ಮೈಸೂರು,ಮೇ,28,2021(www.justkannada.in): ನಿನಗೆ ತಾಕತ್ತಿದ್ದರೇ ಡಿಸಿ ವರ್ಗಾವಣೆ ಮಾಡಿಸು ಎಂದು ಸವಾಲು ಹಾಕಿದ್ದ ಶಾಸಕ ಜಿ.ಟಿ ದೇವೇಗೌಡರಿಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ್ ಸಿಂಹ, ಅಧಿಕಾರಿಗಳನ್ನ ಟ್ರಾನ್ಸ್‌ಫರ್ ಮಾಡೋದೇ ತಾಕತ್ತಾದರೆ, ಅಂತಹ ತಾಕತ್ತು ನನಗೆ ಬೇಡ. ಒಬ್ಬ ಸಂಸದನಾಗಿ ನಾನು ನನ್ನ ಕೆಲಸದಲ್ಲಿ ತಾಕತ್ತು ತೋರಿಸಿದ್ದೇನೆ ಎಂದು ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಇಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಮೈಸೂರಿಗೆ ನಾನು ಹೊರಗಿನವನು. ಆದರೂ ಮೊದಲ ಚುನಾವಣೆಯಲ್ಲಿ ಮೈಸೂರು- ಕೊಡಗಿನ ಜನ ಮೂವತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದರು. ನನ್ನ ತಾಕತ್ತು ತೋರಿಸಿ ಒಳ್ಳೆಯ ಕೆಲಸ ಮಾಡಿದೆ. ಅದಕ್ಕಾಗಿ ಎರಡನೇ ಚುನಾವಣೆಯಲ್ಲಿ ಒಂದು ಲಕ್ಷದ ನಲವತ್ತು ಸಾವಿರ ಮತಗಳಿಂದ ಗೆಲ್ಲಿಸಿದ್ರು. ಇದಕ್ಕಿಂತಲೂ ನಾನು ಯಾವ ತಾಕತ್ತು ತೋರಿಸಬೇಕು ಎಂದು ಕುಟುಕಿದರು.
ಡಿಸಿಯನ್ನೋ ಅಥವಾ ಇನ್ಯಾವುದೋ ಅಧಿಕಾರಿಯನ್ನ ವರ್ಗಾವಣೆ ಮಾಡಿಸೋದು ರಾಜಕಾರಣಿಗಳಿಗೆ ಕಾಮನ್. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಅಂತಹ ಸಣ್ಣ ಕೆಲಸವನ್ನ ನಾನು ಮಾಡೋದಿಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆಗೆ ಕೆಲಸ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸಾ.ರಾ ಮಹೇಶ್ ರನ್ನ ಹೊಗಳಿದ್ದು ಜಿ.ಟಿ ದೇವೇಗೌಡರಿಗೆ ಇಷ್ಟವಾಗಿಲ್ಲ ಅನ್ಸುತ್ತೆ
ಹಾಗೆಯೇ ಸಾ.ರಾ ಮಹೇಶ್ ರನ್ನ ಹೊಗಳಿದ್ದು ಜಿ.ಟಿ ದೇವೇಗೌಡರಿಗೆ ಇಷ್ಟವಾಗಿಲ್ಲ ಅನ್ಸುತ್ತೆ. ಹೀಗಾಗಿ ನನ್ನ ವಿರುದ್ಧ ಮಾತನಾಡಿದ್ದಾರೆ. ಜಿ.ಟಿ.ದೇವೇಗೌಡರು ನನಗೆ ತಂದೆ ಇದ್ದಂತೆ. ಅವರು ಹರೀಶ್ ಗೌಡರನ್ನ ಹೇಗೆ ನೋಡಿಕೊಂಡಿದ್ದಾರೋ ಹಾಗೇ ನನ್ನನ್ನ ನೋಡಿಕೊಂಡಿದ್ದಾರೆ. ರಾಜಕೀಯದಲ್ಲಿ ನನ್ನನ್ನು ಬೈಯುವ ಹಕ್ಕು ಜಿ.ಟಿ ದೇವೇಗೌಡರಿಗೆ ಇದೆ. ಅವರು ಬೈಯುವುದನ್ನ ನಾನು ಪ್ರೀತಿಯಿಂದಲೇ ಸ್ವೀಕರಿಸಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಾನು ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾಗ ಶಾಸಕರ ಕಾರ್ಯವೈಖರಿ ನೋಡಿದ್ದೇನೆ. ಕೆ.ಆರ್ ನಗರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸಾರಾ ಮಹೇಶ್ ಜಿಲ್ಲೆಗೆ ಮೇಲ್ಪಂಕ್ತಿಯಾಗುವಂತೆ ಕೆಲಸ ಮಾಡಿದ್ದಾರೆ ಅಂತ ಹೇಳಿದ್ದು ನಿಜ.ಇದರಲ್ಲಿ ಯಾರನ್ನು ಹೊಗಳುವ, ತೆಗಳುವ ಉದ್ದೇಶವಿಲ್ಲ. ಇದನ್ನ ಅಪಾರ್ಥ ಮಾಡಿಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಜಿ.ಟಿ ದೇವೇಗೌಡರಿಗೆ ಟಾಂಗ್ ನೀಡಿದರು.
Key words: mysore-Transfer – DC-MLA-GT Devegowda-MP-Prathap simha