ಬೆಂಗಳೂರು,ಫೆಬ್ರವರಿ,11,2021(www.justkannada.in): ಬೆಂಗಳೂರಿನಂತಹ ಮಹಾನಗರ ವಾಸಿಗಳಿಗೆ ಮನೆಗೊಂದು ಅಂದದ ಕೈತೋಟ ಮಾಡುವುದೆಂದರೆ ಬಲು ಕಷ್ಟದ ಕೆಲಸವೇ ಸರಿ. ಅದಕ್ಕಾಗಿಯೇ ಪ್ರತಿಷ್ಠಿತ ಐಐಎಚ್ಆರ್ ನಗರ ವಾಸಿಗಳಿಗೆ ತಾರಸಿ ಕೈತೋಟ ಮಾಡುವ ವಿಧಾನವನ್ನು ಪರಿಚಯಿಸಿದೆ.
ನಮಗಿರುವ ಚಿಕ್ಕ ಜಾಗದಲ್ಲಿ ಕೈತೋಟ ಹೇಗೆ ಮಾಡಬೇಕೆಂಬುದು ಐಐಎಚ್ಆರ್ ಆವರಣದಲ್ಲಿ ಪ್ರದರ್ಶಿಸಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿ ಸೊಪ್ಪು, ತರಕಾರಿಗಳನ್ನು ಮತ್ತು ಅಲಂಕಾರಿಕ ಪುಷ್ಪಗಳನ್ನು ಬೆಳೆಯಲು ತಾರಸಿ ಕೈತೋಟದ ಸಲಹೆ ನೀಡಲಾಗುತ್ತಿದೆ.
ತಾರಸಿ ಕೈತೋಟಕ್ಕೆ ಕಡಿಮೆ ಜಾಗದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಮನೆಯ ತಾರಸಿಯ ಮೇಲೆ ನೂರರಿಂದ ಇನ್ನೂರು ಅಡಿ ಜಾಗವಿದ್ದಲ್ಲಿ, ಗ್ರೋಬ್ಯಾಗ್ ಅಥವಾ ಪ್ಲಾಸ್ಟಿಕ್ ಕುಂಡಗಳಲ್ಲಿ ಮಣ್ಣಿನ ಬದಲಾಗಿ ಐಐಎಚ್ಅರ್ ನ ಅರ್ಕಾ ಸಂವರ್ದಿತ ಕೋಕೋಪೀಟ್ ಬಳಸಿ ಮಣ್ಣು ರಹಿತ ಕೈತೋಟ ಮಾಡಬಹುದು. ಮಣ್ಣು ಬಳಸದ ಕಾರಣ ಹೆಚ್ಚು ತೂಕ ಇರುವುದಿಲ್ಲ, ಹಾಗಾಗಿ ಗ್ರೋಬ್ಯಾಗ್ ಮತ್ತು ಕುಂಡಗಳನ್ನು ರಾಕ್ (Rack) ನಲ್ಲಿ ಜೋಡಿಸಿ ಇಟ್ಟರೆ ಕಡಿಮೆ ಜಾಗದಲ್ಲಿ ಹೆಚ್ಚು ತರಕಾರಿ ಬೆಳೆಯಬಹುದು. ತಮಗೆ ಬೇಕಾದ ನಿತ್ಯ ಬಳಕೆಯ ಸೊಪ್ಪುಗಳಾದ ಪುದಿನಾ, ಕೊತ್ತಂಬರಿ, ಪಾಲಕ್, ದಂಟು, ಚಕ್ಕೋತ, ಅರಿವೆ, ಇತ್ಯಾದಿ ಹಾಗೂ ತರಕಾರಿಗಳಾದ ಕ್ಯಾರೆಟ್, ಮೂಲಂಗಿ, ಟೊಮ್ಯಾಟೋ, ಬದನೆ, ಮೆಣಸಿನ ಕಾಯಿ ಮುಂತಾದ ಗಿಡಗಳನ್ನು ಬೆಳೆಯಬಹುದು. ದಿನನಿತ್ಯ ತಾಜಾ ತರಕಾರಿ ಸೇರಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತೆ. ಪ್ರತಿ ದಿನ ನೂರರಿಂದ ಇನ್ನೂರು ರೂಪಾಯಿ ತರಕಾರಿ ಖರೀದಿಸುವ ಬದಲು, ಮನೆಯ ಅಂಗಳದಲ್ಲಿ ಜಾಗವಿದ್ದರೆ ಅಲ್ಲಿ ಇಲ್ಲವೆ ಮನೆಯ ತಾರಸಿ ಮೇಲೆ ಕೈತೋಟ ಮಾಡಬಹುದು.
ಹಾಗೆ ರೋಗ ಮತ್ತು ಕೀಟಗಳ ನಿಯಂತ್ರಣಕ್ಕೆ ನಿಯಮಿತವಾಗಿ ಬೇವಿನ ಸೋಪು ಮತ್ತು ಹೊಂಗೆ ಸೋಪು ಸಿಂಪಡಿಸಿದರೆ ರಸಾಯನಿಕ ಮುಕ್ತ ಕೈತೋಟ ಮಾಡಬಹುದು. ಪ್ರತಿದಿನ ಮನೆಯ ಕೈತೋಟದಲ್ಲಿ ಬೆಳೆದ ತಾಜಾ ತರಕಾರಿ ಆಹಾರ ಪದಾರ್ಥಗಳನ್ನು ಬಳಸುವುದರಿಂದ ಆರೋಗ್ಯ ವೃಧ್ದಿಸುತ್ತದೆ.
ತಾರಸಿ ಗಾರ್ಡನ್ ನಲ್ಲಿ ಬೆಳೆಯಲು ವಿವಿಧ ಅಲಂಕಾರಿಕ ಗಿಡಗಳು ಸಹ ಬಳೆಯಲು ಇಲ್ಲಿ ಲಭ್ಯವಿದೆ, ಇದರಿಂದ ಮನೆಯ ಅಂದ ಹೆಚ್ಚುತ್ತದೆ ಹಾಗೂ ಕೈತೋಟ ಕೆಲಸ ಮಾಡುವುದು ಹವ್ಯಾಸವಾದರೆ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ ಮನೆಯಲ್ಲಿ ವಾತಾವರಣ ಆಹಲ್ಲಾದಕರವಾಗಿರುತ್ತದೆ.
ಡಾ. ಓಂಕಾರ ನಾಯ್ಕ, ತಾಂತ್ರಿಕ ಅಧಿಕಾರಿ, ಐಐಎಚ್ಅರ್, ಬೆಂಗಳೂರು.
Key words: IIHR- introduces – terrace- kitchen -garden