ಮಂಗಳೂರು,ಮೇ,22,2021(www.justkannada.in): ಕೋವಿಡ್–19 ಮೂರನೇ ಅಲೆಗೆ ಅಗತ್ಯವಿರುವ ವೈದ್ಯಕೀಯ ಆಮ್ಲಜನಕವನ್ನು ಪೂರೈಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಸೂಕ್ತ ಎಂದು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲದ ಸಾಂಸ್ಥಿಕ ಆವಿಷ್ಕಾರ ಸಮಿತಿ (ಐಐಸಿ) ಯು ಹಮ್ಮಿಕೊಂಡಿದ್ದ ವೈದ್ಯಕೀಯ ಆಮ್ಲಜನಕ– ಸವಾಲುಗಳು ಹಾಗೂ ಪರಿಹಾರಗಳು ಕುರಿತ ಸಂವಾದದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕೊರೊನಾ ಸೋಂಕು ದೇಶದಲ್ಲಿ ಹೆಚ್ಚಾದ ಬಳಿಕ ವೈದ್ಯಕೀಯ ಆಮ್ಲಜನಕಕ್ಕೆ ಇರುವ ಬೇಡಿಕೆ ಮಿಗಿಲಾಗಿದೆ. ಮೊದಲನೇ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಪ್ರತಿನಿತ್ಯ 7200 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ಉತ್ಪಾಸಿಸಲಾಗುತ್ತಿತ್ತು. ಆ ಅವಧಿಯಲ್ಲಿ 3000 ಮೆಟ್ರಿಕ್ ಟನ್ ನಷ್ಟು ಆಮ್ಲಜನಕದ ಬೇಡಿಕೆ ಇತ್ತು. ಮೊದಲ ಅಲೆಯ ಬಳಿಕ ಉತ್ಪಾದನಾ ಪ್ರಮಾಣವನ್ನು 9200 ಮೆಟ್ರಿಕ್ ಟನ್‌ಗೆ ಹೆಚ್ಚಿಸಲಾಯಿತು. ಆದರೂ, ವೈದ್ಯಕೀಯ ಆಮ್ಲಜನಕದ ಬೇಡಿಕೆ ಪೂರೈಸಲಾಗುತ್ತಿಲ್ಲ. ಇದಕ್ಕೆ ಸ್ಪಷ್ಟ ಕಾರಣಗಳೇನು ಎನ್ನುವುದು ಅರ್ಥೈಸಬೇಕಿದೆ ಎಂದು ಅವರು ಹೇಳಿದರು.
ಉತ್ಪಾದನೆಯಾಗುವ ವೈದ್ಯಕೀಯ ಆಮ್ಲಜನಕವನ್ನು ಅಗತ್ಯವಿರುವ ಸ್ಥಳಗಳಿಗೆ ಸಾಗಣೆ ಮಾಡುವ ವ್ಯವಸ್ಥೆ ದುರ್ಬಲವಾಗಿದೆಯೇ ಎಂಬುದರ ಬಗ್ಗೆ ಚಿಂತನೆ ಬೇಕಿದೆ. ಇದನ್ನು ಸರಿಪಡಿಸಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುವುದೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಿದೆ. ಜತೆಗೆ, ಆಮ್ಲಜನಕವನ್ನು ಬೇರೆಡೆಯಿಂದ ಆಸ್ಪತ್ರೆಗಳಿಗೆ ತರಿಸಿಕೊಳ್ಳುವ ಬದಲು, ಆಸ್ಪತ್ರೆಯ ಆವರಣದಲ್ಲೇ ಆಮ್ಲಜನಕದ ಬೃಹತ್ ಸಂಗ್ರಹಾರಗಳನ್ನು ನಿರ್ಮಿಸುವ ಅಥವಾ ಕಿರು ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಪ್ರಯತ್ನ ಮಾಡಬಹುದು ಎಂದು ತುರ್ತಾಗಿ ಯೋಚಿಸಬೇಕಿದೆ ಎಂದು ಪ್ರೊ.ಸತೀಶ್ ಕುಮಾರ್ ಭಂಡಾರಿ ಸಲಹೆ ನೀಡಿದರು.
