ಬೆಂಗಳೂರು,ಮೇ,29,2021(www.justkannada.in): ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಲಸಿಕೆ ನೀಡಿ. ಓದುವ ಮಕ್ಕಳಿಗೆ ನೆರವಾಗಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮುಂದಿನ 2-3 ತಿಂಗಳಲ್ಲಿ ಸಾವಿರಾರು ಯುವ ಕನ್ನಡಿಗರು ವಿದ್ಯಾಭ್ಯಾಸಕ್ಕಾಗಿ ಹೊರದೇಶಗಳಿಗೆ ಹೋಗುವವರಿದ್ದಾರೆ. ಹಲವು ದೇಶಗಳು/ವಿಶ್ವವಿದ್ಯಾಲಯಗಳು ಈ ವಿದ್ಯಾರ್ಥಿಗಳು ಆಗಮಿಸುವ ಮುನ್ನ ಕೊರೊನಾ ಲಸಿಕೆ ತೆಗೆದುಕೊಂಡಿರಬೇಕು ಎಂಬ ಷರತ್ತು ವಿಧಿಸಿವೆ. ಇಂತಹ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಲಸಿಕೆ ನೀಡುವುದು ಸರ್ಕಾರದ ಕರ್ತವ್ಯ.
ಕೇರಳ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಹೊರದೇಶಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡುವ ಕ್ರಮ ಕೈಗೊಳ್ಳಲಾಗಿದೆ. @CMofKarnataka ಹಾಗೂ ಮುಖ್ಯ ಕಾರ್ಯದರ್ಶಿಗಳು ಕೂಡಲೇ ಗಮನಹರಿಸಿ ಕರ್ನಾಟಕದಲ್ಲಿಯೂ ಆದ್ಯತೆಯ ಮೇರೆಗೆ ಲಸಿಕೆ ನೀಡಿ ಓದುವ ಮಕ್ಕಳಿಗೆ ನೆರವಾಗಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೆಚ್.ಡಿಕೆ ತಿಳಿಸಿದ್ದಾರೆ.
ರಾಜ್ಯದಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಕೂಡಲೇ ಜಾರಿಗೆ ಬರುವಂತೆ ಪ್ರಮುಖ ಆಸ್ಪತ್ರೆಗಳ ಬಳಿ ಇರುವ ಶಾಲೆಗಳು ಮತ್ತು ಕಾಲೇಜುಗಳನ್ನು ವ್ಯಾಕ್ಸಿನೇಷನ್ ಕೇಂದ್ರವನ್ನಾಗಿ ಪರಿವರ್ತಿಸಿ ಜನರ ಆರೋಗ್ಯವನ್ನು ಕಾಪಾಡಬೇಕು ಎಂದು ಹೆಚ್.ಡಿಕೆ ಸಲಹೆ ನೀಡಿದ್ದಾರೆ.
ವ್ಯಾಕ್ಸಿನ್ ಪಡೆಯುವ ಜಾಗದ ಪಕ್ಕದಲ್ಲೇ ಪಾಸಿಟಿವ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ವಾರ್ಡಗಳಿವೆ. ಹೀಗಾಗಿ ಜನರಿಗೆ ಸೋಂಕು ತಗುಲುವ ಆತಂಕ ಎದುರಾಗಿದೆ. ಕೂಡಲೇ ಜಾರಿಗೆ ಬರುವಂತೆ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಹತ್ತಿರದ ಶಾಲಾ-ಕಾಲೇಜುಗಳು, ಸಮುದಾಯ ಭವನಗಳಿಗೆ ಬದಲಾವಣೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Key words: Vaccine- soon -students – travel- abroad-Former CM -HD Kumaraswamy.