ಮೈಸೂರು, ಏಪ್ರಿಲ್ 5,2021(www.justkannada.in): ಮೈಸೂರು ಜಿಲ್ಲೆಗೆ ಸದ್ಯದಲ್ಲೇ ಇನ್ನೂ 1 ಲಕ್ಷ ಕೋವಿಡ್ ಲಸಿಕೆ ಪೂರೈಕೆಯಾಗಲಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಕೋವಿಡ್ ಪರಿಸ್ಥಿತಿ ಬಗ್ಗೆ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಜಿಲ್ಲೆಗೆ ಇನ್ನೂ 5 ಲಕ್ಷ ಲಸಿಕೆ ಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜ್ಯಕ್ಕೆ 15 ಲಕ್ಷ ಲಸಿಕೆ ಬಂದಿದೆ. ಮೈಸೂರಿನಲ್ಲಿ ಪ್ರಕರಣ ಹೆಚ್ಚುತ್ತಿರುವುರಿಂದ ಕೂಡಲೇ ಮೈಸೂರಿಗೆ 2 ಲಕ್ಷ ಲಸಿಕೆ ನೀಡುವಂತೆ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ್ ಅವರಿಗೆ ದೂರವಾಣಿಯಲ್ಲಿ ಕೇಳಿದ್ದೇನೆ ಎಂದರು.
ಈಗ 1 ಲಕ್ಷ ಲಸಿಕೆ ನೀಡಲಾಗುವುದು, ಹಂತ ಹಂತವಾಗಿ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುವುದು ಎಂದು ಡಾ. ಸುಧಾಕರ್ ಅವರು ತಿಳಿಸಿರುವುದಾಗಿ ಸಚಿವ ಎಸ್ .ಟಿ ಸೋಮಶೇಖರ್ ಹೇಳಿದರು.
ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎರಡೂ ಪರಿಣಾಮಕಾರಿ ಲಸಿಕೆಗಳು. ಲಸಿಕೆ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಮಾರುಕಟ್ಟೆ ಮುಂತಾದ ಜನಸಂದಣಿ ಪ್ರದೇಶದಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು ಎಂದರು.
ಮೈಸೂರಿನಲ್ಲಿ ಯಾವ ಪ್ರವಾಸಿತಾಣವನ್ನು ಬಂದ್ ಮಾಡಲ್ಲ…
ಕೊರೊನಾ ಹಿನ್ನೆಲೆ ಮೈಸೂರು ಪ್ರವಾಸ ತಾಣಗಳ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಮೈಸೂರಿನಲ್ಲಿ ಯಾವ ಪ್ರವಾಸಿತಾಣವನ್ನು ಬಂದ್ ಮಾಡಲ್ಲ. ಯಾವ ಪ್ರವಾಸಿ ತಾಣವನ್ನು ಸ್ಥಗಿತಗೊಳಿಸುವುದಿಲ್ಲ. ಕೆಲವು ನಿರ್ಬಂಧಗಳನ್ನು ಮಾಡಲು ತೀರ್ಮಾನಿಸಿದ್ದೇವೆ. ಊರ ಹಬ್ಬ, ಸಣ್ಣ ಪುಟ್ಟ ಜಾತ್ರೆಗಳನ್ನು ಆಯೋಜಿಸಲು ಅನುಮತಿ ಪಡೆದುಕೊಳ್ಳಬೇಕು. ಕೆಲವು ನಿರ್ಬಂಧಗಳನ್ನು ಹಾಕಿ ಅನುಮತಿ ನೀಡಲು ನಿರ್ಧರಿಸಿದ್ದೇವೆ ಎಂದರು.
ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಕರ್ಯಗಳು ಇವೆ. ಯಾವುದೇ ಕೊರತೆ ಇಲ್ಲ ಎಂದರು. ಕೋವಿಡ್ ನಿಯಂತ್ರಣ ಕ್ರಮಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಸಭೆಯಲ್ಲಿ ಶಾಸಕರಾದ ಎಲ್. ನಾಗೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿ.ಇ.ಇ. ಎ.ಎಂ.ಯೋಗೀಶ್, ಮೆಡಿಕಲ್ ಕಾಲೇಜಿನ ಡೀನ್, ಡಾ. ನಂಜರಾಜ, ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ. ರಾಜೇಶ್ವರಿ, ಡಿ.ಹೆಚ್.ಒ. ಡಾ. ಟಿ. ಅಮರನಾಥ್, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
Key words: covid -Vaccine – Mysore District- Minister -ST Somashekhar