ಮೈಸೂರು, ಜು.01, 2021 : (www.justkannada.in news ) : ಇಂದು ಜುಲೈ ೧, ವೈದ್ಯರ ದಿನ. ಕೆಲ ಷಡ್ಯಂತ್ರ, ಪಿತೂರಿಗಳು ನಡೆಯದೆ ಹೋಗಿದ್ರೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿಯೇ ಮುಂದುವರೆದಿರುತ್ತಿದ್ರು. ಅಷ್ಟೇ ಅಲ್ಲ ಇವತ್ತಿಗೆ ಮೈಸೂರು ಕೊರೊನಾ ಮುಕ್ತ ಮೈಸೂರು ಕೂಡಾ ಆಗಿರುತ್ತಿತ್ತೇನೋ. ಆದರೆ ಆಗಿರೋದೆ ಬೇರೆ. ರಾಜ್ಯದ ಉಳಿದೆಲ್ಲಾ ಜಿಲ್ಲೆಗಳು ಲಾಕ್ ಡೌನ್ ಸಡಿಲಿಸಿದರೆ, ಮೈಸೂರು ಜಿಲ್ಲೆ ಮಾತ್ರ ಲಾಕ್ ಡೌನ್ ಜಾರಿಯಲ್ಲಿರುವ ಏಕೈಕ ಜಿಲ್ಲೆಯಾಗಿದೆ.
ಮೈಸೂರಿನಿಂದ ವರ್ಗಾವಣೆಯಾಗುವ ಕೆಲವೇ ಕೆಲವು ದಿನಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರೋಹಿಣಿ ಸಿಂಧೂರಿ, ಕೊರೊನಾ ವೇಳೆ ಪ್ರಾಣದ ಹಂಗು ತೊರೆದು ಜೀವ ಉಳಿಸುವ ಕೆಲಸ ಮಾಡುತ್ತಿರುವ ವೈದ್ಯರಿಗೆ ‘ ಕೊರೊನಾ ಮುಕ್ತ ಮೈಸೂರು’ ಮಾಡುವ ಮೂಲಕ ಜುಲೈ ೧ರಂದು ಗೌರವ ಸಮರ್ಪಣೆ ಮಾಡುವ ಪಣತೊಟ್ಟಿದ್ದೇವೆ ಎಂದಿದ್ದರು. ಈ ನಿಟ್ಟಿನಲ್ಲಿ ‘ let us stand united to make mission covid free mysuru’ ಅಭಿಯಾನದಂತೆ ಕರೋನಾ ನಿಯಂತ್ರಣಕ್ಕೂ ಕಾರ್ಯ ಪ್ರವೃತ್ತರಾದರು.
ಹೌದು, ಅವರೊಬ್ಬರಿದ್ದಿದ್ರೆ ಇವತ್ತು ಮೈಸೂರಿನಲ್ಲಿ ಇಷ್ಟು ಕೊರೊನಾ ಸಕ್ರಿಯ ಪ್ರಕರಣಗಳು ಇರುತ್ತಿರಲಿಲ್ಲವೇನೋ. ರೋಹಿಣಿ ಸಿಂಧೂರಿ ಅಂದುಕೊಂಡಿದ್ದನ್ನು ಸಾಧಿಸುವ ಹೆಣ್ಣುಮಗಳು. ಹಿಂದಿನ ಜಿಲ್ಲೆಗಳಲ್ಲಿನ ಆಕೆಯ ಕಾರ್ಯವೈಖರಿ ಇದಕ್ಕೆ ಸಾಕ್ಷಿ.
