ಮೈಸೂರು,ಫೆಬ್ರವರಿ,25,2021(www.justkannada.in): ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಮುಂದುವರೆದು ಬಿಜೆಪಿಗೆ ಮೇಯರ್ ಸ್ಥಾನ ಕೈತಪ್ಪಿದ ಹಿನ್ನೆಲೆ, ಬಿಜೆಪಿ ಮೇಯರ್ ಪರಾಜಿತ ಅಭ್ಯರ್ಥಿ ಸುನಂದ ಪಾಲನೇತ್ರ ಇದೀಗ ಮತ್ತೆ ಭಾವುಕರಾಗಿ ಮಾತನಾಡಿದ್ದಾರೆ.
ನನ್ನಿಂದ ಸಿಎಂ ಬಿಎಸ್ ಯಡಿಯೂರಪ್ಪಗೆ ಅವಮಾನ ಆಯ್ತು. ನನ್ನಿಂದ ಬಿಎಸ್ ವೈಗೆ ನೋವಾಯಿತು. ನಾನಲ್ಲದೆ ಬೇರೆ ಯಾರಾದರೂ ಕ್ಯಾಂಡಿಡೆಟ್ ಆಗಿದ್ರೆ ಬಿಜೆಪಿ ಮೇಯರ್ ಆಗುತ್ತಿದ್ದರೇನೋ. ಸೋಲಿನ ಮುಖ ಇಟ್ಟುಕೊಂಡು ಮದುವೆಗೆ ಹೋಗಲಿಲ್ಲ. ಮದುವೆ ಮನೆಯಲ್ಲಿ ಯಡಿಯೂರಪ್ಪ ಅವರ ಮುಂದೆ ಕಣ್ಣಿರು ಹಾಕಲು ಇಷ್ಟ ಇರಲಿಲ್ಲ. ಅದಕ್ಕಾಗಿ ಇಂದಿನ ಮದುವೆ ಸಮಾರಂಭಕ್ಕೆ ನಾನು ಹೋಗಲಿಲ್ಲ ಎಂದು ಮೇಯರ್ ಪರಾಜಿತ ಅಭ್ಯರ್ಥಿ ಸುನಂದ ಪಾಲನೇತ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನನಗೆ ಕೆಲಸ ಮಾಡಲು ಆಗ್ತಿಲ್ಲ. ಹಾಗಾಗಿ ರಾಜೀನಾಮೆಗೆ ನಿರ್ಧಾರ ಮಾಡಿದ್ದೇನೆ. ನನಗೆ ಟಿಕೆಟ್ ಕೊಟ್ಟಿದ್ದು ಬಿಎಸ್ ವೈ. ಅದಕ್ಕಾಗಿ ಅವರಿಗೆ ಹಾಗೂ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಇಂದು ನಾನೇ ಬಿಜೆಪಿ ಕಚೇರಿಗೆ ಹೋಗಿ ಮಾತನಾಡಿಸುತ್ತೇನೆ. ಇದು ರಾಜಕೀಯ ದೊಂಬರಾಟ ಅಂತ ಗೊತ್ತಿತ್ತು. ಕಣ್ಣೀರು ತುಂಬಿಕೊಂಡೆ ಪಾಲಿಕೆ ಪ್ರವೇಶಿಸಿದ್ದೆ. ನನಗಾಗಿ ಬಿಜೆಪಿ ನಾಯಕರು ಸಚಿವರು ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡಿದರು. ನನ್ನ ಪರವಾಗಿ ಎಲ್ಲರ ಬಳಿ ಕೈ ಮುಗಿದರು ಎಂದು ಹೇಳಿದರು.
