ಆನ್’ಲೈನ್ ಸಂದರ್ಶನ, ಮನೆಯಿಂದಲೇ ಕೆಲಸ! ಲಾಕ್ಡೌನ್ ಸಂಕಷ್ಟದಲ್ಲಿ ಮೈಸೂರು ವಿವಿ ಹೊಸ ಯೋಜನೆ
ಮೈಸೂರು, ಮೇ 03, 2021 (www.justkannada.in): ಮೈಸೂರು ವಿಶ್ವವಿದ್ಯಾನಿಲಯವು ಸ್ನಾತಕ ಹಾಗೂ ಸ್ನಾತಕೋತ್ತರ ಅಂತಿಮ ವರ್ಷ ಓದುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಲು ವೇದಿಕೆಯೊಂದನ್ನು ನಿರ್ಮಿಸಿದ್ದು, ಇಂದು ಅದನ್ನು ಲೋಕಾರ್ಪಣೆ ಮಾಡಲಾಗಿದೆ.
ಕೊರೊನಾ ಲಾಕ್ ಡೌನ್‌ನಲ್ಲಿ ಉದ್ಯೋಗ ಪಡೆಯುವುದು ಹೇಗೆ? ಭವಿಷ್ಯ ರೂಪಿಸಿಕೊಳ್ಳುವುದು ಹೇಗೆ? ಎಂಬ ಗೊಂದಲಕ್ಕೀಡಾಗಿರುವ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ವಿವಿ ಇಂತಹದೊಂದು ಕಾರ್ಯಕ್ರಮ ರೂಪಿಸಿದೆ.
ಮನೆಯಲ್ಲೇ ಇದ್ದು ವಿದ್ಯಾರ್ಹತೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಒಳಗೊಂಡ ಬಯೋಡೇಟಾ ಕಳುಹಿಸಿದರೆ, ಮನೆಯಲ್ಲೇ ಕುಳಿತು ಕೆಲಸ ಮಾಡಲು ಅವಕಾಶ ನೀಡುವಂತಹ ಯೋಜನೆಗಾಗಿ ಜಾಬ್ ಕಾರ್ಟ್ ಇಂಡಿಯಾ ಎಂಬ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಯೂನಿ ಕಾರ್ಟ್ ಎಂಬ ಪೋರ್ಟಲ್ ಆರಂಭಿಸಲಾಗಿದೆ.
ಏನಿದು ಯೂನಿ ಕಾರ್ಟ್: ಮೈಸೂರು ವಿವಿ ಜಾಬ್ ಕಾರ್ಟ್ ಇಂಡಿಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಯೂನಿ ಕಾರ್ಟ್ ಎಂಬ ಪೋರ್ಟಲ್ ರೂಪಿಸಿದೆ. ಇಂದು ಮೈಸೂರು ವಿವಿಯ ಕಾಫರ್ಡ್ ಹಾಲ್ ನಲ್ಲಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಜಾಬ್ ಕಾರ್ಟ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು.
ಯುಜಿ ಹಾಗೂ ಪಿಜಿಯಲ್ಲಿ ಅಂತಿಮ ವರ್ಷ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಬಯೋಡೇಟಾವನ್ನು ಈ ಪೋರ್ಟಲ್ ಮೂಲಕ ಕಂಪನಿ ಕೇಳುವ ಮಾದರಿಯಲ್ಲಿ ಕಳುಹಿಸಬೇಕು. ವಿದ್ಯಾರ್ಥಿಗಳ ರೆಸ್ಯೂಮ್ ಅನ್ನು ಪಿಪಿಯು ಜಾಬ್ ಕಾರ್ಟ್ ಸಂಸ್ಥೆಗೆ ಕಳುಹಿಸುತ್ತದೆ. ಅಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಹತೆ ಪರಿಶೀಲಿಸಿ ವಿವಿಧ ಕಂಪನಿಗಳು ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತವೆ. ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ಕೆಲಸ ಮಾಡುವ ಅವಕಾಶ ಸಿಗಲಿದೆ.
ಮೈಸೂರು ವಿವಿಯಲ್ಲಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಈ ವೆಬ್ ಸೈಟ್ ರೂಪಿಸಿ ಚಾಲನೆ ನೀಡಲಾಗಿದೆ. ಇಂದು ಸಂಸ್ಥೆ ಜತೆ ಒಪ್ಪಂದಕ್ಕೂ ಕುಲಪತಿಗಳು ಸಹಿ ಮಾಡಿದ್ದಾರೆ. ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಉದ್ಯೋಗದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಇಂದಿನಿಂದ ಯೂನಿ ಕಾರ್ಟ್ ಪೋರ್ಟಲ್ ಆರಂಭಿಸುತ್ತಿದ್ದೇವೆ. ಕಾರ್ಟ್ ಇಂಡಿಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಆನ್‌ಲೈನ್‌ನಲ್ಲೇ ಸಂದರ್ಶನ: ಸದ್ಯ ಲಾಕ್‌ಡೌನ್ ಇರುವುದರಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ಕಂಪನಿಗಳು ಸಂದರ್ಶನ ನಡೆಸುತ್ತವೆ. ಕೋವಿಡ್ ದುರಿತ ಕಾಲದಲ್ಲಿ ಈಗಾಗಲೇ ಮನೆಯಿಂದಲೇ ಕೆಲಸ ಮಾಡಲು ಹಲವು ಕಂಪನಿಗಳು ಅವಕಾಶ ಮಾಡಿಕೊಟ್ಟಿವೆ. ಹಾಗಾಗಿ ಸಂದರ್ಶನದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿ ಮನೆಯಲ್ಲೇ ಕೆಲಸ ಮಾಡಬಹುದು.
ಈ ವೇಳೆ ರಿಜಿಸ್ಟ್ರಾರ್ ಶಿವಪ್ಪ, ಜಾಬ್ ಕಾರ್ಟ್ ಇಂಡಿಯಾ ಸಂಸ್ಥೆ ಸಂಸ್ಥಾಪಕ, ಸಿಇಒ ಎಸ್.ವಿ.ವೆಂಕಟೇಶ್, ವಿಶೇಷಾಧಿಕಾರಿ ಚೇತನ್ ಇತರರು ಇದ್ದರು.