ಬಳ್ಳಾರಿಯ ಜೆಎಸ್‌ಡಬ್ಲ್ಯೂ ಕೈಗಾರಿಕಾ ಅನಿಲ ಸಂಸ್ಥೆಯ ಉಪ ವ್ಯವಸ್ಥಾಪಕ ವ್ಯವಸ್ಥಾಪಕ ರಂಗನಾಥ ಪುನೇಕರ್ ಮಾತನಾಡಿ, ಜಿಂದಾಲ್ ಕಾರ್ಖಾನೆಯ ಬಹುತೇಕ ಎಲ್ಲ ಕೈಗಾರಿಕಾ ಆಮ್ಲಜನಕವನ್ನು ಇದೀಗ ವೈದ್ಯಕೀಯವಾಗಿ ರವಾನೆ ಮಾಡಲಾಗುತ್ತಿದೆ. ಜೀವವನ್ನು ಉಳಿಸುವುದೇ ಸಂಸ್ಥೆಯ ಆದ್ಯತೆ ಎಂದು ಪರಿಗಣಿಸಲಾಗಿದೆ ಎಂದರು.
ಸಮಯದ ಮಿತಿಯನ್ನು ಗಮನದಲ್ಲಿ ಇರಿಸಿಕೊಂಡು ಕಿರು ಆಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ಮಿಸಬಹುದು. ಇದಕ್ಕೆ ಮೂರರಿಂದ ನಾಲ್ಕು ತಿಂಗಳ ಕಾಲಾವಕಾಶ ಬೇಕಾಗಬಹುದು. ಇಲ್ಲದಿದ್ದಲ್ಲಿ, ಇರುವ ಆಮ್ಲಜನಕವನ್ನೇ ವಿವೇಚನೆಯಿಂದ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೈಗಾರಿಕಾ ಬಾಯ್ಲರ್ಸ್ ರಕ್ಷಣೆ ಮತ್ತು ಆರೋಗ್ಯ ವಿಭಾಗದ ಜಂಟಿ ನಿರ್ದೇಶಕ ರಾಥೋಡ್ ಅವರು ಮಾತನಾಡಿ, ಬಳ್ಳಾರಿಯಲ್ಲಿ ಮೊದಲ ಅಲೆಯ ಬಳಿಕ ಸಕಲ ಸಿದ್ಧತೆಗಳನ್ನು ಮಾಡಿಕೊಂಡ ಪರಿಣಾಮವಾಗಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜಿಗೆ ಅಗತ್ಯವಿರುವ ಆಮ್ಲಜನಕ ಪೂರೈಕೆ ಮಾಡಲು ಸಾಧ್ಯವಾಗುತ್ತಿದೆ. ಹಾಗಾಗಿ, ಸಿದ್ಧತೆಗೆ ಆದ್ಯತೆ ನೀಡಬೇಕು ಎಂದರು.
ಕೆ.ಎಸ್.ಹೆಗ್ಡೆ ವೈದ್ಯಕೀಯ ಸಂಸ್ಥೆಯ ಅನಸ್ತೇಷಿಯಾ ವಿಭಾಗದ ಮುಖ್ಯಸ್ಥ ಡಾ.ಶ್ರೀಪಾದ ಜಿ.ಮೆಹಂದಲೆ ಮಾತನಾಡಿ, ಆಸ್ಪತ್ರೆಗಳಲ್ಲಿ ತೀವ್ರನಿಗಾ ಘಟಕಗಳಿಗೆ ಒತ್ತಡದ ವೈದ್ಯಕೀಯ ಆಮ್ಲಜನಕದ ಅಗತ್ಯ ಹೆಚ್ಚಿರುತ್ತದೆ ಎಂದರು. ಶ್ವಾಸಕೋಶ ವಿಭಾಗದ ಮುಖಸ್ಥ ಡಾ.ಬಿ.ಎಚ್.ಗಿರಿಧರ ಮಾತನಾಡಿ, ಕೋವಿಡ್–19 ಪಿಡುಗು ಸರಿಸುಮಾರು ಮೂರು–ನಾಲ್ಕು ವರ್ಷಗಳ ಕಾಲ ಭಾದಿಸಲಿದೆ. ಇದಕ್ಕಾಗಿ ಸಿದ್ಧತೆ ಸದಾಕಾಲ ಇರಲೇಬೇಕು ಎಂದರು.
ಐಐಸಿ ಅಧ್ಯಕ್ಷ ಪ್ರೊ.ಜಿ.ಶ್ರೀನಿಕೇತನ್ ಕಾರ್ಯಕ್ರಮ ನಿರ್ವಹಿಸಿದರು. ಐಐಸಿ ಸಂಚಾಲಕ ವಿವೇಕ್ ಪೈ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರೊ.ಇಂದ್ರಾಣಿ ಕರುಣಾಸಾಗರ ಭಾಗವಹಿಸಿದ್ದರು.
Key words: Medical- Oxygen-Preparation – solution- Prof. Satish Kumar Bhandari