ಮೈಸೂರು,ಏಪ್ರಿಲ್,16,2021(www.justkannada.in): ಮೈಸೂರಿನಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೆಲಿಟೂರಿಸಂಗೆ ಲಲಿತಮಹಲ್ ಜಾಗದಲ್ಲಿ 800 ಮರಗಳನ್ನು ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್, ಮೈಸೂರು ಜನರನ್ನ ಅಭಿವೃದ್ಧಿ ವಿರೋಧಿಗಳು ಎಂಬಂತೆ ಬಿಂಬಿಸುತ್ತೀದ್ದೀರಿ.ಪ್ರವಾಸೋದ್ಯಮ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ.ನಮ್ಮ ವಿರೋಧವೇನಿದ್ದರೂ ಮರಗಳನ್ನ ಕಡಿಯುವುದರ ವಿಚಾರವಾಗಿ. ಲಲಿತಮಹಲ್ ಜಾಗದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ, ಟ್ರೀ ಅಥಾರಿಟಿಯ ಗಮನಕ್ಕೆ ತರದೆ, ಅರಣ್ಯ ಇಲಾಖೆಯವರು ಮರಗಳನ್ನು ಮಾರ್ಕಿಂಗ್ ಮಾಡಿರುವುದೇ ಮೊದಲ ಅಪರಾಧ.
ಕರ್ನಾಟಕ ರಾಜ್ಯ ಸರ್ಕಾರ 2009ರಲ್ಲೇ ಮೈಸೂರು ನಗರದಲ್ಲಿ ಟ್ರೀ ಅಥಾರಿಟಿ ನಿರ್ಮಾಣ ಮಾಡಿದ್ದಾರೆ. ಮೇಯರ್ ಇದರ ಅಧ್ಯಕ್ಷರಾಗಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿ ಮತ್ತು ನಗರ ಪಾಲಿಕೆ ಆಯುಕ್ತರು ಓರ್ವ ಕಾರ್ಪೋರೇಟ್ ಈ ಅಥಾರಿಟಿ ಸದಸ್ಯರಾಗಿರುತ್ತಾರೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಮರಗಳನ್ನು ಕಡಿಯಬೇಕಾದರೆ ಈ ಟ್ರೀ ಅಥಾರಿಟಿ ಅನುಮತಿ ಪಡೆಯುವುದು ಕಡ್ಡಾಯ. ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ಕಡಿಯಬೇಕೆಂಬ ಸರ್ಕಾರದಿಂದ ಪ್ರಸ್ತಾವನೆ ಬಂದರೆ ಮೊದಲಿಗೆ ಸಾರ್ವಜನಿಕರ ಅಭಿಪ್ರಾಯವನ್ನು ಕಡ್ಡಾಯವಾಗಿ ದಾಖಲಿಸಬೇಕು. ಹೆಲಿಟೂರಿಸಂಗೆ ಹೊಸದಾಗಿ ಹೆಲಿಪ್ಯಾಡ್ ನಿರ್ಮಿಸುವ ಅವಶ್ಯಕತೆಯೇ ಇಲ್ಲ. ಹೆಲಿಟೂರಿಸಂಗೆ ಹಾಲಿ ಇರುವ ಮಹಾರಾಜರ ಜಾಗವನ್ನೇ ಬಳಸಬಹುದು ಜೊತೆಗೆ ಏರ್ಪೋರ್ಟ್ ಒಳಗಡೆ ಕೂಡ ಬಳಸಬಹುದಾಗಿದೆ ಎಂದು ಎಂ.ಲಕ್ಷ್ಮಣ್ ಸಲಹೆ ನೀಡಿದರು.
ಪಾಲಿಕೆಯ ತೆರಿಗೆ ಹೆಚ್ಚಳ ನಿರ್ಧಾರ ಹಗಲು ದರೋಡೆ…
ಮೈಸೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದಕ್ಕೆ ಕಿಡಿಕಾರಿರುವ ಎಂ. ಲಕ್ಷ್ಮಣ್ , ಪಾಲಿಕೆಯ ತೆರಿಗೆ ಹೆಚ್ಚಳ ನಿರ್ಧಾರ ಹಗಲು ದರೋಡೆಯಾಗಿದೆ. ನಗರ ಪಾಲಿಕೆ ಶೇ 15ರಷ್ಟು ತೆರಿಗೆ ಹೆಚ್ಚಳ ಮಾಡಿದ್ದೇವೆ ಅಂತ ಹೇಳುತ್ತಾರೆ. ಕಳೆದ ಸಾಲಿನಲ್ಲಿ ಒಬ್ಬ ವ್ಯಕ್ತಿ 9 ಸಾವಿರ ಕಟ್ಟಿದ್ದ ಆಸ್ತಿ ತೆರಿಗೆ ಈ ಸಾಲಿಗೆ 25 ಸಾವಿರ ಕಟ್ಟಲು ಸೂಚಿಸುತ್ತಿರುವುದು ಯಾವ ಲೆಕ್ಕ..? ಅವೈಜ್ಞಾನಿಕವಾಗಿ ಆಸ್ತಿ ತೆರಿಗೆಯಿಂದ ಸರ್ಕಾರವೇ ನಿಂತಿರುವುದು ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಾಗೆಯೇ ಪಾಲಿಕೆ ಆದೇಶದಿಂದ ಖಾಲಿ ಜಾಗಕ್ಕೂ ತೆರಿಗೆ ಕಟ್ಟ ಬೇಕಾಗಿದೆ. ಪಾಲಿಕೆ ತೆರಿಗೆ ಕಟ್ಟುವುದಕ್ಕಿಂತ ಬಾಡಿಗೆ ಮನೆಯಲ್ಲಿರುವುದೇ ಲೇಸು ಅನ್ನುವ ಮಟ್ಟಕ್ಕೆ ಮೈಸೂರಿಗರು ಬಂದಿದ್ದಾರೆ. ತೆರಿಗೆ ಹೆಚ್ಚಳ ಕುರಿತು ಕಾಂಗ್ರೆಸ್ ಪಕ್ಷದ ವತಿಯಿಂದ ಭಾನುವಾರ ಬೆಳಗ್ಗೆ ಸಾರ್ವಜನಿಕ ಸಭೆ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಪಾಲಿಕೆ ನಿರ್ಧಾರದ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಸಾಲದ ಕೂಪಕ್ಕೆ ತಳ್ಳಿದವರು ಬಿಜೆಪಿಯವರು….
ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಂ. ಲಕ್ಷ್ಮಣ್, ಸಾಲದ ಕೂಪಕ್ಕೆ ತಳ್ಳಿದವರು ಬಿಜೆಪಿಯವರು. 2018ರ ಕೊನೆಯಲ್ಲಿ ರಾಜ್ಯದ ಸಾಲ 2 ಲಕ್ಷದ 65 ಸಾವಿರ ಕೋಟಿ ಇತ್ತು. ಸದ್ಯ ರಾಜ್ಯದ ಸಾಲ 4 ಲಕ್ಷ 60 ಸಾವಿರ ಕೋಟಿ ಇದೆ. ಯಡಿಯೂರಪ್ಪ ಬಂದಾಗಿನಿಂದ 1 ಲಕ್ಷದ 40 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಸಿದ್ದರಾಮಯ್ಯ 5 ವರ್ಷದ ಅವಧಿಯಲ್ಲಿ 72 ಸಾವಿರ ಕೋಟಿಯಷ್ಟೆ ಸಾಲ ಮಾಡಿದ್ದವರು. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅಧಿಕಾರದಿಂದ ಇಳಿದಾಗ 54 ಲಕ್ಷ ಕೋಟಿ ಸಾಲ ಇತ್ತು. ಈ 107 ಲಕ್ಷ ಕೋಟಿ ದೇಶದ ಮೇಲೆ ಸಾಲ ಇದೆ. ದೇಶ ಮತ್ತು ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದವರು ಯಾರು ಎಂದು ನೀವು ಹೇಳಬೇಕು ಎಂದು ಹರಿಹಾಯ್ದರು.
ಈಶ್ವರಪ್ಪರ ಮಗನ ಅಕ್ರಮದ ಬಗ್ಗೆ ನಮ್ಮ ಬಳಿ ದಾಖಲೆ ಇದೆ….
ಈಶ್ವರಪ್ಪರ ಮಗನ ಅಕ್ರಮದ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಕಂತೆ ಕಂತೆ ದಾಖಲೆಗಳಿದೆ. ಕೈಗಾರಿಕಾ ಪ್ರದೇಶದ ಸೈಟ್ ಮಾಡಿರುವ ದಾಖಲೆ ಇದೆ. ಮುಂದಿನ ದಿನದಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಎಂ. ಲಕ್ಷ್ಮಣ್ ತಿಳಿಸಿದರು.
ಬಿಜೆಪಿಯವರು ಹೆಲಿಕಾಪ್ಟರ್ ನಲ್ಲಿ ಸೂಟ್ ಕೇಸ್ ಜೊತೆಯಲ್ಲಿ ಇಳಿಯುತ್ತಾರೆ…
ರಾಹುಲ್ ಗಾಂಧಿ ಪ್ರಚಾರ ಮಾಡಿದ ಕಡೆ ಕಾಂಗ್ರೆಸ್ ಸೋಲುತ್ತದೆ ಎಂಬ ಬಿಜೆಪಿಯ ಟೀಕೆಗೆ ತಿರುಗೇಟು ನೀಡಿದ ಎಂ. ಲಕ್ಷ್ಮಣ್ , ರಾಹುಲ್ ಗಾಂಧಿ ಹೆಲಿಕಾಪ್ಟರ್ ನಲ್ಲಿ ಖಾಲಿ ಕೈ ನಲ್ಲಿ ಬಂದು ಪ್ರಚಾರ ಮಾಡಿ ಹೋಗುತ್ತಾರೆ. ಆದರೆ ಬಿಜೆಪಿಯವರು ಹೆಲಿಕಾಪ್ಟರ್ ನಲ್ಲಿ ಸೂಟ್ ಕೇಸ್ ಜೊತೆಯಲ್ಲಿ ಇಳಿಯುತ್ತಾರೆ. ಇದು ನಿಮ್ಮ ಬಂಡವಾಳ. ನಿಮ್ಮ ಪತನಕ್ಕೆ ದಿನಗಣನೆ ಆರಂಭವಾಗಿದೆ ಎಂದು ಲೇವಡಿ ಮಾಡಿದರು.
Key words: KPCC spokesperson -M. Laxman – fierce –opposition- Helipad-mysore