ಬೆಂಗಳೂರು, ಜೂನ್ 17, 2021 (www.justkannada.in): ರಾಮನಗರ ಜಿಲ್ಲೆಯ 28 ವರ್ಷ ವಯೋಮಾನದ ಆಶಾ ವಿ. ಸ್ವಾಮಿ ಎಂಬ ಹೆಸರಿನ ಮಹಿಳೆ ಅಪರೂಪದ ಕಾಯಕದಲ್ಲಿ ತೊಡಗಿಸಿಕೊಂಡಿರುವ ಮೂಲಕ ನಾಗರಿಕ ಸಮಾಜಕ್ಕೆ ಘನತೆಯನ್ನು ತಂದುಕೊಟ್ಟಿದ್ದಾರೆ. ಅದೇನೆಂದಿರಾ?! ಆಶಾ ಅವರು ಕಳೆದ ಐದು ವರ್ಷಗಳಿಂದ ಅನಾಥ ಶವಗಳ ಸಂಸ್ಕಾರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಆ ಮೂಲಕ ಇಡೀ ಸಮಾಜಕ್ಕೆ ಒಂದು ಸಂದೇಶ ನೀಡಿದ್ದಾರೆ.
ಹೌದು ಆಶಾ ಕಳೆದ ಐದು ವರ್ಷಗಳಲ್ಲಿ ಸ್ವತಃ ಸುಮಾರು 3000ಕ್ಕೂ ಹೆಚ್ಚಿನ ಸಂಖ್ಯೆಯ ಅನಾಥ ಶವಗಳ ಅಂತಿಮ ಸಂಸ್ಕಾರಗಳನ್ನು ನಡೆಸಿದ್ದಾರೆ ಹಾಗೂ ೪,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಶವಗಳನ್ನು ಸಂಬಂಧಪಟ್ಟ ಕುಟುಂಬಸ್ಥರ ವಿಳಾಸವನ್ನು ಪತ್ತೆ ಹಚ್ಚಿ ಅವರಿಗೆ ರವಾನಿಸಿದ್ದಾರೆ. ಕೆಂಗೇರಿ ಹಾಗೂ ಮಂಡ್ಯ ನಗರದ ನಡುವಿನ ರೈಲ್ವೆ ಟ್ರ್ಯಾಕ್ ಮೇಲೆ ಯಾವುದೇ ಶವ ಕಂಡು ಬಂದರೂ ರೈಲ್ವೆ ಪೊಲೀಸರು ಈಗ ಮೊದಲು ಆಶಾ ಅವರಿಗೆ ಕರೆ ಮಾಡಿ ವಿಚಾರ ತಿಳಿಸುತ್ತಾರೆ. ಸ್ಥಳೀಯ ಪೊಲೀಸರೂ ಸಹ ಯಾವುದಾದರೂ ಅನಾಥ ಶವ ಕಂಡು ಬಂದರೆ ಆಕೆಯನ್ನೇ ಸಂಪರ್ಕಿಸುತ್ತಾರೆ!
ಅನಾಥ ಶವಗಳ ಪೈಕಿ ಬಹುಪಾಲು ಹಿರಿಯ ನಾರೀಕರದ್ದಾಗಿರುತ್ತದೆ. ಅದರಲ್ಲಿಯೂ ಬಡತನದಿಂದಾಗಿ ಹಾಗೂ ಕುಟುಂಬಸ್ಥರಿಂದ ಹೊರದೂಲ್ಪಟ್ಟ ಕಾರಣದಿಂದಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡವರು, ಅಥವಾ ಒಂಟಿಯಾಗಿ ಪ್ರಾಣ ಕಳೆದುಕೊಂಡಿರುವವರ ಸಂಖ್ಯೆಯೇ ಹೆಚ್ಚು. ಅಪಘಾತಗಳಿಂದಾಗಿ ಮಡಿದಿರುವವರ ಪ್ರಕರಣಗಳಲ್ಲಿ ಮಡಿದ ವ್ಯಕ್ತಿಯೇ ಕುಟುಂಬದ ಏಕೈಕ ಆದಾಯಗಳಿಸುವ ವ್ಯಕ್ತಿಯಾಗಿರುತ್ತಾರೆ ಹಾಗೂ ಮನೆಯಿಂದ ದೂರ ಬಂದು ಕೆಲಸದಲ್ಲಿರುವವರಾಗಿರುತ್ತಾರೆ, ಎನ್ನುತ್ತಾರೆ ಆಶಾ.
