ಬೆಂಗಳೂರು,ಮಾರ್ಚ್,29,2021(www.justkannada.in) : ಸಿಡಿ ಹಗರಣದ ಯುವತಿ ತನಗೆ ಪ್ರಾಣ ಭಯವಿದೆ ಎಂದು ರಾಜ್ಯದ ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಬರೆದಿದ್ದಾರೆನ್ನಲಾದ ಪತ್ರ ಗಾಬರಿ ಹುಟ್ಟಿಸುವಂತಿದೆ. ಮುಖ್ಯಮಂತ್ರಿ ಬಿ.ಎಸ್.ವೈ ಅವರೇ ರಾಜ್ಯದಲ್ಲಿ ನಿಮ್ಮ ಸರ್ಕಾರ ಅಸ್ತಿತ್ವದಲ್ಲಿದೆಯೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಂತ್ರಸ್ಥ ಯುವತಿ ಪ್ರಾರಂಭದ ಆಡಿಯೋದಲ್ಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೆ ಎಂದು ಹೇಳಿದ್ದಳು, ಈಗ ತನಗೆ ಪ್ರಾಣಭಯ ಇದೆ ಎಂದು ಪತ್ರ ಬರೆದಿದ್ದಾಳೆ. ಆ ಯುವತಿಯ ಪ್ರಾಣಕ್ಕೆ ಏನಾದರೂ ಅಪಾಯ ಎದುರಾದರೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರವೇ ಹೊಣೆಯಾಗುತ್ತದೆ ಎಂದಿದ್ದಾರೆ.
ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಸಂತ್ರಸ್ಥೆ ಯುವತಿ ಬರೆದ ಪತ್ರದಲ್ಲಿ ಎಸ್.ಐ.ಟಿ ಮೇಲೆಯೇ ಅಪನಂಬಿಕೆ ವ್ಯಕ್ತಪಡಿಸಿರುವುದು ಮಾತ್ರವಲ್ಲ, ಅವರು ಸಾಕ್ಷ್ಯನಾಶ ಮಾಡುತ್ತಿದ್ದಾರೆ. ತನ್ನ ವಿರೋಧಿಗಳ ಜೊತೆ ಶಾಮೀಲಾಗಿದ್ದಾರೆ ಎಂದೆಲ್ಲ ಆರೋಪಿಸಿರುವುದು ಗಂಭೀರವಾದ ವಿಷಯ ಎಂದು ಹೇಳಿದ್ದಾರೆ.
ಸಂತ್ರಸ್ಥ ಯುವತಿ ನಿರಂತರವಾಗಿ ವಿಡಿಯೋ, ಪತ್ರಗಳನ್ನು ಬಿಡುಗಡೆ ಮಾಡುತ್ತಿದ್ದರೆ. ರಾಜ್ಯದ ಸಿಎಂ ಬಿ.ಎಸ್.ವೈ ಹಾಗೂ ಗೃಹಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಪೊಲೀಸರು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಫಲಿತಾಂಶ ಏನು? ಎಂದು ಕಿಡಿಕಾರಿದ್ದಾರೆ.
ಸಿಡಿ ಬಹಿರಂಗಗೊಂಡು 27 ದಿನಗಳು ಕಳೆದರೂ ಹಗರಣದ ಕೇಂದ್ರವ್ಯಕ್ತಿಯಾದ ಸಂತ್ರಸ್ತ ಯುವತಿಯ ವಿಚಾರಣೆ ನಡೆಸಲು ಸಾಧ್ಯವಾಗದ ಪೊಲೀಸರ ವೈಫಲ್ಯಕ್ಕೆ ಯಾರು ಹೊಣೆ ? ಅವರ ಮೇಲೆ ಪ್ರಭಾವ ಬೀರುತ್ತಿರುವವರು ಯಾರು? ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದು ಬಿದ್ದಿರುವುದಕ್ಕೆ ಬೇರೆ ಸಾಕ್ಷಿ ಬೇಕೇ? ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
key words : state-Your-Government-Does-exist?-B.S.Y-Former CM-Siddaramaiah-question