ಮೈಸೂರು, ಜೂ.09, 2021 : (www.justkannada.in news) : ಮೈಸೂರಿನ ದಟ್ಟಗಳ್ಳಿಯಲ್ಲಿನ ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣ ಮಾಡಿದೆ. ಈ ಬಗ್ಗೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ವರ್ಗಾಯಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪೋಟಕ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ರೋಹಿಣಿ ಸಿಂಧೂರಿ ಹೇಳಿದಿಷ್ಟು…
ಕೆ.ಆರ್.ನಗರದ ಮಾನ್ಯ ಶಾಸಕರ ಕೆಲ ಅಕ್ರಮ ಭೂ ವ್ಯವಹಾರಗಳ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲು ಮುಂದಾದೆ. ಆದ್ದರಿಂದಲೇ ನನ್ನ ವಿರುದ್ಧ ಷಡ್ಯಂತ್ರ ನಡೆಸಿ, ಸುಳ್ಳು ಆರೋಪ ಮಾಡತೊಡಗಿದರು.
ನಾನು ಜಿಲ್ಲಾಧಿಕಾರಿಯಾಗಿ ಬಂದ ದಿನದಿಂದ ಮತ್ತು ಈಗ ನಾನು ವರ್ಗಾವಣೆಯಾದ ನಂತರವೂ ಶಾಸಕರಾದ ಮಹೇಶ್, ನನ್ನ ವಿರುದ್ಧ ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಲೇ ಇದ್ದಾರೆ.
ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳನ್ನು ಬೆದರಿಸುವುದು ಮತ್ತು ಹೆದರಿಸುವುದಕ್ಕೆ ಸುಳ್ಳು ಆರೋಪದ ತಂತ್ರ ಬಳಸುತ್ತಿದ್ದಾರೆ. ನನ್ನ ವಿರುದ್ಧ ಆರೋಪಗಳ ಸುರಿಮಳೆಯ ಹಿಂದಿನ ಉದ್ದೇಶವು ಇದೇ. ಆದರೆ ಅವರ ಈ ಯಾವುದೇ ಆರೋಪ, ಬೆದರಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.
ನನ್ನ ವರ್ಗಾವಣೆಯ ನಂತರವೂ ಅವರು ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಸಾರ್ವಜನಿಕ ವಲಯದಲ್ಲಿ ನನಗೆ ಕಪ್ಪು ಮಸಿ ಬಳಿಯುವುದು ಉದ್ದೇಶ. ಅದ್ದರಿಂದಲೇ ನಾನು ಅನಿವಾರ್ಯವಾಗಿ ಈ ಸ್ಪಷ್ಟನೆ ನೀಡಬೇಕಾಯಿತು.
ನಗರದಲ್ಲಿನ ಕೆಲ ಭೂ ಅಕ್ರಮಗಳ ದಾಖಲೆಗಳನ್ನು ಪರಿಶೀಲಿಸಿ ಅದರ ಮಾಹಿತಿ ಪಡೆದು ವಿಚಾರಣೆ ನಡೆಸಲಾಯಿತು. ಮೇಲ್ನೋಟಕ್ಕೆ ಇಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿದೆ. ಆದ್ದರಿಂದ ಈ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿ ತಾರ್ಕಿಕ ತೀರ್ಮಾನಕ್ಕೆ ತೆಗೆದುಕೊಳ್ಳಬೇಕು.
ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಹ, ಮೈಸೂರಿನ ಭೂ ಮಾಫಿಯ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯ ಮಾಡಿರುವುದನ್ನು ರೋಹಿಣಿ ಸಿಂಧೂರಿ ಇದೇ ವೇಳೆ ಉಲ್ಲೇಖಿಸಿದರು.
ರಾಜಕಾರಣಿಗಳ ಜತೆ ಕೈಜೋಡಿಸಿದ ಶಿಲ್ಪ :
ಮೈಸೂರು ನಗರ ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪನಾಗ್, ರಾಜಕಾರಣಿಗಳ ಜತೆಗೆ ಕೈಜೋಡಿಸಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದರು. ನನ್ನನ್ನು ಇಲ್ಲಿಂದ ಎತ್ತಂಗಡಿ ಮಾಡಿಸುವುದೇ ಅವರ ರಾಜೀನಾಮೆ ನಾಟಕದ ಹಿಂದಿನ ಉದ್ದೇಶವಾಗಿತ್ತು ಎಂದು ರೋಹಿಣಿ ಸಿಂಧೂರಿ ಅಭಿಪ್ರಾಯಪಟ್ಟರು.
key words : mysore-sa.ra.choultry-rajakaluve-build-rohini-sindhoori-allegation