ಬೆಂಗಳೂರು,ಮಾರ್ಚ್,26,2021(www.justkannada.in) : ರಮೇಶ್ ಜಾರಕಿಹೊಳಿ ಅವರಿಂದ ದೌರ್ಜನ್ಯಕ್ಕೊಳಗಾದ ಮಹಿಳೆ ಹೀಗೆ ವೀಡಿಯೋ ಮೂಲಕ ರಕ್ಷಣೆ ಕೇಳುವ ಬದಲು ನೇರವಾಗಿ ಎಸ್.ಐ.ಟಿ ಮುಂದೆ ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸುವುದು ಸೂಕ್ತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ರಕ್ಷಣೆ ಕೇಳಿದವರಿಗೆ ರಕ್ಷಣೆ ನೀಡಬೇಕಾದುದ್ದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯ
ದೌರ್ಜನ್ಯಕ್ಕೊಳಗಾದ ಯುವತಿಗೆ ರಕ್ಷಣೆ ಕೊಡಿಸುವ ಸಂಬಂಧ ನಿನ್ನೆ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಇಂದು ಪೊಲೀಸ್ ಕಮಿಷನರ್ ಅವರ ಜೊತೆಗೂ ಮಾತನಾಡುತ್ತೇನೆ. ರಕ್ಷಣೆ ಕೇಳಿದವರಿಗೆ ರಕ್ಷಣೆ ನೀಡಬೇಕಾದುದ್ದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಸಾಕ್ಷ್ಯವನ್ನು ಬಚ್ಚಿಟ್ಟಿದ್ದು ಕಾನೂನು ಪ್ರಕಾರ ಅಪರಾಧ
ರಮೇಶ್ ಜಾರಕಿಹೊಳಿ ಬಳಿ ಅಂಥಾ ಸ್ಪೋಟಕ ಸಾಕ್ಷ್ಯ ಇದ್ದಿದ್ದರೆ, ಈ ಹಿಂದೆ ದೂರು ದಾಖಲು ಮಾಡಿದಾಗಲೇ ಸಾಕ್ಷ್ಯವನ್ನೂ ನಮೂದಿಸಬೇಕಿತ್ತು. ಇಷ್ಟುದಿನದವರೆಗೆ ಸಾಕ್ಷ್ಯವನ್ನು ಬಚ್ಚಿಟ್ಟಿದ್ದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಇನ್ನಾದರೂ ತಡ ಮಾಡದೆ ಎಸ್.ಐ.ಟಿ ಮುಂದೆ ತಮ್ಮ ಬಳಿಯಿರುವ ಸಾಕ್ಷ್ಯವನ್ನು ಹಾಜರುಪಡಿಸಲಿ ಎಂದು ಸಲಹೆ ನೀಡಿದ್ದಾರೆ.
ಸದನದ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಪ್ರಯತ್ನ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಈ ಸಲದ ಅಧಿವೇಶನಕ್ಕೆ ನಮ್ಮ ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಬಜೆಟ್ ಮೇಲೆ ಚರ್ಚಿಸಿದ್ದೇವೆ, ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿದ್ದೇವೆ, ನಮ್ಮ ಶಾಸಕರು ಸಾಕಷ್ಟು ಪ್ರಶ್ನೆಗಳನ್ನು ಕೇಳುವ ಮೂಲಕ ಸದನದ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಪರೋಕ್ಷವಾಗಿ ಹಳ್ಳಿಹಕ್ಕಿ ವಿಶ್ವನಾಥ್ ಗೆ ಟಾಂಗ್ ನೀಡಿದ್ದಾರೆ.
