ಬೆಂಗಳೂರು,ಫೆಬ್ರವರಿ,23,2021(www.justkannada.in) : ಆರ್.ಎಸ್.ಎಸ್ ದೇಶಪ್ರೇಮಿ ಸಂಘಟನೆಯಲ್ಲ, ಅದೊಂದು ಕೋಮು ಸಂಘಟನೆ. ತನ್ನನ್ನು ತಾನು ದೇಶಪ್ರೇಮಿ ಸಂಘಟನೆ ಎಂದು ಜನರಿಗೆ ಸುಳ್ಳು ಹೇಳುತ್ತಿದೆ. ಅದು ದೇಶಪ್ರೇಮಿ ಸಂಘಟನೆ ಎಂಬುದು ನಿಜವೇ ಆಗಿದ್ದರೆ ಸ್ವಾತಂತ್ರ್ಯ ಚಳವಳಿಗೆ ತನ್ನ ಕೊಡುಗೆ ಏನು ಎಂದು ಹೇಳಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಜಾತ್ಯತೀತತೆ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಪ್ರಮುಖ ಆಶಯಗಳಲ್ಲೊಂದು. ಕೋಮುವಾದ ಸಂವಿಧಾನ ವಿರೋಧಿಯಾದುದು ಎಂದಿದ್ದಾರೆ.
ಗೋಮಾಂಸ ಸೇವೆನೆ ಕುರಿತಂತೆ ಬಿಜೆಪಿಯ ನಿಲುವುಗಳೇ ದ್ವಂದ್ವ
ಗೋಮಾಂಸ ಸೇವೆನೆಗೆ ಸಂಬಂಧಿಸಿದ ಬಿಜೆಪಿಯ ನಿಲುವುಗಳೇ ದ್ವಂದ್ವದಿಂದ ಕೂಡಿವೆ. ಅವರ ಪ್ರಕಾರ ಇಲ್ಲಿಂದ ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಿಂದ ಬರುವ ಗೋಮಾಂಸವನ್ನು ಇಲ್ಲಿ ತಿನ್ನಬಹುದಂತೆ. ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು? ಎಂದು ಪ್ರಶ್ನಿಸಿದ್ದಾರೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಎಸ್ಡಿಪಿಐ ಮತ್ತು ಪಿ.ಎಫ್.ಐ ಕೈವಾಡವಿದೆ
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್‌ಡಿಪಿಐ ಮತ್ತು ಪಿ.ಎಫ್.ಐ ಕೈವಾಡವಿದೆ ಅಂತ ಮುಖ್ಯಮಂತ್ರಿಗಳಾದಿಯಾಗಿ ಹಲವು ಸಚಿವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ವಿಚಾರ ಸತ್ಯವಾಗಿದ್ದು, ಸರ್ಕಾರದ ಬಳಿ ಪುರಾವೆಗಳಿದ್ದರೆ ಆ ಸಂಘಟನೆಗಳನ್ನು ನಿಷೇಧಿಸಬೇಕಿತ್ತು. ಇದುವರೆಗೆ ಯಾಕೆ ನಿಷೇಧಿಸಿಲ್ಲ? ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಎಸ್.ಡಿ.ಪಿ.ಐ, ಪಿ.ಎಫ್.ಐ ಸಂಘಟನೆಗಳು ಪರೋಕ್ಷವಾಗಿ ಬಿಜೆಪಿಗೆ ಬೆಂಬಲ
ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಗಳು ಪರೋಕ್ಷವಾಗಿ ಬಿಜೆಪಿಗೆ ಬೆಂಬಲವಾಗಿ ನಿಂತಿವೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಮುಸ್ಲಿಮರ ಮತ ಒಡೆದು, ಬಿಜೆಪಿಯ ಗೆಲುವಿಗೆ ನೆರವಾಯಿತು ಎಂದು ಹೇಳಿದ್ದಾರೆ.
ಕೋಮುವಾದ ಜೀವಂತವಾಗಿರುವವರೆಗೆ ಶಾಂತಿ ನೆಲೆಸಲು ಸಾಧ್ಯವಿಲ್ಲ
ಸಮಾಜದಲ್ಲಿ ಕೋಮುವಾದ ಜೀವಂತವಾಗಿರುವವರೆಗೆ ಶಾಂತಿ ನೆಲೆಸಲು ಸಾಧ್ಯವಿಲ್ಲ. ಮನುಷ್ಯ-ಮನುಷ್ಯನನ್ನು ದ್ವೇಷಿಸುವ ಕಡೆ ಪ್ರೀತಿ ಹುಟ್ಟಲು ಸಾಧ್ಯವೇ? ಸೌಹಾರ್ದ ಸಮಾಜ ನಿರ್ಮಾಣಕ್ಕೆ ವಿಶ್ವಮಾನವತ್ವವೇ ದಾರಿ ಎಂದು ಟ್ವೀಟ್ ಮಾಡಿದ್ದಾರೆ.
key words : RSS-not-Patriotic-Organization-Opposition-leader-Siddaramaiah