ಬೆಂಗಳೂರು,ಮೇ,29,2021(www.justkannada.in): ಕೋವಿಡ್ ಸಾಂಕ್ರಾಮಿಕ ರೋಗ ಮತ್ತು ವ್ಯಾಕ್ಸಿನೇಷನ್ ಬಗ್ಗೆ ವೈದ್ಯಕೀಯ ಆಧಾರವಿಲ್ಲದ ಯಾವುದೇ ಮಾಹಿತಿಯನ್ನು ನಂಬಬೇಡಿ ಎಂದು ನಾಡಿನ ಹೆಸರಾಂತ ಹೃದ್ರೋಗ ತಜ್ಞ, ಪೋರ್ಟೀಸ್ ಆಸ್ಪತ್ರೆ ಮುಖ್ಯಸ್ಥ ಡಾ.ವಿವೇಕ ಜವಳಿ ಹೇಳಿದ್ದಾರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಕೋವಿಡ್ ಹೊಸ ರೂಪಗಳನ್ನು ಎದುರಿಸುವ ಬಗೆ ಮತ್ತು ಮಾಧ್ಯಮ ಜವಾಬ್ದಾರಿ ಬಗ್ಗೆ ಏರ್ಪಡಿಸಿದ್ದ ಜೂಮ್ ಮೀಟ್ ಸಂವಾದದಲ್ಲಿ ಡಾ.ವಿವೇಕ ಜವಳಿ ಭಾಗವಹಿಸಿ ಮಾತನಾಡಿದರು.
ಕೋವಿಡ್ ಎರಡನೇ ಅಲೆ ಮನುಕುಲವನ್ನು ತೀವ್ರವಾಗಿ ಕಾಡಿದೆ. ನಿರ್ಲಕ್ಷ್ಯ ಮಾಡಿದಷ್ಟು ಅದು ದೊಡ್ಡ ಹಾನಿ ಮಾಡುತ್ತಿದೆ. ಮುಂಜಾಗ್ರತೆ ವಹಿಸಿದರೆ ಖಂಡಿತವಾಗಿ ಸೋಂಕು ತಡೆಯಬಹುದು. ಕೋವಿಡ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ವದಂತಿಗಳಿಗೆ ಜನರು ಕಿವಿಗೊಡಬೇಡಿ. ಬದಲಿಗೆ ವೈದ್ಯರನ್ನು ಸಂಪರ್ಕಿಸಿ ಅನುಮಾನಗಳನ್ನು ಪರಿಹರಿಸಿಕೊಳ್ಳಿ. ಹಾಗೆಯೇ ಕೋವಿಡ್ ಎರಡನೇ ಅಲೆಯ ತೀವ್ರತೆ ಈಗ ತಗ್ಗಿದ್ದು, ಸೋಂಕು ಇಳಿಕೆಯಾಗುತ್ತಿದೆ ಎಂದರು.
ವೈಜ್ಞಾನಿಕ ಕಾರಣ ಅರಿಯದೆ ಕೋವಿಡ್ ಬಗ್ಗೆ ತಪ್ಪು ತಿಳುವಳಕೆ ಬೇಡ, ಕರೊನಾ ವೈರಾಣು ತುಂಬಾ ಸ್ಮಾರ್ಟ್. ಇತರೆ ವೈರಾಣುಗಳಿಗೆ ಹೋಲಿಸಿದರೆ ಇದು ಬಹಳ ಸುಲಭವಾಗಿ ಹಾಗೂ ತುಂಬಾ ಬೇಗ ರೂಪಾಂತರಗೊಳ್ಳುತ್ತದೆ. ಹಾಗಾಗಿ ಮೂರನೇ ಅಲೆಯ ಬಗ್ಗೆ ಈಗಲೇ ಎಚ್ಚರಿಕೆ ವಹಿಸುವ ಅಗತ್ಯವಿದೆ. ಮೊದಲಿಗೆ ವೃದ್ಧರನ್ನು ಬಾಧಿಸಿದ ಸೋಂಕು, ಈಗ ಯುವಜನರನ್ನು ವ್ಯಾಪಕವಾಗಿ ಕಾಡಿದೆ ಎಂದು ಹೇಳಿದರು.
ಮೂರನೇ ಅಲೆಯಲ್ಲಿ ಮಕ್ಕಳನ್ನು ಕಾಡಬಹುದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ತಜ್ಞರ ಸಮಿತಿ ರಚಿಸಿದೆ ಎಂದು ಡಾ.ವಿವೇಕ ಜವಳಿ ತಿಳಿಸಿದರು.