ಕೊರೊನಾ ಮೊದಲನೆ ಮತ್ತು ಎರಡನೇ ಅಲೆ ವೇಳೆ ಮೈಸೂರಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ರು. ಮೈಸೂರಿನಿಂದ ಅವರು ವರ್ಗಾವಣೆಯಾಗುವ ಜೂನ್ ಮೊದಲ ವಾರದಲ್ಲಿ ಪಾಸಿಟಿವಿಟಿ ರೇಟ್ ಕ್ರಮೇಣ ಕಂಟ್ರೋಲ್‌ಗೆ ಬರುತ್ತಿತ್ತು. ಮತ್ತು ಪಾಸಿಟಿವಿಟಿ ಪ್ರಮಾಣದಲ್ಲಿ ರಾಜ್ಯದಲ್ಲಿಯೇ ಮೈಸೂರು ೫ನೇ ಸ್ಥಾನದಲ್ಲಿತ್ತು. ಜೂನ್ ೭ರಂದು ಪಾಸಿಟಿವಿಟಿ ಲೆಕ್ಕದಲ್ಲಿ ಮೈಸೂರು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿತ್ತು ಮತ್ತು ಪ್ರಕರಣಗಳ ಸಂಖ್ಯೆ ಕೂಡಾ ಇಳಿಮುಖವಾಗಿತ್ತು. ಜೂನ್ ೧೦ರಂದು ಮೈಸೂರು ೫ನೇ ಸ್ಥಾನಕ್ಕೆ ಬಂತು. ಇವೆಲ್ಲ ಅಂಕಿ ಅಂಶಗಳನ್ನು ಕೊವಿಡ್ ವಾರ್ ರೂಂ ಪ್ರತಿನಿತ್ಯ ನೀಡುವ ದಾಖಲೆಗಳಲ್ಲಿ ಕಾಣಬಹುದು.
ಇವೆಲ್ಲವೂ ಸಾಧ್ಯವಾಗಿದ್ದು ರೋಹಿಣಿ ಸಿಂಧೂರಿಯವರು ಮೈಸೂರಿನಲ್ಲಿ ಮೇ ಕೊನೆಯಲ್ಲಿ ಮತ್ತು ಜೂನ್ ಮೊದಲ ವಾರದಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ. ಕಠಿಣ ಲಾಕ್‌ಡೌನ್‌ನಿಂದಾಗಿ ಪ್ರಕರಣಗಳ ಸಂಖ್ಯೆ ಕೂಡಾ ಕಡಿಮೆಯಾಗಿತ್ತು. ರಾಜ್ಯದಲ್ಲಿಯೇ ಮೈಸೂರು ಜಿಲ್ಲೆಯಲ್ಲಿ ಅತಿಹೆಚ್ಚು ಕೊವಿಡ್ ಪರೀಕ್ಷೆಗಳನ್ನು ನಡೆಸಲಾಯಿತು. ಪರೀಕ್ಷೆ ಹೆಚ್ಚಳವಾದಾಗ ಸಹಜವಾಗಿಯೇ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಆದ್ರೆ ಪ್ರಕರಣಗಳ ಹೆಚ್ಚಳಕ್ಕೆ ಜಿಲ್ಲಾಧಿಕಾರಿಗಳ ವೈಫಲ್ಯವೇ ಕಾರಣ ಎಂಬಂತೆ ಬಿಂಬಿಸಲಾಯಿತು.
ರಾಜಕಾರಣಿಗಳ ಕೆಂಗಣ್ಣಿಗೆ ತಾವು ಗುರಿಯಾಗಿರುವ ವಿಷಯ ಗೊತ್ತಿದ್ದರೂ, ಮೈಸೂರಿನಿಂದ ತಮ್ಮನ್ನು ಎತ್ತಂಗಡಿ ಮಾಡಲು ಷಡ್ಯಂತ್ರಗಳು ನಡೆಯುತ್ತಿವೆ ಎಂದು ತಿಳಿದಿದ್ದರೂ ಸಿಂಧೂರಿ ಯಾವುದಕ್ಕೂ ಕ್ಯಾರೆ ಎನ್ನಲಿಲ್ಲ. ಕೊರೊನಾ ಕಂಟ್ರೋಲ್ ಮಾಡೋದೆ ತಮ್ಮ ಏಕೈಕ ಗುರಿ ಎಂಬಂತೆ ಕೆಲಸ ಮಾಡಿದ್ರು. ಆದರೂ ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ ಇದಕ್ಕೆ ಜಿಲ್ಲಾಧಿಕಾರಿಗಳೇ ನೇರ ಕಾರಣ ಎಂಬ ಆರೋಪಗಳು ಕೆಲ ರಾಜಕಾರಣಿಗಳಿಂದಲೇ ಕೇಳಿಬಂದವು.
