ಮೈಸೂರು,ಮಾರ್ಚ್,12,2021(www.justkannada.in) : ಹೆಲಿಟೂರಿಸಂ ಸಂಬಂಧಪಟ್ಟಂತೆ ಪೈಲಟ್ ಗಳು ನಾಳೆ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಅವರಿಗೆ ಸೂಕ್ತ ತಂತ್ರಜ್ಞಾನ ಸೇರಿದಂತೆ ಹಲವು ಸವಲತ್ತುಗಳನ್ನು ನೀಡಿ ಮೈಸೂರನ್ನು ಉತ್ತಮ ಹೆಲಿಟೂರಿಸಂ ಪ್ರವಾಸಿ ತಾಣವನ್ನಾಗಿ ಮಾಡುವ ಗುರಿ ಇದೆ. ಹೀಗಾಗಿ, ಎರಡು ದಿನಗಳ ಕಾಲ ವಿಸ್ತೃತ ಮಾಹಿತಿ ಪಡೆಯಲಿದ್ದೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ಎರಡು ದಿನಗಳ ಕಾಲ ಮೈಸೂರು ಪ್ರವಾಸದಲ್ಲಿರುವ ಸಚಿವ ಯೋಗೇಶ್ವರ್, ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರೊಡನೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಮೈಸೂರು ಅಂದರೆ ಥಟ್ಟನೆ ನೆನಪಾಗೋದು ಮೈಸೂರು ಅರಮನೆ. ಅರಮನೆಯಲ್ಲಿ ವಾರ್ಷಿಕ ಕ್ಯಾಲೆಂಡರ್ ಸಿದ್ಧಪಡಿಸಿ ವರ್ಷದ 365 ದಿನಗಳೂ ಅರಮನೆಯಲ್ಲಿ ಕಾರ್ಯಕ್ರಮ ನಡೆಯುವಂತಾಗಬೇಕು. ಸಾಂಸ್ಕೃತಿಕ ತಜ್ಞರ ಹಾಗೂ ಸಂಬಂಧಪಟ್ಟವರ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅದನ್ನು ಜಾರಿಗೆ ತರುವ ಚಿಂತನೆ ನಡೆಸಿದ್ದೇನೆ ಎಂದರು.
ಕಳೆದ ಸರ್ಕಾರದ ಯೋಜನೆ ಮುಂದುವರೆಸುತ್ತೇವೆ
ಕಳೆದ ಸರ್ಕಾರದ ಯೋಜನೆಯನ್ನು ಮುಂದುವರೆಸುತ್ತೇವೆ. ಕೆ.ಆರ್.ಎಸ್ ಅನ್ನು ಡಿಸ್ನಿಲ್ಯಾಂಡ್ ಮಾದರಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಅದನ್ನು ಅನುಷ್ಠಾನ ಮಾಡುತ್ತೇವೆ. ಇದಕ್ಕೆ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಸಿಎಂ ಕೂಡ ಒಪ್ಪಿಗೆ ನೀಡಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಂಡು ಮಾಡುತ್ತೇವೆ ಎಂದರು.
ಕೆ.ಆರ್.ಎಸ್ ಡಿಸ್ನಿ ಲ್ಯಾಂಡ್ ಮಾಡುವ ವಿಚಾರವಾಗಿ ಅರ್ಕಿಟೆಕ್ಟ್ ಗಳ ಜೊತೆ ಈಗಾಗಲೇ ಸಭೆಗಳನ್ನು ಮಾಡಿದ್ದೇವೆ. ಇನ್ವೆಸ್ಟರ್ ಗಳನ್ನು ಕರೆದು ಕೊಂಡುಬರುವುದಾಗಿ ಅವರುಗಳು ಹೇಳಿದ್ದಾರೆ.
