಾದ್ ರಾವ್, ಪದ್ಮಾ, ರಾಜೇಶ್ವರಿ,ಲೋಕೇಶ್ವರಿ, ಅನ್ನಪೂರ್ಣ ಇತರರು ಹಾಜರಿದ್ದರು.
key words : NR Mohalla-Bademakhan-cows-Enough-cows-Shipping-Shrikrishnamittal-Serious-Accused