ಡಿಸಿ ಪರ ಮಾತನಾಡುತ್ತಿದ್ದವರೆಲ್ಲ ಜಿಲ್ಲಾಧಿಕಾರಿಗಳು ಎಸಿ ರೂಂನಲ್ಲಿ ಮೀಟಿಂಗ್ ಮಾಡೋದು ಬಿಟ್ಟು ಹಳ್ಳಿಗಳತ್ತ ತೆರಳಲಿ ಎಂದು ಹರಿಹಾಯಲು ಶುರು ಮಾಡಿದ್ರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರೋಹಿಣಿ ಮಾತಿಗಿಂತ ಕೃತಿ ಲೇಸೆಂದು ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇರಲು ಆರಂಭಿಸಿದ್ರು.
ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ಬಂದ ಆರಂಭದ ದಿನಗಳಿಂದಲೇ ಜನಪ್ರತಿನಿಧಿಗಳ ಜಟಾಪಟಿ ಆರಂಭವಾಯಿತು. ಒಂದಲ್ಲಾ ಒಂದು ಕಾರಣದಿಂದ ರೋಹಿಣಿ ವಿರುದ್ಧ ಆರೋಪ-ಪ್ರತ್ಯಾರೋಪಗಳು ಕೇಳಿಬರೋದು ಸಾಮಾನ್ಯ ಎಂಬಂತಾಯಿತು. ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿಯನ್ನು ಅವಮಾನಿಸೋದ್ರಿಂದ ಹಿಡಿದು, ಪ್ರೆಸ್‌ಮೀಟ್ ನಡೆಸೋದು, ತಾಲೂಕು ಮಟ್ಟದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸುವ ಜನಸಂಪರ್ಕ ಸಭೆಗೆ ತಡೆಯೊಡ್ಡುವುದು, ದಾಖಲೆಗಳನ್ನು ಬಿಡುಗಡೆ ಮಾಡೋದು ಎಲ್ಲವೂ ಆಯಿತು. ಕಡೆಗೆ ಸರ್ಕಾರ ಜಿಲ್ಲಾಧಿಕಾರಿಗಳ ಜನಸಂಪರ್ಕ ಸಭೆಯನ್ನೇ ರದ್ದು ಮಾಡಿತು. ತಮ್ಮ ಕೆಲಸಗಳಿಗೆ ಅಡ್ಡಿಪಡಿಸುವ ಜನಪ್ರತಿನಿಧಿಗಳ ನಡೆಯಿಂದ ಕೊಂಚವೂ ವಿಚಲಿತರಾಗದ ರೋಹಿಣಿ, ಮೈಸೂರಿನಲ್ಲಿ ಲಸಿಕೆ ಕಾರ್ಯ ಚುರುಕಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದ್ರು. ಪರಿಣಾಮ ಇಡೀ ರಾಜ್ಯದಲ್ಲಿಯೇ ಮೈಸೂರು ಅತಿಹೆಚ್ಚು ಲಸಿಕೆ ನೀಡಿದ ಜಿಲ್ಲೆಯಾಗಿ ಹೊರಹೊಮ್ಮಿತು. ಲಸಿಕೆ ನೀಡಿಕೆಯಲ್ಲಿ ಜಿಲ್ಲೆಗಳಿಗೆ ನೀಡಿದ್ದ ಗುರಿಯನ್ನು ಶೇಕಡಾ ೮೦ರಷ್ಟು ತಲುಪುವಲ್ಲಿ ಸಿಂಧೂರಿ ಸಾಕಷ್ಟು ಶ್ರಮ ವಹಿಸಿದ್ದರು.
