ಮೈಸೂರು,ಫೆಬ್ರವರಿ,14,2021(www.justkannada.in): ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಇಬ್ಬರು ದರೋಡೆಕೋರರನ್ನ ಸರಸ್ವತಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸರಸ್ವತಿಪುರಂ ನಿವಾಸಿ ಭರತ್(24), ಕುವೆಂಪುನಗರ ನಿವಾಸಿ ಚಂದು(21) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ಬಳಿ 8 ಸಾವಿರ ಮೌಲ್ಯದ ಮೊಬೈಲ್ ಫೋನ್, ನಗದು ಹಣ ಹಾಗೂ ಎರಡು ದ್ವಿಚಕ್ರವಾಹನವನ್ನ ವಶಕ್ಕೆ ಪಡೆದಿದ್ದಾರೆ.
ಫೆಬ್ರವರಿ 1 ರಂದು ವ್ಯಕ್ತಿಯೊಬ್ಬರು ಬೈಕ್ ನಲ್ಲಿ ರಾತ್ರಿ ಫೈರ್ ಬ್ರಿಗೇಡ್ ವೃತ್ತದ ಬಳಿ ಬರುತ್ತಿದ್ದ ವೇಳೆ ಇವರನ್ನ ಹಿರೋ ಹೋಂಡಾ ಸ್ಪೆಂಡರ್ ಬೈಕ್ನಲ್ಲಿ ಬಂದ ಮೂವರು ಯುವಕರು ಅಡ್ಡಗಟ್ಟಿ, ಮೊಬೈಲ್ ಫೋನ್ ಮತ್ತು ಪರ್ಸ್ ಕಿತ್ತುಹೋಂಡು ಪರಾರಿಯಾಗಿದ್ದರು.
ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಸರಸ್ವತಿಪುರಂ ಪೋಲೀಸರು ಮಾಹಿತಿ ಮೇರೆಗೆ ಸರಸ್ವತಿಪುರಂ ದೊಡ್ಡ ಮೋರಿ ರಸ್ತೆ ಬಳಿ ಮೊಬೈಲನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಈ ಭರತ್, ಚಂದು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಲಿಗೆ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರು ನಗರದ ಡಿ.ಸಿ.ಪಿ.ರವರಾದ ಗೀತಪ್ರಸನ್ನ ರವರು, ಎ.ಸಿ.ಪಿ. ಕೃಷ್ಣರಾಜ ವಿಭಾಗ ರವರಾದ ಎಂ.ಎಸ್. ಪೂರ್ಣಚಂದ್ರ ತೇಜಸ್ವಿ ರವರ ಮಾರ್ಗದರ್ಶನದಲ್ಲಿ. ಸರಸ್ವತಿಪುರಂ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ತಿಮ್ಮರಾಜು, ಪಿಎಸ್ ಐಗಳಾದ ರಾಚಯ್ಯ ಎಸ್. ಭವ್ಯ ಎನ್ ಮತ್ತು ಸಿಬ್ಬಂದಿಯವರಾದ ಬಸವರಾಜೇ ಅರಸ್, ರಾಘವೇಂದ್ರ, ಹೆಚ್.ವಿ.ಮಂಜುನಾಥ, ಮಂಜುನಾಥ ಉಮೇಶ್ ಮತ್ತು ಹರೀಶ್ ಕುಮಾರ್.ಬಿ.ಕೆ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Key words: mysore- arrest-two – gangsters-Mobile- cash – bike seized – police.