ಬೆಂಗಳೂರು, ಜೂನ್ 22 (www.justkannada.in): ಬೆಂಗಳೂರಿನ ಮರಗಳನ್ನು ಉಳಿಸುವ ಆಂದೋಲನವನ್ನು ನಟಿ, ಮಾಜಿ ಸಂಸದೆ ರಮ್ಯಾ ಬೆಂಬಲಿಸಿದ್ದಾರೆ.
ಹೌದು. ಬೆಂಗಳೂರಿನಲ್ಲಿ 6,000 ಮರಗಳ ಮಾರಣ ಹೋಮಕ್ಕೆ ಸಿದ್ಧತೆ ನಡೆಯುತ್ತಿದ್ದು, ಯೋಜನೆ ವಿರೋಧಿಸಿ ಸಹಿ ಸಂಗ್ರಹಕ್ಕೆ ರಮ್ಯಾ ಮನವಿ ಮಾಡಿದ್ದಾರೆ.
ಹೆಬ್ಬಾಳ-ನಾಗವಾರ ಕಣಿವೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಈ ಯೋಜನೆ ಅಡಿಯಲ್ಲಿ ಯಲಹಂಕದ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ.
ಈ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಯುತ್ತಿದೆ. ಪರಿಸರ ಪರ ಕಾಳಜಿ ಹೊಂದಿರುವ ಅನೇಕರು ಮರವನ್ನು ಕತ್ತರಿಸುವುದಕ್ಕೆ ವಿರೋಧಿಸಿ ಸಹಿ ಸಂಗ್ರಹಿಸುತ್ತಿದ್ದಾರೆ. ಇದನ್ನು ರಮ್ಯಾ ಬೆಂಬಲಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಮನವಿ ಮಾಡಿದ್ದಾರೆ.