ಆದ್ರೆ ಪ್ರತಿ ಹಂತದಲ್ಲಿಯೂ ರೋಹಿಣಿ ಕಾರ್ಯವೈಖರಿ ಟೀಕಿಸುತ್ತಿದ್ದವರಿಗೆ ಮಾತ್ರ ಇದ್ಯಾವುದೂ ಗೊತ್ತಾಗಲೇ ಇಲ್ಲ. ಸರಿಯಾಗಿ ಮಾರ್ಗಸೂಚಿ ಪಾಲನೆ ಮಾಡದ ಸ್ಟೆಪ್‌ಡೌನ್ ಆಸ್ಪತ್ರೆಗಳನ್ನು ಹಿಂದೆಮುಂದೆ ನೋಡದೆ ಮುಚ್ಚಿ, ರೋಗಿಗಳಿಂದ ಸುಲಿಗೆ ಮಾಡುತ್ತಿದ್ದ ಆಸ್ಪತ್ರೆಗಳ ವಿರುದ್ಧ ಮೇ ಮೂರನೇ ವಾರದಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದು ಕೆಲವರ ನಿದ್ದೆಗೆಡಿಸಿತು. ಸ್ಟೆಪ್‌ಡೌನ್ ಆಸ್ಪತ್ರೆಗಳ ಬದಲಿಗೆ ಮೈಸೂರು ನಗರದಲ್ಲಿ ‘ ಕೊವಿಡ್ ಮಿತ್ರ ‘ ಸೆಂಟರ್‌ಗಳನ್ನು ತೆರೆಯಬೇಕೆಂಬ ಸಿಂಧೂರಿ ಪ್ರಯತ್ನ ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೂಕ್ತ ಫಲ ಕೊಡಲಿಲ್ಲ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮೈಸೂರಿನ ಜನಪ್ರತಿನಿಧಿಗಳಿಂದ ಸೂಕ್ತ ಸಹಕಾರ ಸಿಗದ ಪರಿಣಾಮ ಜಿಲ್ಲೆಯಲ್ಲಿ ಕೊವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಇಂದಿಗೂ ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ.
ಬೆಂಗಳೂರಿನ ನಂತರದಲ್ಲಿ ಅತಿ ಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿರುವ ಜಿಲ್ಲೆ ಮೈಸೂರು. ರಾಜ್ಯದ ೩೩ ಜಿಲ್ಲೆಗಳಲ್ಲಿ ಕೊನೆಯದಾಗಿ ಹಂತಹಂತವಾಗಿ ಅನ್‌ಲಾಕ್ ಆಗುತ್ತಿರುವ ಜಿಲ್ಲೆ ಕೂಡಾ ಮೈಸೂರು. ವ್ಯಾಪಾರವನ್ನೇ ನಂಬಿಕೊಂಡು ಬದುಕುತ್ತಿರುವ ಲಕ್ಷಾಂತರ ಕುಟುಂಬಗಳು ಲಾಕ್‌ಡೌನ್‌ನಿಂದಾಗಿ ಆದಾಯವಿಲ್ಲದೆ ತತ್ತರಿಸಿ ಹೋಗಿವೆ. ಮೈಸೂರು ಜಿಲ್ಲೆ ಅದ್ಯಾವಾಗ ಅನ್‌ಲಾಕ್ ಆಗುತ್ತೋ.. ಜನಜೀವನ ಅದ್ಯಾವಾಗ ಸಹಜ ಸ್ಥಿತಿಗೆ ಮರಳುತ್ತೋ ಗೊತ್ತಿಲ್ಲ.
ಭ್ರಷ್ಟ ರಾಜಕಾರಣಿಗಳ ಚಿತಾವಣೆಯಿಂದ ದಕ್ಷ ಅಧಿಕಾರಿ ಕಳೆದುಕೊಂಡು ಮೈಸೂರು ಬಡವಾಯಿತು. ಇತ್ತ ಅಧಿಕಾರಿ ವರ್ಗಾವಣೆಗೆ ಕಾರಣರಾದವರು ಕೂಡಾ ಕರೋನಾಗೂ ನಮಗೂ ಏನು ಸಂಬಂಧವೇ ಇಲ್ಲ ಎಂಬಂತೆ ನಿಶ್ವಿಂತರಾಗಿದ್ದಾರೆ.
ಆದ್ರೆ ನಿಜವಾಗಿಯೂ ನಷ್ಟವಾಗಿರೋದು ಮೈಸೂರಿನ ಜನರಿಗೆ ಮಾತ್ರ..!
– ಸಾಹಿತ್ಯ ಯಜಮಾನ್, ಹಿರಿಯ ಪತ್ರಕರ್ತರು, ಮೈಸೂರು.
key words : mysore-DC-Rohini-Sindhoori-covid-free-mysore-target-failed-to-reach