ಮೈಸೂರು,ಜುಲೈ,1,2021(www.justkannada.in): ತಪ್ಪು ಮಾಹಿತಿಯಿಂದ ಕೆಲವರು ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳೋದ್ರಿಂದ ಏನು ಸಮಸ್ಯೆ ಆಗಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಕೋವಿಡ್ ನಂತರದ ಪುನಶ್ಚೇತನಕ್ಕಾಗಿ ಕಿಟ್ ತಯಾರಿ ಮಾಡಲಾಗಿದ್ದು ಜೆಎಸ್ಎಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ಈ ಕಿಟ್ ಸಂಶೋಧನೆ ಮಾಡಲಾಗಿದೆ. ಈ ಕೋವಿಡ್ ನಂತರದ ರೆಜುವಿನೇಷನ್ ಕಿಟ್ ಅನ್ನ ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕೋವಿಡ್ ಲಸಿಕೆ, ಮಾಸ್ಕ್ ಧರಿಸುವ ಬಗ್ಗೆ ಪಾಠ ಮಾಡಿದರು. ತಪ್ಪು ಮಾಹಿತಿಯಿಂದ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳೋದ್ರಿಂದ ಏನು ಸಮಸ್ಯೆ ಆಗಲ್ಲ. ವೈದ್ಯರು, ಸ್ವಾಮೀಜಿಗಳು ಸೇರಿದಂತೆ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳೋದ್ರಲ್ಲಿ ಏನು ಸಮಸ್ಯೆ ಆಗಲ್ಲ. ವಿದ್ಯಾವಂತರಲ್ಲೂ ಅರಿವು ಮೂಡಿಲ್ಲ, ಇನ್ನೂ ಅವಿದ್ಯಾವಂತರ ಪಾಡೇನು..? ಎಂದು ಪ್ರಶ್ನಿಸಿದರು.
ನಮ್ಮ ಅತ್ತಿಗೆ ಕೊರೋನಾದಿಂದ ಸತ್ತು ಹೋದರು. ಕೊರೊನಾ ಯಾರನ್ನು ಬಿಡುತ್ತಿಲ್ಲ. ವಿದ್ಯಾವಂತರಿಗೂ, ಅವಿದ್ಯಾವಂತರಿಗೂ ಕೊರೊನಾ ಬರುತ್ತೆ. ಈ ಕೊರೊನಾ ಮುಗಿಯುವವರೆಗೂ ಮಾಸ್ಕ್ ಹಾಕಿಕೊಳ್ಳಬೇಕು. ಕೆಲವರು ಬಾಯಿಗೆ ಮಾಸ್ಕ್ ಹಾಕಿಕೊಂಡು ಮೂಗಿನ ಮೇಲೆ ಸರಿಯಾಗಿ ಹಾಕುವುದಿಲ್ಲ. ಇದರ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಿದ್ಧರಾಮಯ್ಯ ಹೇಳಿದರು.
ಸರ್ಕಾರ ಎಲ್ಲರಿಗೂ ಲಸಿಕೆ ಕೊಡಬೇಕು ಹಾಗೆ ಟೆಸ್ಟ್ ಹೆಚ್ಚಾಗಿ ಮಾಡಿಸಬೇಕು. ಇನ್ನೂ ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಲ್ಲ, ವ್ಯಾಕ್ಸಿನ್ ಬಗ್ಗೆಯೂ ಅರಿವು ಮೂಡಿಲ್ಲ. ಸ್ವಲ್ಪ ಕೊರೊನಾ ಕಡಿಮೆಯಾಗುತ್ತಿದ್ದಂತೆ ಮತ್ತೆ ಜನ ಸೇರುತ್ತಾರೆ. ಮತ್ತೆ ಮಾಸ್ಕ್ ಧರಿಸುವುದನ್ನ ಬಿಡುತ್ತಾರೆ. ಆಗ ಮುಂದಿನ ಅಲೆ ಶುರುವಾಗುತ್ತದೆ. ಈ ಬಗ್ಗೆ ಜನರು ಎಚ್ಚರ ವಹಿಸಬೇಕು ಆಗ ಮಾತ್ರ ಕೊರೊನಾ ತಡೆಯಲು ಸಾಧ್ಯ ಎಂದು ಸಿದ್ಧರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
Key words: mysore-suttur math- covid- Former CM –Siddaramaiah- lesson – vaccine -mask wear