ಬೆಂಗಳೂರು,ಏಪ್ರಿಲ್,09,2021(www.justkannada.in) : ಕೇಂದ್ರ ಸರ್ಕಾರ ರಸಗೊಬ್ಬರಗಳ ಬೆಲೆ ದುಪ್ಪಟ್ಟು ಏರಿಕೆ ಮಾಡುವ ಮೂಲಕ ರೈತರ ಶೋಷಣೆ ಮಾಡುತ್ತಿದೆ. ಪಂಪ್ ಸೆಟ್ ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.ಅಧಿಕಾರಕ್ಕೆ ಬಂದಾಗ ರಸಗೊಬ್ಬರ ಸಹಾಯಧನವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸುತ್ತೇವೆ ಎಂದು ಹೇಳಿ, ಇವತ್ತಿನ ತನಕ ಜಾರಿಗೆ ತರದೆ ರಸಗೊಬ್ಬರ ಬೆಲೆಗಳನ್ನು ಏರಿಕೆ ಮಾಡಿ ರೈತರ ಮೇಲೆ ಗದಾ ಪ್ರಹಾರ ಮಾಡಿದೆ ಎಂದು ಕಿಡಿಕಾರಿದರು.
ರಸಗೊಬ್ಬರ ಕಂಪನಿಗಳ ಒತ್ತಡಕ್ಕೆ ಮಣಿದು, ಬೆಲೆ ಏರಿಕೆ ಮಾಡಿರುವುದು ಖಾಸಗಿ ಕಂಪನಿಗಳ ಮಾಲೀಕರಿಗೆ ಮಣೆಹಾಕುತ್ತಿರುವುದು ರೈತ ವಿರೋಧಿ ಸರ್ಕಾರ ಎಂಬುದು ಸಾಬೀತಾಗುತ್ತಿದೆ. ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಕೆಯನ್ನು ಕೈಬಿಡದಿದ್ದರೆ ಟುಡೇ ಹೋರಾಟಕ್ಕೆ ರೈತರಿಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೃಷಿ ಪಂಪ್ ಸೆಟ್ ಗಳಿಗೆ 8 ಗಂಟೆಗಳ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ರಾಜ್ಯ ಸರ್ಕಾರ ಮೂರುಗಂಟೆಗಳ ವಿದ್ಯುತ್ ಸಹ ಮಧ್ಯರಾತ್ರಿಯಲ್ಲಿ ರೈತರಿಗೆ ವಿದ್ಯುತ್ ನೀಡಿದರೆ ದಿನನಿತ್ಯ ಬೆಳೆಗಳಿಗೆ ನಿದ್ರೆಗೆಟ್ಟು ನೀರು ಹಾಯಿಸಬೇಕು ಎಂಬ ಪರಿಸ್ಥಿತಿ ಉಂಟು ಮಾಡುತ್ತಿದ್ದಾರೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಟಿ ಸಿ ಗಳು ಸುಟ್ಟುಹೋಗುತ್ತಿವೆ, ಬೆಳೆಗಳು ಒಣಗಿ ಹಾಳಾಗುತ್ತಿವೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿಲ್ಲ ಎಂದು ದೂರಿದ್ದಾರೆ.
ಮರು ಚುನಾವಣೆಯ ಗುಂಗಿನಲ್ಲಿ, ಲೈಂಗಿಕ ಹಗರಣ ಮರೆಮಾಚುತ್ತಿದೆ
ರಾಜ್ಯ ಸರ್ಕಾರ ಮರು ಚುನಾವಣೆಯ ಗುಂಗಿನಲ್ಲಿ, ಲೈಂಗಿಕ ಹಗರಣ ಮರೆಮಾಚುವ ಹುನ್ನಾರ ನಡೆಸುತ್ತಾ ರೈತರನ್ನು ನಿರ್ಲಕ್ಷಿಸುತ್ತಿದೆ. ಈ ಬಗ್ಗೆ ವಿದ್ಯುತ್ ನಿಗಮದ ಮುಖ್ಯಸ್ಥರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಿಗಮದ ಕಚೇರಿಗೆ ಬೀಗ ಜಡಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
key words : Fertilizer-prices-pump sets-Inadequate-Power-supply-opposite-Fight-Peasant Leader-Kuruburu Shanthakumar-Warning