ನಾನು ಯಡಿಯೂರಪ್ಪ ಸಂಬಂಧಿ ಅನ್ನೋದೆ ಈ ಸ್ಥಾನ ತಪ್ಪಲು ಕಾರಣವಾಗಿರಬಹುದು…
ಸಿಎಂ ನನ್ನ ಮಗಳ ಮನೆಗೆ ಬಂದಾಗಲೂ ಭರವಸೆ ನೀಡಿದ್ದಾರೆ. ಎಷ್ಟೋ ಸಲ ಸೋತಿದ್ದೀನಿ ಆದ್ರೆ ಈ ಸೋಲು ನನ್ನ ಸೋಲಲ್ಲ. ಇದೊಂದು ರಾಜಕೀಯ ಪಿತೂರಿ, ದೊಂಬರಾಟ. ಇದು ನನಗೆ ನೋವು ಕೊಟ್ಟಿದೆ. ನಾನು ಯಡಿಯೂರಪ್ಪ ಸಂಬಂಧಿ ಅನ್ನೋದೆ ಈ ಸ್ಥಾನ ತಪ್ಪಲು ಕಾರಣವಾಗಿರಬಹುದು. ಆದ್ರೆ ನಾನು 25 ವರ್ಷ ಸೇವೆ ಮಾಡಿದ್ದೇನೆ. ಅದನ್ನಾದರೂ ಪರಿಗಣಿಸಬಹುದಿತ್ತು. ಯಡಿಯೂರಪ್ಪ, ಹೈಕಮಾಂಡ್ ಎಲ್ಲರು ಭಾಗಿಯಾಗಿದ್ದರು. ಹೀಗಾಗಿ ಚುನಾವಣೆ ಸೋತಿದ್ದಕ್ಕೆ ನನಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಕೆಟ್ಟದಲ್ಲ, ಆದರೆ ನನ್ನಿಂದ ಕೆಟ್ಟದಾಗೋಯ್ತು. ಸಮಾಜಸೇವೆ ಅನ್ಕೊಂಡು ಕೆಲಸ ಮಾಡುತ್ತಿದ್ದೆ. ನನ್ನ ಸೇವೆಗೆ ಬೆಲೆಯೇ ಇರಲಿಲ್ಲ. ನನ್ನ ಜೊತೆ ಇದ್ದವರು ಎಂಎಲ್ ಎ ಮಿನಿಸ್ಟರ್ ಆಗಿದ್ದಾರೆ. ರಾಜಕೀಯದಲ್ಲಿ ಹಿರಿಯರಾಗಬಾರದು. ನನಗೆ ರಾಜಕಾರಣವೇ ಸಾಕಾಗಿದೆ. ನಿನ್ನೆಯ ಫಲಿತಾಂಶ ಸ್ವೀಕರಿಸಲು ಆಗುತ್ತಿಲ್ಲ ಎಂದರು.
ನನ್ನ ವಿರುದ್ದ ಕುತಂತ್ರ ನಡೆಯುತ್ತಿತ್ತು ಅಂತ ಕೆ.ಆರ್.ನಗರದಿಂದ ಮಾಹಿತಿ ಬರ್ತಿತ್ತು. ಆದರೆ ಯಾರಿಗೂ ಹೇಳೋಕೆ ಆಗಲಿಲ್ಲ. ನಿನಗೆ ಕಷ್ಟ ಆಗುತ್ತೆ ಎಚ್ಚರಿಕೆಯಿಂದ ಇರು ಅಂತ ಸಂಬಂಧಿಕರೇ ಕೆ.ಆರ್.ನಗರದಿಂದ ಕಾಲ್ ಮಾಡಿದ್ರು. ಕಳ್ಳ ಕದ್ದು ಓಡೋದರೆ ಹಿಡಿಯಬಹುದು. ಈ ರೀತಿ ಮೋಸ ಮಾಡಿದ್ರೆ ಹೇಗೆ ನಂಬೋದು. ಈ ಸೋಲು ಯಡಿಯೂರಪ್ಪ ಅವರ ಪ್ರತಿಷ್ಠೆಯಾಗಿತ್ತು. ವಾರ್ಡ್ ಅಲ್ಲಿ ಸೋತಿದ್ರೆ ಏನು ಆಗುತ್ತಿರಲಿಲ್ಲ. ಆದ್ರೆ ಪಾಲಿಕೆ ಒಳಗೆ ಬಿಎಸ್ ವೈಗೆ ಸೋಲಾಗಿದೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಆದ್ರೆ ನಾನು ಎಳ್ಳಷ್ಟು ತಪ್ಪು ಮಾಡಿಲ್ಲ ಎಂದು ಮೇಯರ್ ಪರಾಜಿತ ಅಭ್ಯರ್ಥಿ ಸುನಂದ ಪಾಲನೇತ್ರ ಮತ್ತೆ ಭಾವುಕರಾದರು.
Key words: mysore- city corporation – CM BS Yeddyurappa – mayor candidate