ಇಂತಹ ಒಂದು ಘಟನೆಯನ್ನು ವಿವರಿಸುತ್ತಾ ಆಶಾ, ಕಟ್ಟಡಿ ನಿರ್ಮಾಣ ಕೆಲಸದಲ್ಲಿ ತೊಡಗಿದ್ದಂತಹ ಓರ್ವ ವ್ಯಕ್ತಿಯ ಕುಟುಂಬಸ್ಥರನ್ನು ಎರಡು ದಿನಗಳವರೆಗೂ ಹುಡುಕಾಡಿದರೂ ಸಿಗಲಿಲ್ಲ. ಹಾಗಾಗಿ, ಆಶಾ ಅವರ ತಂಡವೇ ಅಂತಿಮ ಸಂಸ್ಕಾರವನ್ನು ನಡೆಸಿ ಶವಸಂಸ್ಕಾರವನ್ನೂ ನಿರ್ವಹಿಸಿದರು. ಆದರೆ ಈ ಪಕ್ರರಣದಲ್ಲಿ ಎರಡು ದಿನಗಳ ನಂತರ, ತೆಲಂಗಾಣದಿಂದ ಆತಂಕಗೊಂಡ ಕುಟುಂಬದ ವ್ಯಕ್ತಿಯೊಬ್ಬರು ಈಕೆಗೆ ದೂರವಾಣಿ ಕರೆ ಮಾಡಿ, “ಆತ ತನ್ನ ಕುಟುಂಬಸ್ಥರಿಗೆ ಹಣ ಕಳಿಸಲು ಇಲ್ಲಿ ಕೆಲಸ ಮಾಡುತ್ತಿದ್ದರು,” ಎಂದರಂತೆ. ಇಂತಹ ಅನೇಕ ಘಟನೆಗಳಿಗೆ ಆಶಾ ಅವರು ಸಾಕ್ಷಿಯಾಗಿದ್ದು ಆಕೆಯ ಮನಸ್ಸಿನ ಮೇಲೆ ಅಘಾದವಾದ ಪರಿಣಾಮ ಬೀರಿದೆ.
“ಯಾವುದಾದರೂ ಅನಾಥ ಶವ ಕಂಡು ಬಂದರೆ ನನಗೆ ಬರುವ ಮೊದಲ ಆಲೋಚನೆ ಏನೆಂದರೆ ಇವರ ಕುಟುಂಬಸ್ಥರು ಯಾರಾದರೂ ಇವರಿಗಾಗಿ ಕಾಯುತ್ತಿರುವರೇನೋ?” ಅದಕ್ಕಾಗಿಯೇ ನಾನು ಅನಾಥ ಶವಗಳ ಕುಟುಂಬಸ್ಥರನ್ನು ಪತ್ತೆ ಹಚ್ಚಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತೇನೆ,” ಎನ್ನುತ್ತಾರೆ.
ಈಕೆಯೊಂದಿಗೆ ಈಕೆಯ ತಂಡ ಹಾಗೂ ಪೊಲೀಸರು ಅನಾಥ ಶವಗಳು ಬಿದ್ದಿರುವ ಸುತ್ತಮುತ್ತಲಿನ ಸ್ಥಳಗಳಲ್ಲಿ ಗುರುತಿನ ಚೀಟಿಗಳು, ಮೊಬೈಲ್ ಫೋನ್ ಗಳು ಅಥವಾ ಭಾವಚಿತ್ರಗಳಂತಹ ಯಾವುದಾದರೂ ಗುರುತುಗಳು ಸಿಗತ್ತವೇನೋ ಎಂದು ಹುಡುಕಾಡುತ್ತಾರೆ. ಯಾವುದೇ ವಿವರಗಳು ದೊರೆಯದಿದ್ದರೆ, ಕುಟುಂಬಸ್ಥರನ್ನು ಪತ್ತೆ ಹಚ್ಚಲು ಸಾಮಾಜಿಕ ಜಾಲತಾಣದಲ್ಲಿ ವಿವರಗಳನ್ನು ಅಪ್ಲೋಡ್ ಮಾಡುತ್ತಾರೆ. ಅಂತಿಮವಾಗಿ ಯಾರೂ ಬರದಿದ್ದರೆ ಅವರೇ ಸ್ವತಃ ಅಂತಿಮ ಸಂಸ್ಕಾರ ಹಾಗೂ ಶವಸಂಸ್ಕಾರವನ್ನೂ ನಿರ್ವಹಿಸುತ್ತಾರೆ.
