ಬೆಂಗಳೂರು:ಜುಲೈ-7:(www.justkannada.in) ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಆಫರ್ ನೀಡಿದ್ದು, ಪರಿಸ್ಥಿತಿ ಬದಲಾದರೆ ಖರ್ಗೆ ಸಿಎಂ ಆಗಬೇಕು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.
ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಹಾಗೂ ಅತೃಪ್ತ ಶಾಸಕರ ಮನವೊಲಿಕೆಗಾಗಿ ಕೈಗೊಳ್ಳ ಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಸಚಿವ ಡಿ ಕೆ ಶಿವಕುಮಾರ್ ಇಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಈ ವೇಳೆ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಬೇಕು ಎನ್ನುವುದಾದರೆ ಖರ್ಗೆ ಅವರನ್ನು ಸಿಎಂ ಆಗಿ ಮಾಡಿ. ಖರ್ಗೆ ಅವರನ್ನು ಸಿಎಂ ಮಾಡಿದರೆ ಜೆಡಿಎಸ್ ನ ಎಲ್ಲಾ ಶಾಸಕರನ್ನು ಮನವೊಲಿಸುವ ಜವಾಬ್ದಾರಿ ತಮ್ಮದು ಎಂದು ದೇವೇಗೌಡರು, ಸಚಿವ ಡಿ ಕೆ ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಒಂದು ವೇಳೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎನ್ನುವುದಾದರೆ ಸರ್ಕಾರಕ್ಕೆ ನಮ್ಮ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಗೌಡರು ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಸ್ವತ: ದೇವೇಗೌಡರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ, ಪರಿಸ್ಥಿತಿ ಬದಲಾದರೆ ನೀವು ಸಿಎಂ ಆಗಬೆಕು. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬದಲಾವಣೆಗೆ ಒತ್ತಡ ಹೆಚ್ಚಿದರೆ ನೀವು ಸಿಎಂ ಆಗಲು ಸಿದ್ಧರಾಗಿರಿ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೆಕೆಂಬ ಚರ್ಚೆ ಕಾಂಗ್ರೆಸ್-ಜೆಡಿಎಸ್ ಪಕ್ಷದಲ್ಲಿ ಆರಂಭವಾಗಿದ್ದು, ನಿರ್ಧಾರ ಕಾಂಗ್ರೆಸ್ ಅಂಗಳದಲ್ಲಿದೆ ಎನ್ನಲಾಗಿದೆ.