ಕೃಷ್ಣಾ ನದಿ ನೀರು ಹಂಚಿಕೆ ಐತೀರ್ಪು, ಅಂತಿಮ ಅಧಿಸೂಚನೆಗೆ ಕರ್ನಾಟಕ- ಮಹಾರಾಷ್ಟ್ರ ಜಂಟಿ ಪ್ರಯತ್ನ : ಸಚಿವ ಬಸವರಾಜ ಬೊಮ್ಮಾಯಿ

 

ಬೆಂಗಳೂರು, ಜೂ.19, 2021 : (www.justkannada.in news) : ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ಬ್ರಿಜೇಶ್ ಮಿಶ್ರಾ ನ್ಯಾಯಾಧೀಕರಣ ನೀಡಿರುವ ಐ ತೀರ್ಪಿನ ಕುರಿತು ಅಂತಿಮ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟಿನಲ್ಲಿ ಜಂಟಿ ಹೋರಾಟಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಿರ್ಧರಿಸಿವೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಬೆಂಗಳೂರಿನಲ್ಲಿ ನಡೆದ ಕೃಷ್ಣಾ ಮತ್ತು ಭೀಮಾ ಪ್ರದೇಶದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಂತರರಾಜ್ಯ ಪ್ರವಾಹ ಪರಿಶೀಲನಾ ಸಮಿತಿಯ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

jk

ಕೃಷ್ಣ ನದಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಬೃಜೇಶ್ ಮಿಶ್ರಾ ನೇತೃತ್ವದ ನ್ಯಾಯಾಧಿಕರಣ ಐ ತೀರ್ಪು ನೀಡಿದೆ. ಆ ಪ್ರಕಾರ ಕರ್ನಾಟಕ ಮತ್ತು ಮಹಾರಾಷ್ಟ್ರ ನೀರು ಹಂಚಿಕೆ ಮಾಡಿಕೊಳ್ಳುತ್ತಿವೆ. ಆದರೆ ಈ ಐತೀರ್ಪಿನ ಕುರಿತು ಅಂತಿಮ ಅಧಿಸೂಚನೆ ಇದುವರೆಗೆ ಹೊರಬಿದ್ದಿಲ್ಲ. ಅಂತಿಮ ಅಧಿಸೂಚನೆ ಪ್ರಕಟಗೊಳ್ಳಬೇಕು ಎಂಬುದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳು ಒಟ್ಟಿಗೆ ಕುಳಿತುಕೊಂಡು ಚರ್ಚೆ ಮಾಡಿ ಆದಷ್ಟು ಬೇಗ ಅಧಿಸೂಚನೆ ಹೊರಡಿಸುವ ಸಲುವಾಗಿ ಸುಪ್ರೀಂಕೋರ್ಟಿನಲ್ಲಿ ಜಂಟಿ ಪ್ರಯತ್ನ ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

ಮಹಾರಾಷ್ಟ್ರ ರಾಜ್ಯದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಜಲಸಂಪನ್ಮೂಲ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

key words : karntaka-cm-yadiyurappa-maharstra-krishna-river-dispute-suprem-court