ಸೀಮಿತ ಸಂಪನ್ಮೂಲಗಳು
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಅಧ್ಯಕ್ಷರಾದ ರವಿ ಶೆಟ್ಟಿ ಅವರು ಒಮ್ಮೆ ವೇಗವಾಗಿ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದರು. ಆಗ ಓರ್ವ ಮಹಿಳೆ ಒಂದು ಹೆಣವನ್ನು ಆ್ಯಂಬುಲೆನ್ಸ್ ಗೆ ಹೊತ್ತುಕೊಂಡು ಹೋಗುತ್ತಿರುವುದು ಅವರ ಕಣ್ಣಿಗೆ ಬಿತ್ತು. ಇದರಿಂದ ಆಶ್ಚರ್ಯಚಕಿತರಾದ ರವಿ ಶೆಟ್ಟಿ ಅವರು ಆ ಮಹಿಳೆಯನ್ನು ನಿಲ್ಲಿಸಿ ಮಾತಿಗೆಳೆದರು. ಆಗ ಆಕೆಯ ಹೆಸರು ಆಶಾ ಎಂದೂ ಹಾಗೂ ಆಕೆ ಮತ್ತು ಆಕೆಯ ತಂಡದ ಕೆಲಸಗಳ ಕುರಿತು ತಿಳಿದುಕೊಂಡರು. ವೃತ್ತಿಯಲ್ಲಿ ಆಶಾ ಓರ್ವ ಮಹಿಳಾ ರೈತೆ ಹಾಗೂ ಕೃಷಿ ಕಾರ್ಮಿಕಳಾಗಿರುವುದು ತಿಳಿಯಿತು. ಇವರಿಗೆ ಯಾವ ರೀತಿಯ ಸಂಪನ್ಮೂಲಗಳೂ ಲಭ್ಯವಿರಲಿಲ್ಲ. ಆದರೂ ಇವರ ತಂಡ ಈ ಉದಾತ್ತ ಕೆಲಸದಲ್ಲಿ ತೊಡಗಿಸಿಕೊಂಡಿರುವುದನ್ನು ಅರಿತರು.
“ಪ್ರತಿ ದಿನ ಈಕೆ ಸುಮಾರು 200 ಜನರಿಗೆ ಊಟ ಒದಗಿಸುವ ಪ್ರಯತ್ನ ಮಾಡುತ್ತಾರೆ, ಜೊತೆಗೆ ಅನೇಕ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕಗಳನ್ನು ಪಾವತಿಸಲು ಹಾಗೂ ಅನಾಥ ಶವಗಳ ಸಂಸ್ಕಾರವನ್ನು ಮಾಡುವ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದಾರೆ,” ಎಂದು ವಿವರಿಸುತ್ತಾರೆ.
ಗೌರಿ (ಹೆಸರು ಬದಲಾಯಿಸಿದೆ) ಎಂಬ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ ವರ್ಷ ಈಕೆಯ ಪತಿ ಕೋವಿಡ್ ನಿಂದಾಗಿ ಮೃತಪಟ್ಟರು. ಇದರಿಂದಾಗಿ ಶಾಲೆಗೆ ಹೋಗುತ್ತಿದ್ದ ಇವರ ಮಕ್ಕಳ ಶುಲ್ಕ ಪಾವತಿಸುವುದು ಈಕೆಗೆ ಕಷ್ಟವಾಯಿತು. ಆಗ ನೆರವಿಗೆ ಬಂದದ್ದೇ ‘ಆಶಾ’! ಆಶಾ ಮಾಡಿದ ನೆರವಿನಿಂದಾಗಿ ಗೌರಿಯ ಇಬ್ಬರು ಹೆಣ್ಣು ಮಕ್ಕಳು ಆನ್ಲೈನ್ನ ತರಗತಿಗಳಿಗೆ ಹಾಜರಾಗುವುದು ಮುಂದುವರೆದಿದೆ!
