ಚಾಮರಾಜನಗರ, ಮೇ 03, 2021 (www.justkannada.in): ಆನ್’ಲೈನ್ ನಲ್ಲೂ ದೂರು ದುಮ್ಮಾನ ಆಲಿಸಿ ಸಮಸ್ಯೆಗೆ ಪರಿಹಾರ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದ ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ವಿರುದ್ಧ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟ ಘಟನೆಗೆ ಇದುವರೆಗೂ ಕ್ರಮ ವಹಿಸದ ಜಿಲ್ಲೆಗೆ ಭೇಟಿ ನೀಡಿ ಜನರ ಕಷ್ಟ ಸುಖ ವಿಚಾರಿಸದ ಉಸ್ತುವಾರಿ ಮಂತ್ರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಘಟನೆ ನಡೆದು ದಿನವಾದರೂ ಈ ಕುರಿತು ಪ್ರತಿಕ್ರಿಯೆಯನ್ನೂ ನೀಡದ ಕನಿಷ್ಠ ಅವರ ಸೋಷಿಯಲ್ ಮೀಡಿಯಾಗಳಲ್ಲೂ ಸ್ಪಂದಿಸದ ಉಸ್ತುವಾರಿ ವಿರುದ್ಧ ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಸುರೇಶ್ ಕುಮಾರ್ ಇದುವರೆಗೂ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಉಸ್ತುವಾರಿ ಜಿಲ್ಲೆಯ ಜನರ ಕಾಳಜಿ, ಅವರ ಫೇಸ್ ಬುಕ್ ಖಾತೆಯಲ್ಲಿ ಕೊನೆಯ ಬಾರಿಗೆ ಆಕ್ಸಿಜನ್ ಕೊರತೆ ಇಲ್ಲ. ಆರ್ ಸಾವಿರ ಲೀಟರ್ ಆಮ್ಲಜನಕ ಘಟಕಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿಕೆ ನೀಡಿರುವ ಪೋಸ್ಟೇ ಕೊನೆಯದ್ದಾಗಿದೆ.
ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟ ವಿಚಾರದಲ್ಲಿ ಚಾಮರಾಜನಗರ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಮುನ್ನೆಚ್ಚರಿಕೆ ಕ್ರಮವಹಿಸಿದ್ದರೆ ಅನಾಹುತ ತಪ್ಪಿಸಬಹುದಿತ್ತು. ಈ ಘಟನೆಗೆ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳೇ ಕಾರಣರಾಗಿದ್ದು, ಇದು ದೊಡ್ಡ ಕ್ರಿಮಿನಲ್ ಅಪರಾಧವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.