ಕಲಬುರಗಿ,ಏಪ್ರಿಲ್,04,2021(www.justkannada.in) : ಐತಿಹಾಸಿಕ ಶರಣಬಸವೇಶ್ವರರ ರಥೋತ್ಸವ ಶುಕ್ರವಾರ ಮಧ್ಯಾಹ್ನ ಅತ್ಯಂತ ಸರಳ ರೀತಿಯಲ್ಲಿ ನೆರವೇರಿತು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗದರ್ಶಿ ಅನುಸಾರ ಸಾಂಕೇತಿಕವಾಗಿ ಜಾತ್ರೆ ಆಚರಿಸಲಾಯಿತು.ಪ್ರತಿ ವರ್ಷವೂ ಸಂಜೆ ವೇಳೆ ಸಾವಿರಾರು ಜನರೊಂದಿಗೆ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಆದರೆ, ಕೊರೊನಾ ಹಾವಳಿಯಿಂದಾಗಿ ಕಳೆದ ವರ್ಷದಿಂದ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.
ಕಳೆದ ಬಾರಿ ರಥೋತ್ಸವದ ಮುನ್ನವೇ ಕೋವಿಡ್ ನಿಂದ ಮೊದಲ ಸಾವು ಸಂಭವಿಸಿದ ವರದಿಯಾಗಿತ್ತು. ಹೀಗಾಗಿ, ಎಲ್ಲ ಸಿದ್ಧತೆಗಳ ನಡುವೆಯೂ ನಿಗದಿತ ಸಮಯಕ್ಕಿಂತ ಮುನ್ನವೇ ರಥೋತ್ಸವ ನೆರವೇರಿತ್ತು. ಈ ವರ್ಷ ಕೋವಿಡ್ ಎರಡನೇ ಅಲೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆ, ಉರುಸ್, ಮೆರವಣಿಗೆಗಳನ್ನು ನಿಷೇಧಿಸಿದೆ.
ಅದರಂತೆ ಸಾಂಕೇತಿಕವಾಗಿ ಶರಣಬಸವೇಶ್ವರರ ಥರ ಎಳೆಯುವ ಮೂಲಕ ಉತ್ಸವ ನಡೆಯಿತು. ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರು ಶರಣಬಸವೇಶ್ವರರು ಬಳಸುತ್ತಿದ್ದ ಪರುಷ ಬಟ್ಟಲನ್ನು ಭಕ್ತರಿಗೆ ತೋರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಬೆಳಗ್ಗೆ ದೆವಸ್ಥಾನದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಸಾಂಗವಾಗಿ ನೆರವೇರಿದವು. ಭಕ್ತರು ಜಾತ್ರೆ ಮೈದಾನದಲ್ಲಿ ಗುಂಪುಗೂಡದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮೂರೂ ದಿಕ್ಕುಗಳಲ್ಲಿ ಬ್ಯಾರಿಕೇಡ್ ಇಟ್ಟು ಪ್ರವೇಶ ನಿರ್ಬಂಧಿಸಿದರು.ಇನ್ನು, ಈ ಬಾರಿ ದೇವಸ್ಥಾನದ ಆವರಣ, ಮುಖ್ಯ ರಸ್ತೆ, ಜಾತ್ರೆ ಮೈದಾನದಲ್ಲಿ ಯಾವುದೇ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಿಲ್ಲ. ಇದರಿಂದ ಸುತ್ತಲಿನ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಗುರುವಾರ ನಡೆದ ಉಚ್ಛಾಯ ರಥೋತ್ಸವವನ್ನೂ ಸರಳವಾಗಿ ಆಚರಿಸಲಾಗಿತ್ತು.
key words : chariot-festival-Saranabasaveshwara-which-very-simply-accomplished