ಬೆಂಗಳೂರು:ಜುಲೈ:-11:(www.justkannada.in) ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್ಇಇಬಿ) ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಗುಣಮಟ್ಟದ ಕಲಿಕೆಗೆ ಒತ್ತು ನೀಡಿ ಸಾಮೂಹಿಕ ನಕಲನ್ನು ತಡೆಯುವ ಉದ್ದೇಶದಿಂದ 2020ರ ಎಸ್ ಎಸ್ ಎಲ್ ಸಿ ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ ಜಾರಿಗೆಬರಲಿದೆ.
ಘಟಕವಾರು ಪ್ರಶ್ನೆ ಪತ್ರಿಕೆಯಲ್ಲಿ ಪ್ರಮುಖವಾಗಿ ಅಂಕಗಳ ಹಂಚಿಕೆ ಪದ್ಧತಿಯನ್ನು ಕೈಬಿಟ್ಟು ವಿಷಯಾಧಾರಿತ ಪ್ರಶ್ನೆಪತ್ರಿಕೆಯನ್ನು ರೂಪಿಸಲು ಮುಂದಾಗಿದ್ದು, ಪ್ರಶ್ನೆಗಳ ಸಂಖ್ಯೆಯನ್ನು 40ರಿಂದ 38ಕ್ಕೆ ಇಳಿಕೆ ಮಾಡಲಾಗಿದೆ.
ಘಟಕವಾರು ಪ್ರಶ್ನೆಗಳ ಹಂಚಿಕೆಯಿಂದಾಗಿ ಶಿಕ್ಷಕರು ಹೆಚ್ಚು ಅಂಕಗಳಿಗೆ ಕೇಳುವ ಪ್ರಶ್ನೆಗಳ ಪಾಠಗಳನ್ನು ಮಾತ್ರವೇ ಬೋಧಿಸುತ್ತಿದ್ದರು. 2020ರಿಂದ ವಿಷಯಾಧಾರಿತ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಜ್ಞಾನ ಗ್ರಹಣ ಮತ್ತು ಪಠ್ಯಕ್ಕೆ ಸಂಬಂಧಿಸಿದ ಸ್ಮರಣೆ, ಗ್ರಹಿಕೆ, ಅಭಿವ್ಯಕ್ತಿ ಮತ್ತು ಬರವಣಿಗೆಯ ಕೌಶಲ, ಪ್ರಶಂಸೆ, ಅನ್ವಯ ತಿಳಿವಳಿಕೆಗೆ ಮಹತ್ವ ನೀಡಲಾಗುತ್ತದೆ. ಹೊಸ ಪದ್ಧತಿಯಲ್ಲಿ ಎಲ್ಲ ಪಾಠಗಳಿಗೂ ಪ್ರಾಮುಖ್ಯತೆ ನೀಡಿರುವುದರಿಂದ ಶಿಕ್ಷಕರು ಎಲ್ಲ ಪಾಠಗಳನ್ನು ಬೋಧನೆ ಮಾಡಲೇ ಬೇಕಾಗುತ್ತದೆ.
ಬಹು ಆಯ್ಕೆಯ ಪ್ರಶ್ನೆಗಳು, ಒಂದು ಅಂಕದ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 2 ಅಂಕದ ಪ್ರಶ್ನೆಯ ಸಂಖ್ಯೆಯನ್ನು 8ರಿಂದ 4ಕ್ಕೆ ಮತ್ತು 3 ಅಂಕದ ಪ್ರಶ್ನೆಗಳ ಸಂಖ್ಯೆಯನ್ನು 6ರಿಂದ 9ಕ್ಕೆ ಹೆಚ್ಚಳ ಮಾಡಿದೆ. ಹೊಸದಾಗಿ 5 ಅಂಕದ ಪ್ರಶ್ನೆ ಸೇರಿಸಲಾಗಿದೆ ಮಂಡಳಿ ತಿಳಿಸಿದೆ.