ಯಾರಾದರೂ ಕಷ್ಟದಲ್ಲಿರುವುದು ಕಂಡರೆ ಆಶಾ ಅವರ ಮನಮಿಡಿಯುತ್ತದೆ. ಜೀವ ರಕ್ಷಾ ಚಾರಿಟೆಬಲ್ ಟ್ರಸ್ಟ್ ಎಂಬ ಲಾಭದ ಉದ್ದೇಶವಿಲ್ಲದಿರುವ ಸಂಸ್ಥೆಯನ್ನು ಸ್ಥಾಪಿಸಿರುವ ಆಶಾ ಅವರ ಸಂಸ್ಥೆಗೆ ಆಕೆಯ ಕೆಲವು ಸ್ನೇಹಿತರು ಹಾಗೂ ಕುಟುಂಬಸ್ಥರು ಹಣ ಸಹಾಯ ಮಾಡುತ್ತಾರೆ. ಇದರಲ್ಲೇ ಈಕೆ ಸಾಧ್ಯವಾದಷ್ಟೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಕೆಲವೊಮ್ಮೆ ಕೆಲವರು ಕೇವಲ ರೂ.10 ಅಥವಾ ರೂ.೨೦ ನೀಡುವುದೂ ಉಂಟು ಎನ್ನುತ್ತಾರೆ ಆಶಾ.
ತಮ್ಮ ತಂಡದಲ್ಲಿರುವ ಇಂತಹ ಓರ್ವ ಸ್ವಯಂಸೇವಕ ರಾಕೇಶ್ ಆರ್ ಗೌಡ. ರಾಕೇಶ್ ಕಳೆದ ಐದು ವರ್ಷಗಳಿಂದ, ಆಹಾರ ಸಾಗಿಸುವ ಕೆಲಸ, ಡೆಲಿವರಿ ಹಾಗೂ ಹಾಲು ಪ್ಯಾಕೆಟ್ ಗಳನ್ನು ಇಳಿಸುವುದು ಮೂರು ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ದಿನಪೂರ್ತಿ ಕಷ್ಟಪಟ್ಟು ದುಡಿದ ನಂತರವೂ ರಾಕೇಶ್, ಆಶಾ ಅವರಿಗೆ ತನ್ನ ಕೈಲಾದಷ್ಟು ಸಹಾಯ ಮಾಡುತ್ತಾರೆ. “ಪ್ರತಿಯೊಬ್ಬರೂ ಘನತೆಯುಳ್ಳ ಸಾವಿಗೆ ಅರ್ಹರು,” ಎನ್ನುತ್ತಾರೆ ರಾಕೇಶ್.
ಈ ತಂಡದ ಕೆಲಸವನ್ನು ಗಮನಿಸಿದ ಚನ್ನಪಟ್ಟಣದ ಡಿವೈಎಸ್ಪಿ ರಮೇಶ್ ಕೆ. ಅವರು ಜ್ಞಾನ ಯೋಗಿ ಲಯನ್ಸ್ ಕ್ಲಬ್ನಿಂದ ಒಂದು ಆ್ಯಂಬುಲೆನ್ಸ್ ಅನ್ನು ಇವರಿಗೆ ವರ್ಗಾಯಿಸಿದರು.
