ಮೈಸೂರು,ಮೇ,19,2021(www.justkannada.in): ರೈತರ ಮತ್ತು ಸ್ವ ಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಭೂಅಭಿವೃದ್ಧಿ ಬ್ಯಾಂಕುಗಳಿಂದ ಪಡೆದಿರುವ ಸಣ್ಣ, ಮಧ್ಯಮ ಮತ್ತು ದೀರ್ಘಾವಧಿಯ ಸಾಲಗಳ ಮರುಪಾವತಿಗೆ ಅವಧಿ ವಿಸ್ತರಣೆ ಮಾಡಿದ ರಾಜ್ಯ ಸರ್ಕಾರಕ್ಕೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ ಹರೀಶ್ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿ.ಡಿ ಹರೀಶ್ ಗೌಡ, ರೈತರ ಮತ್ತು ಸ್ವ ಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಭೂಅಭಿವೃದ್ಧಿ ಬ್ಯಾಂಕುಗಳಿಂದ ಪಡೆದಿರುವ ಸಣ್ಣ, ಮಧ್ಯಮ ಮತ್ತು ದೀರ್ಘಾವಧಿಯ ಸಾಲಗಳ ಮರುಪಾವತಿ ದಿನಾಂಕ: 01-05-2021 ರಿಂದ ಮರುಪಾವತಿಸಬೇಕಾದ ಕಂತುಗಳನ್ನು ದಿನಾಂಕ: 31-07-2021 ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಸಾಕಷ್ಟು ರೈತರು, ಸ್ವ ಸಹಾಯ ಗುಂಪುಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಕೆ.ಸಿ.ಸಿ, ಮಧ್ಯಮಾವಧಿ ಕೃಷಿ ಸಾಲಗಳು ಹಾಗೂ ಸ್ವ ಸಹಾಯ ಗುಂಪುಗಳ ಸಾಲದ ಮರುಪಾವತಿ ಅವಧಿಯನ್ನು ಕನಿಷ್ಟ 3 ತಿಂಗಳವರೆಗೆ ವಿಸ್ತರಿಸುವಂತೆ ಏಪ್ರಿಲ್ 29 ರಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು. ಸಾಲ ಮರುಪಾವತಿ ಅವಧಿಯನ್ನು ವಿಸ್ತರಣೆ ಮಾಡುವುದರಿಂದ ಈಗಾಗಲೇ ಕೊರೋನಾ ಸಂಕಷ್ಟದಲ್ಲಿರುವ ರೈತ ಹಾಗೂ ಸ್ವ- ಸಹಾಯ ಗುಂಪುಗಳಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ ಎಂಬುದು ನಮ್ಮ ಮನವಿಯಾಗಿತ್ತು.
ಇಂದು ರಾಜ್ಯ ಸರ್ಕಾರದ ಘೋಷಿಸಿದ ಪ್ಯಾಕೇಜ್ ನಲ್ಲಿ ನಮ್ಮ ಮನವಿಗೆ ಸ್ಪಂದಿಸಿದ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಹಾಗೂ ಸಹಕಾರ ಸಚಿವರಾದ ಎಸ್. ಟಿ ಸೋಮಶೇಖರ್ ಅವರಿಗೆ ರೈತರು, ಸ್ವ ಸಹಾಯ ಸಂಘಗಳ ಸದಸ್ಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿ.ಡಿ ಹರೀಶ್ ಗೌಡ ತಿಳಿಸಿದ್ದಾರೆ.
Key words: Extension – loan repayment-MCDCC -Bank Chairman -GD Harish Gowda –congratulates-Government