ಮೈಸೂರು,ಮಾರ್ಚ್,2,2021(www.justkannada.in): ಅಸ್ಸಾಂನಲ್ಲಿ ಶನಿವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 136 ಬೆಟಾಲಿಯನ್ ಹೆದ್ದಾರಿ ಗಸ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಮೋಹನ್ ಅವರ ಅಂತ್ಯಸಂಸ್ಕಾರವು ಸ್ವಗ್ರಾಮವಾದ ತಿ.ನರಸೀಪುರ ತಾಲ್ಲೂಕಿನ ಟಿ.ಬೆಟ್ಟಹಳ್ಳಿಯಲ್ಲಿ ನಡೆಯಿತು.
ಮಂಗಳವಾರ ಬೆಳಿಗ್ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕುಟುಂಸ್ಥರ ಉಪಸ್ಥಿತಿಯಲ್ಲಿ ಕಾವೇರಿ ನದಿ ದಡದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಯೋಧ ಮೋಹನ್ ಅವರು ಪಂಚಭೂತಗಳಲ್ಲಿ ವಿಲೀನನಾದರು.
ಮೋಹನ್ ಅವರ ಪಾರ್ಥಿವ ಶರೀರವನ್ನು ಅಸ್ಸಾಂನಿಂದ ದೆಹಲಿಗೆ ತಂದು, ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ತಂದು, ನಂತರ ಗ್ರಾಮಕ್ಕೆ ತಂದಾಗ ರಾತ್ರಿ 2.30 ಗಂಟೆಯಾಗಿತ್ತು. ಮನೆ ಆವರಣಕ್ಕೆ ಪಾರ್ಥಿವ ಶರೀರ ಬಂದಾಗ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಮೋಹನ್ ಅವರ ಅಂತಿಮ ದರ್ಶನ ಪಡೆಯಲು ಮೃತರ ಸಂಬಂಧಿಕರು, ಮಿತ್ರರು ಅಪಾರ ಸಂಖ್ಯೆಯಲ್ಲಿ ಅಲ್ಲಿ ಸೇರಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ನಮ್ಮ ತಾಲ್ಲೂಕಿನ ಯೋಧ ಮೋಹನ್ ಅವರು ಅಪಘಾತದಲ್ಲಿ ಮೃತಪಟ್ಟಿರುವುದು ಅತೀವ ನೋವು ತಂದಿದೆ. ದೇವರು ಅವರ ಕುಟುಂಬದವರ ದುಃಖ ಬರಿಸುವ ಶಕ್ತಿ ನೀಡಲಿ ಎಂದರು.
ಮೃತ ಯೋಧ ಮೋಹನ್ ಅವರ ಕುಟುಂಬಕ್ಕೆ ಸರ್ಕಾರದಿಂದ ಸಿಗಬಹುದಾದ ನೆರವನ್ನು ಕೊಡಿಸುವ ಜವಾಬ್ದಾರಿ ನನ್ನದು. ಈ ಕುರಿತು ಕುಟುಂಬದವರು ಯಾವುದೇ ಸಂದರ್ಭದಲ್ಲಿಯೂ ಭೇಟಿ ಮಾಡಿದರೂ ಅವರಿಗೆ ಅಗತ್ಯವಿರುವ ನೆರವನ್ನು ನೀಡಲಾಗುವುದು ಎಂದು ಸಾಂತ್ವಾನ ಹೇಳಿದರು.
ಗ್ರಾಮಸ್ಥರು ಯೋಧ ಮೋಹನ್ ಅವರ ಸ್ಮಾರಕ ನಿರ್ಮಿಸಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ನಾಗೇಶ್, ಸಿಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ರಾಧಕೃಷ್ಣನ್, ಸಂದೀಪ್, ಮಧು ಸೇರಿದಂತೆ ಕಂದಾಯ ಅಧಿಕಾರಿಗಳು ಹಾಜರಿದ್ದರು.
ಮೃತ ಯೋಧನ ಕುಟುಂಬಕ್ಕೆ ನೆರವಿಗಾಗಿ ಮನವಿ:
ಅಪಘಾತದಲ್ಲಿ ಮೃತಪಟ್ಟ ಯೋಧ ಮೋಹನ್ ಅವರು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ್ದ ಅವರು ಸಂಸಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದೀಗ ಅವರ ಅಗಲಿಕೆಯಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಮೃತ ಯೋದನ ಕುಟುಂಬಕ್ಕೆ ಆರ್ಥಿಕ ಸಹಾಯ ಅಗತ್ಯವಾಗಿದೆ.
ಮೃತ ಯೋಧನ ಪತ್ನಿಯ ಖಾತೆಯ ವಿವರ ಇಂತಿದೆ:
ಹೆಸರು: ಅಂಬಿಕಾ.ಎನ್
ಖಾತೆ ಸಂಖ್ಯೆ: 844418110000175
IFSC Code: BKID 0008444
ಬ್ಯಾಂಕ್ ಆಫ್ ಇಂಡಿಯಾ
ಕೊಳ್ಳೇಗಾಲ ಶಾಖೆ
Key words: mysore- soldier-Mohan- Funeral –road accident