ಬೆಂಗಳೂರು,ಮೇ,14,2021(www.justkannada.in): ರಾಜ್ಯದಲ್ಲಿ ಕೊರೋನಾ 2ನೇ ಅಲೆ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮೇ 24ರವರೆಗೆ ಲಾಕ್ ಡೌನ್ ಜಾರಿಗೊಳಿಸಿದೆ. ಲಾಕ್ಡೌನ್ ಬಳಿಕ ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಇಳಿಮುಖವಾಗಿದ್ದು, ಈ ಮಧ್ಯೆ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಯುವ ಅವಶ್ಯಕತೆ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ನಾನು ಕೂಡ ಒಬ್ಬ ಬೆಂಗಳೂರಿನ ನಾಗರಿಕನಾಗಿ ಲಾಕ್ಡೌನ್ ಮುಂದುವರಿಯಲಿ ಎಂದೇ ಬಯಸುತ್ತೇನೆ. ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಯುವ ಅವಶ್ಯಕತೆ ಇದೆ. ಹೀಗಾಗಿ ನಾನು ಸಿಎಂಗೆ ಲಾಕ್ ಡೌನ್ ಮುಂದುವರಿಸುವ ಬಗ್ಗೆಯೇ ಸಲಹೆಯನ್ನ ನೀಡುವೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ 47 ದಿನಗಳ ಕಾಲ ಲಾಕ್ಡೌನ್ ಮಾಡಲಾಗಿತ್ತು. ದೆಹಲಿಯಲ್ಲಿ ಈಗಲೂ ಸಹ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ರಾಜ್ಯದಲ್ಲೂ ಸೆಮಿ ಲಾಕ್ಡೌನ್ ಹಾಗೂ ಲಾಕ್ಡೌನ್ ಆದೇಶದ ಬಳಿಕ ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಲಾಕ್ಡೌನ್ ಆದೇಶವನ್ನ ಮೊದಲು ವಿಪಕ್ಷಗಳು ಗೇಲಿ ಮಾಡಿದ್ದವು. ಆದರೆ ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಇಳಿಮುಖವಾಗುವಲ್ಲಿ ಲಾಕ್ ಡೌನ್ ಪ್ರಮುಖ ಪಾತ್ರ ವಹಿಸಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
Key words: need – continue – lockdown – state-Minister- R. Ashok.