ಗಾಳಿಯಲ್ಲೂ ಹರಡಲಿದೆ
ಸೋಂಕಿತರು ಕೆಮ್ಮಿದಾಗ, ಸೀನಿದಾಗ ಕೋವಿಡ್ ವೈರಸ್ ಗಾಳಿಯಲ್ಲಿ 10 ಮೀಟರ್ ವರೆಗೂ ಹರಡಲಿದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಹೀಗೆ ದೇಹ ಸೇರುವ ವೈರಾಣು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ನಾಶ ಮಾಡುತ್ತದೆ. ನ್ಯೂಟ್ರಿಯಂಟ್ಸ್‌ಗಳನ್ನು ತಿಂದು ದ್ವಿಗುಣ ಹೊಂದುತ್ತಾ ಹೋಗುತ್ತದೆ. ಇಡೀ ದೇಹವನ್ನು ನಾಶ ಪಡಿಸುತ್ತದೆ. ಅದ್ದರಿಂದ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವೈಯಕ್ತಿಕ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಒಂದೇ ಮಾಸ್ಕ್ ಬಹಳ ದಿನ ಬಳಸಬೇಡಿ. ಮಾಸ್ಕ್ ಕುರಿತು ಜಾಗೃತಿ ಅಗತ್ಯ. ಅದನ್ನು ಹೇಗೆ ಧರಿಸಬೇಕು ಎಂಬುದನ್ನು ಜನರು ತಿಳಿಯಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆ, ಸೋಂಕಿತರ ಸಂಪರ್ಕದಲ್ಲಿದ್ದಾರೆ. ಎನ್ 95 ಮಾಸ್ಕ್ ಧರಿಸುವುದು ಸೂಕ್ತ. ಇಲ್ಲವೆ ಸರ್ಜಿಕಲ್ ಮಾಸ್ಕ್ ಮೇಲೆ ಮತ್ತೊಂದು ಬಟ್ಟೆ ಮಾಸ್ಕ್ ಧರಿಸಬೇಕು. ಒಂದೇ ಮಾಸ್ಕ್ ದೀರ್ಘಕಾಲ ಬಳಸಬಾರದು. ಹಾಗೆ ಮಾಡಿದರೆ ನಾನಾ ರೀತಿಯ ಫಂಗಸ್ ಗಳು ಕಾಡಲಿವೆ. ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ಇವುಗಳನ್ನು ಪಾಲಿಸುವ ಮೂಲಕ ಕೋವಿಡ್ ದೂರವಿಡಬಹುದು ಎಂದರು.
ಚಿಕಿತ್ಸೆ ಬಗ್ಗೆ ಅಪನಂಬಿಕೆ ಸಲ್ಲದು
ರೆಮಿಡಿಸಿವಿಯರ್ ಅಗತ್ಯವಿಲ್ಲ. ವೈದ್ಯರು ಸುಮ್ಮನೆ ಕೊಡುತ್ತಾರೆ, ಅನಗತ್ಯವಾಗಿ ಸ್ಟಿರಾಯಿಡ್ ಕೊಡುತ್ತಾರೆ. ಹೀಗೆ ಚಿಕಿತ್ಸೆ ಕುರಿತು ಜನರಲ್ಲಿ ಬಹಳಷ್ಟು ಅಪನಂಬಿಕೆಗಳು ಇವೆ. ಆದರೆ ಯಾವುದೇ ಒಂದು ಔಷಧ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಅಗತ್ಯ ಇರುವುದಿಲ್ಲ. ಆದರೆ ಪ್ರತಿಯೊಂದು ಔಷಧವೂ ತನ್ನದೇ ಆದ ಪಾತ್ರ ವಹಿಸುತ್ತದೆ. ರೋಗಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಔಷಧ ನೀಡಬೇಕಾಗುತ್ತದೆ ಎಂದು ಡಾ.ವಿವೇಕ ಜವಳಿ ತಿಳಿಸಿದರು.
ವೈದ್ಯರು ಸಹ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸಿದರೆ ಚಿಕಿತ್ಸೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದರು.
ಬ್ಲ್ಯಾಕ್ ಫಂಗಸ್ ಬಗ್ಗೆ ಅರಿವಿರಲಿ
ಅನಿಯಮಿತ ಮಧುಮೇಹ ಹೊಂದಿದವರು ಹಾಗೂ ರೋಗ ನಿರೋಧಕ ಶಕ್ತಿ ಕುಗ್ಗಿದವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ಆಶುಚಿತ್ವ ಹಾಗೂ ದೀರ್ಘ ಕಾಲ ಒಂದೇ ಮಾಸ್ಕ್ ಬಳಕೆಯಿಂದಲೂ ಬರುತ್ತದೆ. ಹಾಗಾಗಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸೋಂಕಿಗೆ ಒಳಗಾದವರು ಹಾಗೂ ಗುಣ ಹೊಂದಿದವರು ನಂತರದಲ್ಲೂ ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದರು.
ನಿತ್ಯ ಎರಡು ಮೂರು ಬಾರಿ ಸ್ಟೀಮ್ ತೆಗೆದುಕೊಳ್ಳುವುದು, ಝಿಂಕ್ ಮಾತ್ರೆಗಳ ಸೇವನೆ, ಹೀಗೆ ಅಗತ್ಯಕ್ಕಿಂತ ಹೆಚ್ಚು ಮಾಡುತ್ತಿದ್ದಾರೆ. ಇದರಿಂದ ಕೋವಿಡ್ ಬದಲಿಗೆ ಇರತೆ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇದರ ಬದಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಆರೋಗ್ಯಕರ ಆಹಾರ ಸೇವಿಸಬೇಕು. ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಕೋವಿಡ್ ಕುರಿತು ಮಾಧ್ಯಮಗಳು ವೈಜ್ಞಾನಿಕವಾದ ಹಾಗೂ ಸಕಾರಾತ್ಮಕ ಸುದ್ದಿಗಳನ್ನು ತಲುಪಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸೇರಿದಂತೆ ಹಲವು ಪತ್ರಕರ್ತರು ಸಂವಾದಲ್ಲಿ ಪಾಲ್ಗೊಂಡಿದ್ದರು.
Key words: Rumors -don’t -believe -about –vaccine-covid. Dr. Vivek javali-KUWJ