ಸದನದ ಸದಸ್ಯರೊಬ್ಬರ ಆಶ್ಲೀಲ ವೀಡಿಯೋ ಒಂದು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಅದರ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಬೇಕಿರುವುದು ವಿರೋಧ ಪಕ್ಷದ ಕರ್ತವ್ಯ. ಅದನ್ನು ಮಾಡಿದ್ದೇವೆ. ನಮ್ಮ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡದೆ, ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇದ್ದಾಗ ಅನಿವಾರ್ಯವಾಗಿ ಧರಣಿ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸದನದಲ್ಲಿ ವಿರೋಧ ಪಕ್ಷದವರು ಧರಣಿಯಲ್ಲಿ ನಿರತರಾಗಿದ್ದಾಗ ಸರ್ಕಾರಕ್ಕೆ ಮಸೂದೆಗಳನ್ನು ಮಂಡಿಸಿ, ಅನುಮೋದನೆ ಪಡೆಯಲು ಸಭಾಧ್ಯಕ್ಷರು ಅವಕಾಶ ಮಾಡಿಕೊಟ್ಟಿದ್ದು ತಪ್ಪು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ನೀಡದೆ ಮಸೂದೆಗಳು ಅಂಗೀಕಾರವಾದರೆ ಅದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಸಿಡಿ ಹಗರಣದ ಬಗ್ಗೆ ನಾವು ಧರಣಿ ನಡೆಸುವ ವೇಳೆ ರಾಜ್ಯ ಸರ್ಕಾರ ಕೆ.ಟಿ.ಟಿ.ಪಿ ಕಾಯ್ದೆಗೆ ತಿದ್ದುಪಡಿ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸರ್ಕಾರಿ ಕಾಂಟ್ರಾಕ್ಟ್ ಗಳಲ್ಲಿದ್ದ ಮೀಸಲಾತಿಯನ್ನು ಕಸಿದುಕೊಂಡಿದೆ. ಶೋಷಿತ ಸಮುದಾಯಗಳಿಗೆ ಇದರಿಂದ ಅನ್ಯಾಯವಾಗಲಿದ್ದು, ತಿದ್ದುಪಡಿಯನ್ನು ವಾಪಾಸು ಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ನವರು ಬಿಜೆಪಿ ಜೊತೆ ಒಳಒಪ್ಪಂದ
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 40,000 ಅಲ್ಪಸಂಖ್ಯಾತ ಮತಗಳಿವೆ. ಜೆಡಿಎಸ್ ನವರು ಬಿಜೆಪಿ ಜೊತೆ ಒಳಒಪ್ಪಂದ ಮಾಡಿಕೊಂಡು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ನಮ್ಮ ಮತಗಳನ್ನು ವಿಭಜಿಸುವ ಹುನ್ನಾರ ಮಾಡುತ್ತಿದ್ದಾರೆ. ಇದನ್ನು ಕ್ಷೇತ್ರದ ಜನ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಮುತ್ತಿಗೆ ಹಾಕೋಣ ಎನ್ನುವುದರಲ್ಲಿ ಕೇಸ್ ದಾಖಲಿಸುವಂತ ಯಾವ ಪ್ರಚೋದನಕಾರಿ ಅಂಶವಿದೆ?
ಕಳೆದ 120 ದಿನಗಳಿಂದ ದೇಶದ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಅವರ ಮೇಲೆ ಮೊಕದ್ದಮೆಗಳನ್ನು ದಾಖಲಿಸುವ ಮೂಲಕ ದುಷ್ಟತನ ಪ್ರದರ್ಶಿಸುತ್ತಿದೆ. ಬೆಂಗಳೂರು ಮುತ್ತಿಗೆ ಹಾಕೋಣ ಎನ್ನುವುದರಲ್ಲಿ ಕೇಸ್ ದಾಖಲಿಸುವಂತ ಯಾವ ಪ್ರಚೋದನಕಾರಿ ಅಂಶವಿದೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಕ್ರೋಶವ್ಯಕ್ತಪಡಿಸಿದ್ದಾರೆ.
key words : Persecuted-woman-Suitable-attending-SIT-Former CM- Siddaramaiah-advised