ಸುಲಭದ ಕೆಲಸವಲ್ಲ
ಆಶಾ ಅವರಿಗೆ ಇದು ಸುಲಭದ ಕೆಲವೇನೂ ಅಲ್ಲ. ಕೆಲವು ಶವಗಳನ್ನು ಕಂಡಾಗ ಆಕೆಗೆ ತುಂಬಾ ನೋವಾಗುತ್ತದೆ. ಕೆಲವೊಮ್ಮೆ ಶವಸಂಸ್ಕಾರ ನಡೆಸಿದ ನಂತರ, ಇನ್ನೂ ಸ್ವಲ್ಪ ಪ್ರಯತ್ನಿಸಿದ್ದರೆ ಅವರ ಕುಟುಂಬಸ್ಥರನ್ನು ಪತ್ತೆ ಹಚ್ಚಬಹುದಿತ್ತೇನೋ, ಕುಟುಂಬಸ್ಥರಿಗೆ ಕೊನೆಯ ಬಾರಿ ನೋಡುವ ಅವಕಾಶ ಲಭಿಸದೆಯೇ ಶವಸಂಸ್ಕಾರ ಮಾಡಿಬಿಟ್ಟೆನೇನೋ ಎಂದೆನಿಸುತ್ತಿರುತ್ತದಂತೆ. ಆದರೂ ಸಹ ಆಕೆ ಈ ಕೆಲಸವನ್ನು ನಿಸ್ವಾರ್ಥವಾಗಿ ಮುಂದುವರೆಸುತ್ತಿದ್ದಾರೆ. ಮೊದಲು ಈಕೆ ಈ ಕೆಲಸ ಆರಂಭಿಸಿದ್ದ ೨೦೧೬ರಲ್ಲಿ. ಆ್ಯಂಬುಲೆನ್ಸ್ ಚಾಲಕರಾಗಿರುವ ಈಕೆಯ ಸಹೋದರ ಪ್ರವೀಣ್ ಕುಮಾರ್ ಅವರಿಗೆ ಆಗಾಗ ರೈಲು ಪಟ್ಟಿಗಳ ಮೇಲೆ ಅನಾಥ ಶವ ಬಿದ್ದಿರುವ ಬಗ್ಗೆ ದೂರವಾಣಿ ಕರೆಗಳು ಬರುತಿತ್ತಂತೆ. ಇಂತಹ ಒಂದು ಪ್ರಕರಣದಲ್ಲಿ ಆಶಾ ಸಹ ಆಕೆಯ ಸಹೋದರನೊಂದಿಗೆ ತೆರಳಿದರು. ಆ ಶವವನ್ನು ಅಲ್ಲಿ ನೋಡಿದಾಗ ಆಕೆಗೆ ದಿಗ್ಭ್ರಾಂತಿಯಾಯಿತು. ರೈಲ್ವೆ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿ ಶವವನ್ನು ದಿಟ್ಟಿಸುತ್ತಿದ್ದರು. ಆದರೆ ಯಾರೂ ಸಹ ರೈಲ್ವೆ ಪಟ್ಟಿಯನ್ನು ಕ್ಲಿಯರ್ ಮಾಡಲು ಮುಂದೆ ಬರಲಿಲ್ಲ. ನನಗೆ ಬಹಳ ನೋವಾಯಿತು. ಹೀಗ ಮಡಿದವರಿಗೆ ಘನತೆಯುಳ್ಳ ಸಾವನ್ನು ಒದಗಿಸುವುದು ನನ್ನ ಕರ್ತವ್ಯ ಎಂದನಿಸಿತು, ಎನ್ನುತ್ತಾರೆ ಆಶಾ.
ಆಕೆಯ ಕುಟುಂಬದವರು ಆಕೆಯ ಈ ಕೆಲಸಕ್ಕೆ ಆರಂಭದಲ್ಲಿ ವಿರೋಧಿಸಿದರು. ಆಕೆಯ ಪತಿ, ಪೋಷಕರು ಹಾಗೂ ಮೈದುನ ಈ ಕೆಲಸಕ್ಕೆ ಒಪ್ಪಲಿಲ್ಲ. “ಅವರೆಲ್ಲರನ್ನೂ ಒಪ್ಪಿಸಲು ನನಗೆ ಸ್ವಲ್ಪ ಸಮಯ ಹಿಡಿಸಿತು, ಆದರೆ ಅಂತಿಮವಾಗಿ ಒಪ್ಪಿಸಿದೆ,” ಎಂದು ಮಂದಹಾಸದೊಂದಿಗೆ ಹೇಳುತ್ತಾರೆ ಆಶಾ.
Key words: woman -thousands -orphans – Corpse- funeral