ಸರ್ಕಾರ ಇದಕ್ಕೆ ಯಾವುದೇ ಹಣಹೂಡಿಕೆ ಮಾಡುವುದಿಲ್ಲ. ಇದಕ್ಕಾಗಿ ಗ್ಲೋಬಲ್ ಟೆಂಡರ್ ಕರೆಯಲಾಗುತ್ತದೆ. ಕೆ.ಆರ್.ಎಸ್ ಡ್ಯಾಂ ಗೆ ಯಾವುದೇ ತೊಂದರೆಯಾಗದ ರೀತಿ ಮಾಡುತ್ತೇವೆ. ಹಿಂದಿನ ಸರ್ಕಾರದ ಪ್ಲಾನ್ ಮುಂದುವರೆಸುತ್ತೇವೆ. ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಿಕೊಂಡು ಕೆಲಸಮಾಡುತ್ತೇವೆ. ಕ್ಯಾಬಿನೆಟ್ ಒಪ್ಪಿಗೆಗೆ ಬರುವ ಹಂತಕ್ಕೆ ಯೋಜನೆ ಸಿದ್ದತೆವಾಗಿದೆ ಎಂದು ಮಾಹಿತಿ ನೀಡಿದರು.
ಮೈಸೂರಿನಾದ್ಯಂತ ಪ್ರವಾಸಿ ತಾಣಕ್ಕೆ ಒನ್ ಟಿಕೆಟ್ ಸಿಸ್ಟಮ್ ತರಲು ಚಿಂತನೆ
ಇನ್ನು ಮುಂದೆ ಮೈಸೂರಿನಾದ್ಯಂತ ಪ್ರವಾಸಿ ತಾಣಕ್ಕೆ ಒನ್ ಟಿಕೆಟ್ ಸಿಸ್ಟಮ್ ತರಲು ಚಿಂತನೆ ಮಾಡಲಾಗಿದೆ. ಒಂದೇ ಟಿಕೆಟ್‌ನಲ್ಲಿ ಮೈಸೂರಿನ ಪ್ರವಾಸಿ ತಾಣ, ಪಾರ್ಕಿಂಗಳಿಗೆ ಒಂದೆ ಟಿಕೆಟ್ ಮಾಡುತ್ತೇವೆ. ಅರಮನೆ, ಜೂ, ಚಾಮುಂಡಿಬೆಟ್ಟ, ಕೆಆರ್‌ಎಸ್ ಸೇರಿ ವಿವಿಧ ಸ್ಥಳದ ಪಾರ್ಕಿಂಗ್ ಒನ್ ಟಿಕೆಟ್‌ನಲ್ಲಿ ಎಂದು ವಿವರಿಸಿದರು.
ಪ್ರವಾಸಿಗರ ಅನುಕೂಲವಾಗುವ ನಿಟ್ಟಿನಲ್ಲಿ ಪಾರ್ಕಿಂಗ್ ವ್ಯವಸ್ಥೆ
ಜನರು ಮೈಸೂರಿಗೆ ಖುಷಿಯಿಂದ ಬರುತ್ತಾರೆ. ಪ್ರವಾಸಿಗರು ಅಯ್ಯೋ ಪಾರ್ಕಿಂಗ್ ಇಂದ ಸುಲಿಗೆ ಆಗುತ್ತಿದೆ ಅನ್ನಬಾರದು. ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪಾರ್ಕಿಂಗ್ ವ್ಯವಸ್ಥೆ. ಇದರ ಬಗ್ಗೆಯು ಚಿಂತನೆ ಆಗಿದೆ ಶೀಘ್ರದಲ್ಲೇ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.
ಸಂವಾದದಲ್ಲಿ ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಉತ್ತೇಜಿಸುವ ಹಲವು ಯೋಜನೆಗಳ ಕುರಿತು ಚರ್ಚೆ ನಡೆಸಲಾಯಿತು.
ಸಂವಾದಕ್ಕೂ ಮೊದಲು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು. ಸಂವಾದದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಭಾಗಿಯಾಗಿದ್ದರು.
key words : Helitourism-Tourist spot-Disneyland-Construction-About-Minister-C.P.Yogeshwar